ADVERTISEMENT

ಕರ್ನಾಟಕ ರಾಜ್ಯ ಮುಕ್ತ ವಿ.ವಿ 21ನೇ ಘಟಿಕೋತ್ಸವ: ವಯಸ್ಸು ಮೀರಿದ ‘ಮುಕ್ತ ಓದು’

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 5:44 IST
Last Updated 1 ಫೆಬ್ರುವರಿ 2026, 5:44 IST
ಗೀತಾ ಪ್ರಸನ್ನ
ಗೀತಾ ಪ್ರಸನ್ನ   

ಮೈಸೂರು: ಒತ್ತಡದ ನಡುವೆಯೂ ಓದು ಮುಂದುವರಿಸಿ ಪಿಎಚ್‌ಡಿ ಪಡೆದ ಪೊಲೀಸ್ ಅಧಿಕಾರಿ, ಸೇವಾ ನಿವೃತ್ತಿ ನಂತರ ಸ್ನಾತಕೋತ್ತರ ಪದವಿ ಪಡೆಯುವ ಜೊತೆಗೆ ನಗದು ಬಹುಮಾನವನ್ನೂ ಪಡೆದ ಹಿರಿಯ ನಾಗರಿಕ.

ಕೆಎಸ್‌ಒಯುನಲ್ಲಿ ನಡೆದ 21ನೇ ಘಟಿಕೋತ್ಸವವು ಇಂತಹ ಹಲವು ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯಿತು. ಬೇರೆ ಬೇರೆ ಕಾರಣಕ್ಕೆ ಅರ್ಧಕ್ಕೆ ಕಾಲೇಜು ತೊರೆದರೂ ಓದುವ ಛಲ ಬಿಡದೇ ‘ಮುಕ್ತ ಕಲಿಕೆ’ ಮೂಲಕ ಪದವಿಯ ಕನಸು ಸಾಕಾರಗೊಳಿಸಿಕೊಂಡ ಸಾವಿರಾರು ಮಂದಿ ಬೀಗುತ್ತಾ ಮುನ್ನಡೆದರು. ಕೆಲವರು ದಶಕದ ಬಳಿಕ ಪದವಿ ಪ್ರಮಾಣಪತ್ರ ಸಿಕ್ಕಿದ್ದಕ್ಕೆ ಖುಷಿಯಾದರು.

ಇಡೀ ಘಟಿಕೋತ್ಸವ ಭವನ ವಿವಿಧ ವಯೋಮಾನದ ವಿದ್ಯಾರ್ಥಿಗಳಿಂದ ತುಂಬಿತ್ತು. ಯುವಜನರ ಜೊತೆಗೆ ನಡು ವಯಸ್ಸಿನ, ಇಳಿವಯಸ್ಸಿನ ಹಿರಿಯರೂ ಪದವಿ ಪಡೆದು ಸಂಭ್ರಮಿಸಿದರು. ಮೂರು ಆವೃತ್ತಿಗಳಿಂದ ಒಟ್ಟಾರೆ 41,206 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಹಲವು ವಿಶೇಷ ವ್ಯಕ್ತಿತ್ವಗಳು ಘಟಿಕೋತ್ಸವದಲ್ಲಿ ಗಮನ ಸೆಳೆದವು.

ADVERTISEMENT

ದೇವೇಗೌಡರೇ ಪ್ರೇರಣೆ: ಮೂಲತಃ ಶಿವಮೊಗ್ಗ ಜಿಲ್ಲೆಯ ತಾಳಗುಪ್ಪದವರಾದ, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಲಕ್ಷ್ಮಿನಾರಾಯಣ್ 66ನೇ ವಯಸ್ಸಿನಲ್ಲಿ ಸಂಸ್ಕೃತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ 6ನೇ ರ್‍ಯಾಂಕ್‌ ಹಾಗೂ ನಗದು ಪುರಸ್ಕಾರವನ್ನು ಪಡೆದು ಸಂಭ್ರಮಿಸಿದರು.

‘1971ರಲ್ಲಿ ಪದವಿ ಪಡೆದು ಕೇಂದ್ರ ಸರ್ಕಾರದ ಜಿಎಸ್‌ಟಿ ಇಲಾಖೆಯಲ್ಲಿ ನೌಕರನಾಗಿ ನಿವೃತ್ತಿ ಹೊಂದಿದ್ದೇನೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಬದುಕಿನ ಸಂಧ್ಯಾಕಾಲದಲ್ಲಿಯೂ ರಾಜಕೀಯದಲ್ಲಿ ಉತ್ಸಾಹದಿಂದ ತೊಡಗಿರುವಾಗ ನಾನೇಕೆ ಏನಾದರೂ ಮಾಡಬಾರದು ಎನ್ನಿಸಿತು. ಹೀಗಾಗಿ ಎಂ.ಎ. ಪದವಿಗೆ ಸೇರಿಕೊಂಡೆ. ಈಗ ರ್‍ಯಾಂಕ್‌ ಸಹ ಬಂದಿದ್ದಕ್ಕೆ ಖುಷಿಯಾಗಿದೆ. ಎನ್‌ಟಿಎ ಪರೀಕ್ಷೆ ಕೂಡ ಕಟ್ಟಿದ್ದು, ಅದನ್ನೂ ಪಾಸ್ ಮಾಡುವ ಕನಸು ನನ್ನದು’ ಎಂದು ಅವರು ಖುಷಿ ಹಂಚಿಕೊಂಡರು.

ಅಧ್ಯಯನಶೀಲ ಅಧಿಕಾರಿ: ಸದ್ಯ ಬೆಂಗಳೂರಿನಲ್ಲಿರುವ ಐಪಿಎಸ್‌ ಅಧಿಕಾರಿ ಗೀತಾ ಪ್ರಸನ್ನ ಉದ್ಯೋಗದ ನಡುವೆಯೂ ‘ಮೈಸೂರು ಜಿಲ್ಲಾ ಪೊಲೀಸ್-ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದಲ್ಲಿ ಮಹಾಪ್ರಬಂಧ ಮಂಡಿಸಿದ್ದು, ಶನಿವಾರ ರಾಜ್ಯಪಾಲರಿಂದ ಪಿಎಚ್‌ಡಿ ಪ್ರಮಾಣಪತ್ರ ಪಡೆದರು.

‘ಕನ್ನಡದಲ್ಲಿ ಎಂ.ಎ. ಮಾಡಿದ್ದು, ಆ ವಿಷಯದಲ್ಲೇ ಪಿಎಚ್.ಡಿ ಪದವಿ ಪಡೆಯುವ ಆಸೆ ಇತ್ತು. ಹಿಂದೆ ಮೈಸೂರಿನಲ್ಲೂ ಕೆಲಸ ಮಾಡಿದ್ದು ಈ ಊರಿನ ಬಗ್ಗೆ ಅಪಾರ ಪ್ರೀತಿ. ಪ್ರೊ.ರಂಗಸ್ವಾಮಿ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪಡೆದಿದ್ದೇನೆ. ಇದಕ್ಕೆ ಕುಟುಂಬದ ಸಹಕಾರ–ಪ್ರೀತಿಯೂ ಕಾರಣ. ಕಲಿಯುವ ಛಲ–ಆಸಕ್ತಿ ಇದ್ದರೆ ಯಾವುದೂ ಅಡ್ಡಿ ಆಗಲಾರದು’ ಎಂದು ಗೀತಾ ಸಂಭ್ರಮ ಹಂಚಿಕೊಂಡರು.

ಸಿ.ಟಿ. ರವಿಗೆ ಪಿಎಚ್.ಡಿ: ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ರಾಜಕೀಯ ಚಟುವಟಿಕೆಗಳ ನಡುವೆಯೂ ಅಧ್ಯಯನಶೀಲರಾಗಿದ್ದು, ಶನಿವಾರ ರಾಜ್ಯಪಾಲರಿಂದ ಪಿಎಚ್‌ಡಿ ಪ್ರಮಾಣಪತ್ರ ಪಡೆದರು.

ಎನ್‌ಡಿಎ ಮತ್ತು ಯುಪಿಎ ಆಡಳಿತಗಳ ಕುರಿತ ತುಲನಾತ್ಮಕ ಅಧ್ಯಯನದ ಬಗ್ಗೆ ಅವರು ಮಹಾಪ್ರಬಂಧ ಸಲ್ಲಿಸಿದ್ದು, ರಾಜಕೀಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಸುರೇಶ್ ಮಾರ್ಗದರ್ಶನ ನೀಡಿದ್ದರು. ‘ಓದುವುದು ನನ್ನ ಅಭ್ಯಾಸ. ನನ್ನ ಕಾರ್ಯಕ್ಷೇತ್ರವನ್ನೇ ಅಧ್ಯಯನಕ್ಕೆ ಆಯ್ದುಕೊಂಡ ಕಾರಣ ಸಂಶೋಧನೆ ಕಷ್ಟವಾಗಲಿಲ್ಲ. ನಾಲ್ಕು ವರ್ಷಗಳ ಸಮಯ ತೆಗೆದುಕೊಂಡು ಸಂಶೋಧನೆ ಪೂರ್ಣಗೊಳಿಸಿದ್ದೇನೆ’ ಎಂದು ರವಿ ಸಂತಸ ವ್ಯಕ್ತಪಡಿಸಿದರು.

2021-22ರಿಂದ 2023-24ರವರೆಗೆ 3987 ಪುರುಷರು ಹಾಗೂ 6704 ಮಹಿಳೆಯರು ಸೇರಿದಂತೆ ಒಟ್ಟು 10,691 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಯಿತು. ಯುಜಿಸಿ ಮಾನ್ಯತೆ ಸಿಗದ ಕಾರಣಕ್ಕಾಗಿ 2013-14, 2014-15ನೇ ಸಾಲಿನಲ್ಲಿ ಘಟಿಕೋತ್ಸವ ನಡೆದಿರಲಿಲ್ಲ. ಈ ಎರಡೂ ಸಾಲಿನಲ್ಲಿ ಪಾಸಾದ ಒಟ್ಟು 30,415 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

68 ಅಭ್ಯರ್ಥಿಗಳಿಗೆ ಪಿಎಚ್.ಡಿ, 65 ಚಿನ್ನದ ಪದಕ ಹಾಗೂ 62 ನಗದು ಬಹುಮಾನ ನೀಡಲಾಯಿತು. ಪಿಎಚ್.ಡಿ ಹಾಗೂ ಪದವಿ ಪಡೆದವರಲ್ಲಿ ಮಹಿಳೆಯರೇ ಹೆಚ್ಚಿದ್ದರು.

ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಭವನದಲ್ಲಿ ಶನಿವಾರ ನಡೆದ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವದಲ್ಲಿ 8 ಸಾಧಕರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಮುಕ್ತ ವಿ.ವಿ. ಕುಲಪತಿ ಪ್ರೊ. ಶರಣಪ್ಪ ಹಲಸೆ ಕುಲಸಚಿವರಾದ ಪ್ರೊ. ಎಸ್‌.ಕೆ. ನವೀನ್‌ಕುಮಾರ್ ಸಿ.ಎಸ್. ಆನಂದ್ ಕುಮಾರ್ ಜೊತೆಗಿದ್ದರು

ಎಂಟು ಮಂದಿಗೆ ಗೌರವ ಡಾಕ್ಟರೇಟ್‌

ಕೆಎಸ್‌ಒಯು 21ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ಎಂಟು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಬೆಂಗಳೂರಿನ ಹರ್ಷ ಸಮೂಹ ಸಂಸ್ಥೆ ಅಧ್ಯಕ್ಷ ಎಸ್‌.ಶಿವಕುಮಾರ್‌ ತುಮಕೂರಿನ ಕಿಡ್ಸ್ ಇಂಟರ್‌ನ್ಯಾಷನಲ್ ಸ್ಕೂಲ್ ಸಂಸ್ಥಾಪಕ ಮತ್ತು ಕಾರ್ಯದರ್ಶಿ ಸತೀಶ್ ಕುಮಾರ್ ಡಿ.ಕೆಗ್ಗೆರೆ ಮೈಸೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದ ಲಕ್ಷ್ಮೀ ಮೈಸೂರಿನ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಭಾಷ್ಯಂ ಸ್ವಾಮೀಜಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಲಿಂಗರಾಜು ಹಾಸನದ ಜೋತಿಷಶಾಸ್ತ್ರಜ್ಞ ಬಿ.ಎಸ್.ನಾಗಭೂಷಣ ಅಟ್ರಿ ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್ ಬೀದರ್‌ನ ಐಟಿಐ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶಿವಶಂಕರ ಟೊಕರೆ ಅವರಿಗೆ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.