ADVERTISEMENT

ಮೈಸೂರು | ‘ಕೃಷ್ಣರಾಜ ಕ್ಷೇತ್ರ: ₹700 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ’

7 ಲಕ್ಷ ಟನ್ ತ್ಯಾಜ್ಯ ವಿಲೇವಾರಿಗೆ ಕ್ರಮ: ಶಾಸಕ ಟಿ.ಎಸ್‌.ಶ್ರೀವತ್ಸ ಮಾಹಿತಿ

​ಪ್ರಜಾವಾಣಿ ವಾರ್ತೆ
Published 14 ಮೇ 2024, 15:20 IST
Last Updated 14 ಮೇ 2024, 15:20 IST
ಟಿ.ಎಸ್.ಶ್ರೀವತ್ಸ
ಟಿ.ಎಸ್.ಶ್ರೀವತ್ಸ   

ಮೈಸೂರು: ‘ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿ ವರ್ಷವಾಗಿದ್ದು, ₹700 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಸೀವೇಜ್‌ ಫಾರಂನ ದಶಕದ ಸಮಸ್ಯೆಯನ್ನು ಇದೇ ವರ್ಷ ಪರಿಹರಿಸುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕ್ಷೇತ್ರದ ವಾರ್ಡ್‌ಗಳಿಗೆ ಪಾದಯಾತ್ರೆ ಮಾಡಿ ಜನರ ಅಹವಾಲು ಸ್ವೀಕರಿಸಿರುವೆ. ಇನ್ನೂ 4 ವಾರ್ಡ್‌ಗಳ ಭೇಟಿ ಬಾಕಿ ಇದೆ. ಸರ್ಕಾರದ ಅನುದಾನದ ಜೊತೆ ಖಾಸಗಿ ಸಹಭಾಗಿತ್ವದಲ್ಲೂ ಯೋಜನೆಗಳ ಅನುಷ್ಠಾನ ನಡೆದಿದೆ’ ಎಂದರು. 

‘ಸೀವೇಜ್‌ ಫಾರಂನ 7 ಲಕ್ಷ ಟನ್‌ ತ್ಯಾಜ್ಯ ವಿಲೇವಾರಿ ಮಾಡಲು ₹60 ಕೋಟಿ ಟೆಂಡರ್‌ ಅಂತಿಮಗೊಂಡಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಕಾಮಗಾರಿ ಚುರುಕುಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘₹50 ಕೋಟಿ ವೆಚ್ಚದಲ್ಲಿ ರಸ್ತೆಗಳ ದುರಸ್ತಿ, ₹4.2 ಕೋಟಿ ವೆಚ್ಚದಲ್ಲಿ ಶಾಲೆಗಳ ನವೀಕರಣ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ₹3 ಕೋಟಿ ವೆಚ್ಚದಲ್ಲಿ ಅಲ್ಪಸಂಖ್ಯಾತರ ಕಾಲೊನಿಗಳ ಅಭಿವೃದ್ಧಿ, ಬೀದಿ ದೀಪದ ವ್ಯವಸ್ಥೆ, ಬಸ್‌ ನಿಲ್ದಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ನಡೆದಿದೆ’ ಎಂದರು.

‘ಚರಂಡಿ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಸುಮಾರು ₹6.8 ಕೋಟಿ ವೆಚ್ಚದಲ್ಲಿ ರಾಮಾನುಜ ರಸ್ತೆ, ಕುವೆಂಪುನಗರದ ಸಂಪಿಗೆ, ಉದಯರವಿ, ಆದಿಚುಂಚನಗಿರಿ, ಅನಿಕೇತನ ರಸ್ತೆ, ಅಶೋಕಪುರಂ, ಜೆ.ಪಿ.ನಗರ, ಅರವಿಂದ ನಗರ, ಅಂಚೆ ಕಾಲೊನಿ, ಕಾರಂಜಿಕೆರೆ ಬಂಡ್‌ ರಸ್ತೆ, ಸಾಯಿ ಬಡಾವಣೆ ಸೇರಿದಂತೆ ರಸ್ತೆಗಳ ಒಳಚರಂಡಿಯನ್ನು ಅಭಿವೃದ್ಧಿ ಪಡಿಸಲಾಗಿದೆ’ ಎಂದು ಹೇಳಿದರು.

‘ಒಳಚರಂಡಿ ಕಾಮಗಾರಿಗಳಿಂದ ಮುಂಗಾರು ಪೂರ್ವ ಮಳೆಯಲ್ಲಿ ಯಾವುದೇ ತಗ್ಗು ಪ್ರದೇಶದಲ್ಲಿ ನೀರು ನಿಂತಿಲ್ಲ. ಪಾದಯಾತ್ರೆಯಿಂದ ಈ ಮಾದರಿಯ ಅನುಕೂಲವಾಗಿದೆ’ ಎಂದು ತಿಳಿಸಿದರು.

‘ಲಲಿತಾದ್ರಿಪುರದಲ್ಲಿ ₹200 ಕೋಟಿ ವೆಚ್ಚದಲ್ಲಿ 1,460 ಗುಂಪು ಮನೆಗಳು ನಿರ್ಮಾಣವಾಗುತ್ತಿದ್ದು, ಕೃಷ್ಣರಾಜ ಕ್ಷೇತ್ರದ 940 ಫಲಾನುಭವಿಗಳಿಗೆ ಮನೆಗಳು ನಿಗದಿಯಾಗಿವೆ’ ಎಂದರು.

ಮಾಜಿ ಮೇಯರ್‌ಗಳಾದ ಸುನಂದಾ ಫಾಲನೇತ್ರ, ಶಿವಕುಮಾರ್, ಮುಖಂಡರಾದ ಗೋಪಾಲರಾಜ್, ಕೇಬಲ್ ಮಹೇಶ್, ಗಿರಿಧರ್, ಜೋಗಿ ಮಂಜು ಹಾಜರಿದ್ದರು.

₹200 ಕೋಟಿ ವೆಚ್ಚದಲ್ಲಿ ಗುಂಪು ಮನೆ ಕ್ಷೇತ್ರದ 940 ಫಲಾನುಭವಿಗಳಿಗೆ ಮನೆ ಒಳಚರಂಡಿ ನಿರ್ಮಾಣ: ತಪ್ಪಿದ ಹಾನಿ

‘ಬೇರೆ ಕ್ಷೇತ್ರಗಳಿಗೆ ಅನುದಾನ: ಆಕ್ಷೇಪ’ ‘ಕೃಷ್ಣರಾಜ ಕ್ಷೇತ್ರಕ್ಕೆ ಮಂಜೂರಾಗಿದ್ದ ₹45 ಕೋಟಿ ಅನುದಾನವನ್ನು ಚಾಮರಾಜ ಹಾಗೂ ನರಸಿಂಹ ರಾಜ ಕ್ಷೇತ್ರಕ್ಕೆ ಈ ಹಿಂದಿನ ಪಾಲಿಕೆ ಆಯುಕ್ತರು ಬಳಕೆ ಮಾಡಿದ್ದು ಅದಕ್ಕೆ ವಿಧಾನಸಭೆಯಲ್ಲೂ ಆಕ್ಷೇಪ ವ್ಯಕ್ತಪಡಿಸಿದ್ದೆ’ ಎಂದು ಶ್ರೀವತ್ಸ ಹೇಳಿದರು. ‘ಗ್ಯಾರಂಟಿ ಯೋಜನೆಗಳಿಂದ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ಅನುದಾನ ಬಿಡುಗಡೆಯಾಗಿಲ್ಲ. ಈ ಹಿಂದಿನ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನದಲ್ಲೇ ಅಭಿವೃದ್ಧಿ ಕಾರ್ಯ ನಡೆದಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ‘ಅಶೋಕಪುರಂನ ವೀಳ್ಯೆದೆಲೆ ಬೆಳೆಗಾರರಿಗೆ ಪರ್ಯಾಯವಾಗಿ 5 ಗುಂಟೆ ಜಮೀನು ನೀಡುವ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದೆ. ಶೀಘ್ರದಲ್ಲೇ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.