ADVERTISEMENT

ಮುಷ್ಕರದ ನಡುವೆ ಸಂಚಾರ ಅಭಾದಿತ

ಖಾಸಗ ಬಸ್‌ಗಳ ನಿಯೋಜನೆ, ಶೇ 45ರಷ್ಟು ಕೆಎಸ್‌ಆರ್‌ಟಿಸಿ ಬಸ್‌ ಸೇವೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 3:24 IST
Last Updated 6 ಆಗಸ್ಟ್ 2025, 3:24 IST
ಸಾರಿಗೆ ನೌಕರರ ಮುಷ್ಕರ ಕಾರಣ ಮಂಗಳವಾರ ಮೈಸೂರಿನ ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳು ಕಾರ್ಯಾಚರಿಸಿದವು
ಸಾರಿಗೆ ನೌಕರರ ಮುಷ್ಕರ ಕಾರಣ ಮಂಗಳವಾರ ಮೈಸೂರಿನ ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳು ಕಾರ್ಯಾಚರಿಸಿದವು   

ಮೈಸೂರು: ವೇತನ ಪರಿಷ್ಕರಣೆ, ಹಿಂಬಾಕಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಎಸ್ಆರ್‌ಟಿಸಿ ಕಾರ್ಮಿಕ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.  

ಸಾರಿಗೆ ನೌಕರರಲ್ಲಿ ಹಲವರು ಗೈರಾಗಿದ್ದರಿಂದ ನಗರ ಬಸ್ ಸಂಚಾರ ಭಾಗಶಃ ಸ್ತಬ್ಧವಾಗಿದ್ದರೆ, ಗ್ರಾಮಾಂತರ ಭಾಗದಲ್ಲಿ ಅರ್ಧದಷ್ಟು ಬಸ್‌ಗಳು ಕಾರ್ಯಾಚರಿಸಿದವು. ಖಾಸಗಿ ಬಸ್‌ಗಳನ್ನು ನಗರ ಬಸ್‌ ನಿಲ್ದಾಣ ಹಾಗೂ ಸಬ್ ಅರ್ಬನ್ ಬಸ್ ನಿಲ್ದಾಣದಲ್ಲಿ ನಿಯೋಜಿಸಿ, ಸಂಚಾರ ಸೇವೆ ಸಿಗುವಂತೆ ಮಾಡಲಾಗಿತ್ತು. 

ಬೆಂಗಳೂರು- ಮೈಸೂರು ಸಂಚಾರಕ್ಕೆ ಯಾವುದೇ ತೊಂದರೆ ಆಗಲಿಲ್ಲ. ಎಲೆಕ್ಟ್ರಿಕ್ ಬಸ್‌ಗಳು ಎಂದಿನಂತೆ ಸೇವೆ ಮುಂದುವರಿಸಿದವು. ಮುಷ್ಕರ ನಡೆಯುವುದಾಗಿ ತಿಳಿದಿದ್ದ ನಾಗರಿಕರೂ ನಿಲ್ದಾಣದತ್ತ ಸುಳಿಯಲಿಲ್ಲ. 

ADVERTISEMENT

ಬೆಳಿಗ್ಗೆ ನಗರ ಬಸ್‌ ನಿಲ್ದಾಣವು ಬಿಕೋ ಎನ್ನುತ್ತಿತ್ತು. ಕೆಲವಷ್ಟೇ ಖಾಸಗಿ ಬಸ್‌ಗಳು ಇದ್ದವು. ಅರವಿಂದ ನಗರ, ಸಾತಗಳ್ಳಿ, ಇಲವಾಲ ಡಿಪೊ, ಬನ್ನಿಮಂಟಪದ ಡಿಪೊಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಂತಿದ್ದವು. ಬೆಂಗಳೂರಿನಿಂದ ರೈಲಿನಲ್ಲಿ ಬಂದವರು, ಬಸ್‌ ಇಲ್ಲದೇ ಊರುಗಳಿಗೆ ತೆರಳಲು ಪರದಾಡಿದರು. 

ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಯಾವ ಬಸ್‌ ಎಲ್ಲಿಗೆ ಹೋಗುತ್ತದೆಂದು ಪ್ರಯಾಣಿಕರಿಗೆ ಗೊತ್ತಾಗದ್ದರಿಂದ ತೊಂದರೆ ಅನುಭವಿಸಿದರು. ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಗೆ ಹೋಗಲು ಬಸ್‌ ಇಲ್ಲದ್ದರಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿಯ ನಿವಾಸಿ ಕೃಷ್ಣಪ್ಪ ಮಾಧ್ಯಮಗಳೊಂದಿಗೆ ಅಳಲು ತೋಡಿಕೊಂಡರು.

‘ಬಾವನ ಸಾವಿಗೆ ಹೋಗಲು ಬೆಳಿಗ್ಗೆ 6 ಗಂಟೆಗೆ ಬಂದು 10 ಗಂಟೆವರೆಗೆ ಕಾದರೂ ಬಸ್‌ ಸಿಕ್ಕಿರಲಿಲ್ಲ’ ಎಂದು ಅವರು ಹೇಳಿದರು. 

‘ಚಾಮುಂಡಿ ಬೆಟ್ಟಕ್ಕೆಂದು ಬೆಂಗಳೂರಿನಿಂದ ರೈಲಿನಲ್ಲಿ ಬಂದೆ. ಯಾವುದೇ ಬಸ್‌ ಇರಲಿಲ್ಲ. ಆಟೊದಲ್ಲಿ ನಗರ ಬಸ್‌ ನಿಲ್ದಾಣಕ್ಕೆ ಬಂದು, ಖಾಸಗಿ ಬಸ್‌ನಲ್ಲಿ ಬೆಟ್ಟಕ್ಕೆ ಹೋಗಿದ್ದೆ. ₹ 30 ಬದಲು ₹ 50 ತೆಗೆದುಕೊಂಡರು’ ಎಂದು ಬೆಂಗಳೂರಿನ ನಾಗರಬಾವಿಯ ಗೋಪಿನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಖಾಸಗಿ ಬಸ್‌ಗಳಿಗೆ ಹತ್ತದ ಜನರು:

ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಅರ್ಧದಷ್ಟು ಬಸ್‌ಗಳು ಕಾರ್ಯಾಚರಿಸಿದ್ದರಿಂದ ಖಾಸಗಿ ಬಸ್‌ಗಳು ಬಂದರೂ ಎಲ್ಲರೂ ‘ಶಕ್ತಿ ಯೋಜನೆ’ ಯ ಉಚಿತ ಪ್ರಯಾಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದರು. ಅದರಿಂದ ಹಲವು ಖಾಸಗಿ ಬಸ್‌ಗಳು ಮಧ್ಯಾಹ್ನದವರೆಗೂ ಕಾದು, ಪ್ರಯಾಣಿಕರಿಲ್ಲದೇ ವಾಪಸ್‌ ಆದವು.  

‘ಆರ್‌ಟಿಒ ಅಧಿಕಾರಿಗಳು ಹೇಳಿದ್ದರಿಂದ ಬೆಳಿಗ್ಗೆಯೇ ಬಸ್‌ ನಿಲ್ದಾಣಕ್ಕೆ ಬಂದು ಕಾದೆವು. ಯಾವ ಮಾರ್ಗದಲ್ಲಿ ತೆರಳಲೂ ಅನುವು ಮಾಡಿಕೊಟ್ಟಿಲ್ಲ. ಉಚಿತ ಬಸ್‌ ಪ್ರಯಾಣ ಮಾಡಲೆಂದು ಹತ್ತಿದವರು ಇಳಿದು ಬಿಟ್ಟರು’ ಎಂದು ಖಾಸಗಿ ಬಸ್‌ ಮಾಲೀಕ ಮಂಜು ಬೇಸರ ವ್ಯಕ್ತಪಡಿಸಿದರು.   

‘ಸಂಘಟನೆಗಳು ಮುಷ್ಕರವನ್ನು ವಾಪಸ್‌ ಪಡೆದಿದ್ದು, ಸಂಜೆ 6ರಿಂದ ಎಂದಿನಂತೆ ಸೇವೆ ಆರಂಭವಾಗಿದೆ’ ಎಂದು ಕೆಎಸ್‌ಆರ್‌ಟಿಸಿ ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ವೀರೇಶ್‌ ತ್ಯಾಪಿ ಪ್ರತಿಕ್ರಿಯಿಸಿದರು. 

ನಗರ ಬಸ್‌ ನಿಲ್ದಾಣದಲ್ಲಿ ಬಸ್‌ಗಳು ಕಡಿಮೆ ಇದ್ದರಿಂದ ಸಾರ್ವಜನಿಕರು ಪರದಾಡಿದರು  ಪ್ರಜಾವಾಣಿ ಚಿತ್ರಗಳು: ಅನೂಪ್‌ ರಾಘ ಟಿ. 

ಶೇ 45ರಷ್ಟು ಬಸ್‌ ಲಭ್ಯ

’ ‘ಗ್ರಾಮೀಣ ಭಾಗದಲ್ಲಿ ಶೇ 45ರಷ್ಟು ಬಸ್‌ಗಳು ಕಾರ್ಯಾಚರಿಸಿವೆ. ಪಿರಿಯಾಪಟ್ಟಣ ಎಚ್.ಡಿ.ಕೋಟೆ ಹುಣಸೂರು ಕೆ.ಆರ್.ನಗರದಲ್ಲಿ ಹೆಚ್ಚೇನೂ ತೊಂದರೆ ಆಗಿಲ್ಲ’ ಎಂದು ಕೆಎಸ್‌ಆರ್‌ಟಿಸಿ ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು. ವಿದ್ಯಾರ್ಥಿಗಳು ವಾಪಸ್‌: ಮುಷ್ಕರ ಕಾರಣ ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಿರಲಿಲ್ಲ. ಆದರೆ ಹಾಜರಾತಿ ಕಡಿಮೆ ಇತ್ತು. ಬಂದಿದ್ದ ಕೆಲವಷ್ಟೇ ವಿದ್ಯಾರ್ಥಿಗಳನ್ನು ಮಧ್ಯಾಹ್ನದ ವೇಳೆಗೆ ಶಿಕ್ಷಕರು– ಉಪನ್ಯಾಸಕರು ವಾಪಸ್‌ ಕಳುಹಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.