ADVERTISEMENT

ಕೆರೆಯ ಹೂಳೆತ್ತಲು ಒತ್ತು ಕೊಡಿ: ಸಚಿವ ಕೆ.ಎಸ್.ಈಶ್ವರಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಮೇ 2020, 13:24 IST
Last Updated 21 ಮೇ 2020, 13:24 IST
ಸಚಿವರಾದ ಕೆ.ಎಸ್‌.ಈಶ್ವರಪ್ಪ, ಎಸ್.ಟಿ.ಸೋಮಶೇಖರ್‌ ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದರು
ಸಚಿವರಾದ ಕೆ.ಎಸ್‌.ಈಶ್ವರಪ್ಪ, ಎಸ್.ಟಿ.ಸೋಮಶೇಖರ್‌ ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದರು   

ಮೈಸೂರು: ‘ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೊಳಪಡುವ ನೀರಿಲ್ಲದ ಕೆರೆಗಳ ಹೂಳೆತ್ತಲು ಮೊದಲ ಆದ್ಯತೆ ಕೊಡಿ. ನೀರಿದ್ದರೂ ಅದನ್ನು ಖಾಲಿ ಮಾಡಿ ಹೂಳೆತ್ತಲು ಸಾಧ್ಯವೇ ಎಂಬುದನ್ನೊಮ್ಮೆ ಪರಿಶೀಲಿಸಿ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.

‘ಪ್ರಧಾನಿ ಮೋದಿ ನರೇಗಾಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ₹ 40 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ. ಈ ಅನುದಾನದಲ್ಲಿ ಅಂತರ್ಜಲ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ’ ಎಂದು ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ತಿಳಿಸಿದರು.

‘ಮೈಸೂರು ಜಿಲ್ಲೆಯಲ್ಲಿ 400 ಕೆರೆಗಳ ಹೂಳೆತ್ತಲು ಕ್ರಿಯಾಯೋಜನೆ ರೂಪಿಸಿದ್ದೀರಿ. ಈ ಕೆರೆಗಳ ಹೂಳೆತ್ತುವ ಜತೆಯಲ್ಲೇ ಸಾಮಾಜಿಕ ಅರಣ್ಯ ಇಲಾಖೆಯ ಸಹಕಾರದಿಂದ ಸುತ್ತಲೂ ಗಿಡಗಳನ್ನು ನೆಡಿ. ಈ ಗಿಡಗಳು 2 ವರ್ಷದ್ದಿರಲಿ. ಇವುಗಳಿಗೆ ರಕ್ಷಾ ಕವಚವನ್ನು ಒದಗಿಸಿ. ಗಿಡಗಳು ಸಿಗದಿದ್ದರೇ, ಖಾಸಗಿ ನರ್ಸರಿಗಳಲ್ಲಿ ಖರೀದಿಸಿ’ ಎಂದು ಸಿಇಒಗೆ ಸೂಚಿಸಿದರು.

ADVERTISEMENT

‘ಕೆಲ ಕೆರೆಗಳ ಹೂಳೆತ್ತಲು ಯಂತ್ರ ಬಳಕೆಗೆ ಅವಕಾಶ ನೀಡಲಾಗಿದೆ. ಇಲಾಖೆಯ ಸಂಬಂಧಿಸಿದ ಅಧಿಕಾರಿಯೊಟ್ಟಿಗೆ ಚರ್ಚಿಸಿ. ಮೈಸೂರು ಜಿಲ್ಲೆಗೆ ಎಷ್ಟು ಹಣ ನಿಗದಿಯಾಗಿದೆ ಎಂಬುದನ್ನು ಗೊತ್ತು ಪಡಿಸಿಕೊಂಡು ಇಲ್ಲಿಯೂ ಕೆರೆಗಳ ಹೂಳೆತ್ತಿ. ಎರಡ್ಮೂರು ದಿನದಲ್ಲಿ ಈ ಕಾಮಗಾರಿ ಮುಗಿಯಲಿದೆ’ ಎಂದು ಸಚಿವರು ಹೇಳಿದರು.

ಘನ ತ್ಯಾಜ್ಯ ಘಟಕ: ‘ಗ್ರಾಮಗಳಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಅನುಮತಿ ಪಡೆದು ಎರಡು ವರ್ಷವಾದರೂ ಕೇವಲ ಎರಡು ಘಟಕವನ್ನಷ್ಟೇ ನಿರ್ಮಿಸಲಾಗಿದೆ. ₹ 20 ಲಕ್ಷ ವೆಚ್ಚದ ಘಟಕ ನಿರ್ಮಾಣದಲ್ಲಿ ವಿಳಂಬ ನೀತಿ ಅನುಸರಿಸಲಾಗಿದೆ’ ಎಂದು ಸಚಿವ ಈಶ್ವರಪ್ಪ ಸಂಬಂಧಿಸಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಅಧಿಕಾರಿ ಸಮರ್ಪಕ ಉತ್ತರ ನೀಡದಿದ್ದಾಗ, ಆರ್‌ಡಿಪಿಆರ್‌ ಆಯುಕ್ತ ಡಾ.ಆರ್.ವಿಶಾಲ್‌ ಮಧ್ಯ ಪ್ರವೇಶಿಸಿ, ‘ಮೈಸೂರು ಜಿಲ್ಲೆಯಲ್ಲಿ 43 ಘಟಕ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. 2ನೇ ಹಂತದಲ್ಲಿ 6 ಘಟಕಗಳಿವೆ. ಇವುಗಳ ನಿರ್ಮಾಣಕ್ಕೆ ಹಣಕಾಸಿನ ಕೊರತೆಯಿಲ್ಲ. ಇನ್ಮುಂದೆ ಕಾಮಗಾರಿಗೆ ವೇಗ ನೀಡಲಾಗುವುದು’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್‌.ಎ.ರಾಮದಾಸ್, ಎಲ್‌.ನಾಗೇಂದ್ರ, ಟಿ.ಅಶ್ವಿನ್‌ಕುಮಾರ್‌, ಕೆ.ಮಹದೇವ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿ.ಪಂ. ಸಿಇಒ ಪ್ರಶಾಂತ್‌ಕುಮಾರ್ ಮಿಶ್ರಾ, ಆರ್‌ಡಿಪಿಆರ್‌ನ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

ನೀರು ಕೊಡದಿದ್ದರೇ, ಇಲಾಖೆಯಿದ್ದೇನು ಪ್ರಯೋಜನ ?

‘ನಮ್ಮ ಇಲಾಖೆ ಇರೋದೇ ಗ್ರಾಮೀಣ ಜನರಿಗೆ ಕುಡಿಯುವ ನೀರು ಕೊಡೋಕೆ. ಈ ಕೆಲಸವನ್ನೇ ಮಾಡದಿದ್ದರೇ ಇಲಾಖೆ ಇದ್ದೇನು ಪ್ರಯೋಜನ ?’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ನಂಜನಗೂಡು ತಾಲ್ಲೂಕಿನ ದೊಡ್ಡ ಕವಲಂದೆ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಗೆ 56 ಗ್ರಾಮಗಳು ಬರಲಿವೆ. ಐದು ವರ್ಷದಿಂದ ಇಲ್ಲಿನ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಸಿಕ್ಕಿಲ್ಲ. ನೀರಿಗಾಗಿ ಅಲ್ಲಿನ ಜನ ಇನ್ನೂ ಎಷ್ಟು ದಿನ ಕಾಯಬೇಕು. ನೀರು ಕೊಡದೆ ಆ ಭಾಗದ ಹಳ್ಳಿಗಳಿಗೆ ಶಾಸಕರು ಹೋಗಲಾಗುತ್ತದೆಯಾ ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಂಬಂಧಿಸಿದ ಕಮಿಷನರ್ ಇಲ್ಲಿಯೇ ಇದ್ದಾರೆ. ಅವರೊಟ್ಟಿಗೆ ಮಾತನಾಡಿ. ನಾಳೆಯೇ ಸಭೆ ನಡೆಸಿ. ಸೋಮವಾರದೊಳಗೆ ಅಂತಿಮ ತೀರ್ಮಾನ ತೆಗೆದುಕೊಂಡು ಮುಂದಿನ ವರ್ಷದೊಳಗೆ ಈ ಗ್ರಾಮಗಳಿಗೆ ನೀರು ಪೂರೈಸಿ’ ಎಂದು ತಾಕೀತು ಮಾಡಿದರು. ಶಾಸಕ ಹರ್ಷವರ್ಧನ್ ಸಮಸ್ಯೆಯ ಚಿತ್ರಣವನ್ನು ಸಚಿವರಿಗೆ ತಿಳಿಸಿದರು.

ಕಪ್ಪು ಪಟ್ಟಿಗೆ ಸೇರಿಸಿ; ಕ್ರಿಮಿನಲ್ ಪ್ರಕರಣ ದಾಖಲಿಸಿ
‘ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯ ಹೊಣೆ ಹೊತ್ತವರು ನಿಭಾಯಿಸದೆ, ದುರಸ್ತಿ ಮಾಡದೆ ಪಲಾಯನಗೈದಿದ್ದರೇ, ಅಂತಹವರನ್ನು ಕಪ್ಪು ಪಟ್ಟಿಗೆ ಸೇರಿಸಿ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ’ ಎಂದು ಈಶ್ವರಪ್ಪ ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

‘ಸಭೆಯಲ್ಲಿ ಸುಳ್ಳಿನ ಅಂಕಿ–ಅಂಶ ಕೊಡುವುದನ್ನು ಬಿಟ್ಟು ಬಿಡಿ. ವಾಸ್ತವಾಂಶದ ಚಿತ್ರಣ ನೀಡಿ. ಪರಿಹಾರ ಕಂಡುಕೊಳ್ಳೋಣ. ಆಯುಕ್ತರು ನೈಜ ಮಾಹಿತಿ ಸಂಗ್ರಹಿಸುತ್ತಿದ್ದಾರೆ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.