ADVERTISEMENT

ದ್ವೇಷ ಭಾಷಣ: 'ಕುವೆಂಪು ಕೋಮು ಸೌಹಾರ್ದ ಕಾಯ್ದೆ' ಹೆಸರಿಡಲು ಮನವಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 15:33 IST
Last Updated 29 ಡಿಸೆಂಬರ್ 2025, 15:33 IST
   

ಯಾಚೇನಹಳ್ಳಿ (ಮೈಸೂರು ಜಿಲ್ಲೆ): ‘ರಾಜ್ಯ ಸರ್ಕಾರವು ರೂಪಿಸಿರುವ ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆಗೆ ‘ಕುವೆಂಪು ಕೋಮು ಸೌಹಾರ್ದ ಕಾಯ್ದೆ’ ಎಂದು ಹೆಸರಿಡುವಂತೆ ಒತ್ತಡ ಹೇರುವುದು ಸೇರಿದಂತೆ 12 ನಿರ್ಣಯಗಳನ್ನು ಇಲ್ಲಿ ಸೋಮವಾರ ನಡೆದ ‘ವಿಶ್ವಮಾನವ ಧರ್ಮ ಮೊದಲ ಮಹಾಧಿವೇಶನ’ದಲ್ಲಿ ಕೈಗೊಳ್ಳಲಾಯಿತು.

ವಿಶ್ವಮಾನವ ಧರ್ಮ ಜಾಗೃತಿ ವೇದಿಕೆಯಿಂದ ಗ್ರಾಮದ ಶ್ರೀರಾಮಕೃಷ್ಣ ಸೇವಾ ಕೇಂದ್ರದ ಶಾಲೆ ಆವರಣದಲ್ಲಿ ನಡೆದ ಮಹಾಧಿವೇಶನದಲ್ಲಿ ಕುವೆಂಪು ಅನುಯಾಯಿಗಳು ಪಾಲ್ಗೊಂಡು ನಿರ್ಣಯಗಳಿವೆ ಸಹಮತ ವ್ಯಕ್ತಪಡಿಸಿದರು.

ಮುಂದಿನ ಮಹಾಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸುವುದು. ಕೇಂದ್ರ ಸರ್ಕಾರವು ಕೈಗೊಳ್ಳುವ ಮುಂದಿನ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ, ‘ವಿಶ್ವಮಾನವ ಧರ್ಮ’ ಎಂದು ದಾಖಲಿಸುವಂತೆ ಜಾಗೃತಿ ಅಭಿಯಾನ ಕೈಗೊಳ್ಳುವುದು. ಎಲ್ಲಾ ಶಾಲಾ– ಕಾಲೇಜುಗಳಲ್ಲಿ ಕಡ್ಡಾಯವಾಗಿ ‘ವಿಶ್ವಮಾನವ ವೈಚಾರಿಕ ಕ್ಲಬ್’ ಸ್ಥಾಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದು. ಕುವೆಂಪು ಜನ್ಮದಿನ(29)ವನ್ನು ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜು ಮತ್ತು ಇಲಾಖೆಗಳಲ್ಲಿ ವಿಶ್ವಮಾನವ ದಿನವನ್ನಾಗಿ ಆಚರಿಸಲು ಸುತ್ತೋಲೆ ಹೊರಡಿಸಬೇಕು ಎಂದು ಒತ್ತಾಯಿಸಲಾಯಿತು.

ADVERTISEMENT

‘ಕೋಮು ಸಾಮರಸ್ಯಕ್ಕಾಗಿ, ವೇದಿಕೆಯಿಂದ ಆಗಾಗ ವಿವಿಧ ಧರ್ಮಗಳ ಧರ್ಮಾಧಿಕಾರಿಗಳನ್ನು ಒಂದೆಡೆ ಸೇರಿಸಿ ಸ್ನೇಹ ಸಂವಾದಗಳನ್ನು ಏರ್ಪಡಿಸುವುದು. ಕುವೆಂಪು ವಿಚಾರಗಳನ್ನು ಸರಳೀಕರಿಸಿ ಕಿರುಹೊತ್ತಿಗೆ ಸಿದ್ಧಪಡಿಸಿ ಜನರಿಗೆ ತಲುಪಿಸುವುದು. ಶಾಲಾ ಪಠ್ಯಕ್ರಮದಲ್ಲಿ ಕುವೆಂಪು ಒಳಗೊಂಡಂತೆ ಎಲ್ಲಾ ವೈಚಾರಿಕ ಲೇಖಕರ ವಿಚಾರಗಳು ಹೆಚ್ಚು ಇರುವಂತೆ ಪಠ್ಯಕ್ರಮ ಸಮಿತಿಗೆ ಶಿಫಾರಸು ಮಾಡುವುದು. ವೇದಿಕೆಯಿಂದ ಮನೆ ಮನೆಗೆ ಕುವೆಂಪು ಎಂಬ ಕಾರ್ಯಕ್ರಮವನ್ನು ಪರಿಣಾಂಕಾರಿಯಾಗಿ ನಡೆಸುವುದು. ಕವಿ, ಸಾಹಿತಿ ಮತ್ತು ವಿದ್ವಾಂಸರನ್ನು ಒಳಗೊಂಡ ವಿಚಾರಗೋಷ್ಠಿಗಳನ್ನು ಆಗಾಗ ನಡೆಸಿ ಕುವೆಂಪು ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸಬೇಕು’ ಎಂದು ನಿರ್ಧರಿಸಲಾಯಿತು.

ವೇದಿಕೆಯನ್ನು ರಾಜಕೀಯ, ಮತೀಯ ಮತ್ತು ಜಾತಿಯ ಸೋಂಕಿಲ್ಲದ, ಕುವೆಂಪು ಆಶಯದ ಪೂರ್ಣ ದೃಷ್ಟಿ, ಸಮಾನತೆ ಮತ್ತು ಸಮನ್ವಯದ ವೇದಿಕೆಯಾಗಿ ರೂಪಿಸಲಾಗುವುದು. ಟ್ರಸ್ಟ್ ಆಗಿ ರೂಪಿಸಿ, ಬೈಲಾ ಸಿದ್ಧಪಡಿಸಿ ನೋಂದಣಿ ಮಾಡಿಸಲು ತೀರ್ಮಾನಿಸಲಾಯಿತು.

ನಾದಾನಂದನಾಥ ಸ್ವಾಮೀಜಿ, ಕೇಂಗೇರಿ ವಿಶ್ವಮಾನವ ಪೀಠದ ನಿಶ್ಚಲಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಸಹಕಾರಿ ಧುರೀಣ ವೈ.ಎನ್. ಶಂಕರೇಗೌಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.