ಮೈಸೂರು: ‘ಹಳೆ ಪೊಲೀಸ್ ಕಮಿಷನರ್ ಕಚೇರಿ ಕಟ್ಟಡವನ್ನು ರಾಜ್ಯ ಕೈಗಾರಿಕಾ ಭದ್ರತಾ ಪಡೆಗೆ (ಕೆಎಸ್‌ಐಸಿಎಫ್) ತಾತ್ಕಾಲಿಕವಾಗಿ ನೀಡಲು ಜುಲೈ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದರು. ಜುಲೈ 22ರಂದು ಪಡೆಗೆ ನೀಡುವಂತೆ ಕೋರಿ ಪತ್ರ ಬರೆದಿದ್ದು, ಸರ್ಕಾರವು ಸ್ಪಂದಿಸಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಆ.4ರಂದು ಪೊಲೀಸ್ ಮಹಾ ನಿರ್ದೇಶಕರು ಆದೇಶ ಹೊರಡಿಸಿದ್ದು, ಆ.7ರಿಂದಲೇ ಕಚೇರಿಯು ಕಟ್ಟಡದಲ್ಲಿ ಆರಂಭವಾಗಲಿದೆ’ ಎಂದರು.
‘ರಾಜ್ಯದಲ್ಲಿ ಮೈಸೂರು ಭಾಗದಲ್ಲಿನ ಅಣೆಕಟ್ಟುಗಳು, ವಿಮಾನ ನಿಲ್ದಾಣ, ಪೊಲೀಸ್ ಅಕಾಡೆಮಿ, ಕಾರಾಗೃಹ, ವಿದ್ಯುತ್ ಸ್ಥಾವರಗಳು, ಕೈಗಾರಿಕೆಗಳನ್ನು ನೋಡಿಕೊಳ್ಳಲು ಬೆಟಾಲಿಯನ್ ಅನ್ನು ನಿಯೋಜಿಸಲಾಗಿತ್ತು. ಆದರೆ, ಸ್ವಂತ ಕಟ್ಟಡ ಇರಲಿಲ್ಲ. ಶಿವಮೊಗ್ಗದಿಂದಲೇ ಕಾರ್ಯಾಚರಿಸುತ್ತಿತ್ತು. ನಾಲ್ಕನೇ ಬೆಟಾಲಿಯನ್ ಮೈಸೂರಿನಿಂದಲೇ ಕಾರ್ಯಾಚರಿಸಲಿದ್ದು, 1,192 ಹುದ್ದೆಗಳಿವೆ. 8 ಜಿಲ್ಲೆಗಳು ಈ ವ್ಯಾಪ್ತಿಯಲ್ಲಿ ಬರಲಿವೆ’ ಎಂದು ತಿಳಿಸಿದರು.
ಸುಳ್ಳೇ ಬಿಜೆಪಿಗರ ಮನೆ ದೇವರು: ‘ಕೆಆರ್‌ಎಸ್ ನಿರ್ಮಾಣ ಕುರಿತು ಸಚಿವ ಡಾ.ಎಚ್.ಸಿ.ಮಹದೇವಪ್ಪ ನೀಡಿರುವ ಹೇಳಿಕೆಯಲ್ಲಿ ಸತ್ಯವೇ ಇದೆ. ಬೇಕಿದ್ದರೆ ಅಣೆಕಟ್ಟೆಯ ಪ್ರವೇಶ ದ್ವಾರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಹಾಕಿಸಿರುವ ಶಿಲಾಶಾಸನ ನೋಡಬಹುದು. 6 ಟಿಎಂಸಿ ಸಾಮರ್ಥ್ಯದ ಬ್ಯಾರೇಜ್ ಅನ್ನು ಟಿಪ್ಪು ಕಟ್ಟಿಸಿ, ನೀರಾವರಿ ಒದಗಿಸಿದ್ದ ಅದೇ ಜಾಗದಲ್ಲಿ ನಾಲ್ವಡಿ ಅಣೆಕಟ್ಟೆ ನಿರ್ಮಿಸಿದ್ದಾರೆ. ಇತಿಹಾಸ ತಿರುಚುವ ಕೆಲಸವನ್ನು ಮಾಡುತ್ತಿರುವುದು ಬಿಜೆಪಿಗರು. ಅವರಿಗೆ ಸುಳ್ಳೇ ಮನೆದೇವರು’ ಎಂದು ಹೇಳಿದರು.
‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹಾದಿಯಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ಅವರಿಗಿಂತಲೂ ದೊಡ್ಡವರೆಂದು ಹೇಳಿಲ್ಲ. ಉಂಡವಾಡಿ ಕುಡಿಯುವ ನೀರು ಯೋಜನೆ, 12 ಆಸ್ಪತ್ರೆಗಳನ್ನು ನಿರ್ಮಿಸಿದ್ದು, ರಸ್ತೆಗಳು, ಶಾಲಾ– ಕಾಲೇಜುಗಳನ್ನು ಆರಂಭಿಸಿದ್ದಾರೆ. ನಾಲ್ವಡಿ ನಂತರ ಮೈಸೂರು ನಗರಕ್ಕೆ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದು ಸಿದ್ದರಾಮಯ್ಯ. ಅವರ ಅವಧಿಯಲ್ಲಿ ₹ 3,800 ಕೋಟಿ ಯೋಜನೆಗಳು ಅನುಷ್ಠಾನಗೊಂಡಿವೆ. ಮಾಡಿರುವುದಕ್ಕೆ ಹೇಳಿಕೊಳ್ಳಲು ಅಂಜಿಕೆಯಿಲ್ಲ’ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.