ADVERTISEMENT

ಕಾರ್ಮಿಕರ ಪಾಲಿಗೆ ಅಂಬೇಡ್ಕರ್‌ ಆದರ್ಶ: ಜ್ಞಾನಪ್ರಕಾಶ ಸ್ವಾಮೀಜಿ

ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 13:38 IST
Last Updated 10 ಜುಲೈ 2022, 13:38 IST
ಜ್ಞಾನ‍ಪ್ರಕಾಶ ಸ್ವಾಮೀಜಿ
ಜ್ಞಾನ‍ಪ್ರಕಾಶ ಸ್ವಾಮೀಜಿ   

ಮೈಸೂರು: ‘ಕಾರ್ಮಿಕ ಕಾಯ್ದೆಯಲ್ಲಿ ಸಾಕಷ್ಟು ಸುಧಾರಣೆ ತಂದು ಹಲವು ಅನುಕೂಲಗಳನ್ನು ಮಾಡಿಕೊಟ್ಟ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಕಾರ್ಮಿಕರ ಪಾಲಿಗೆ ಆದರ್ಶವಾಗಿದ್ದಾರೆ’ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ವಿಕ್ರಾಂತ್ ದಲಿತ ನೌಕರರ ಸಮಿತಿ ಆಯೋಜಿಸಿದ್ದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಲ್ಲರಿಗೂ ಸಮಾನತೆ ಹಾಗೂ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಮಹಾನಾಯಕ ಅಂಬೇಡ್ಕರ್. ಲಖನೌದಲ್ಲಿ ನಡೆದ ಮೊದಲ ಕಾರ್ಮಿಕ ಅಧಿವೇಶನದಲ್ಲಿ ಕಾರ್ಮಿಕರಿಗಾಗಿ ಹಲವು ಕಾನೂನು ಜಾರಿಗೊಳಿಸಿದರು. ಕಾರ್ಖಾನೆಗಳಲ್ಲಿ ಶೌಚಾಲಯ ಇರಬೇಕು. ಹೆರಿಗೆ ರಜೆ ನೀಡಬೇಕು. ಇಎಸ್‌ಐ, ಪಿಎಫ್ ಸೌಲಭ್ಯ ಕೊಡಬೇಕು. ಕಾರ್ಮಿಕರು ಕೇವಲ 8 ಗಂಟೆಗಳ ಅವಧಿಯಷ್ಟೆ ದುಡಿಯಬೇಕು ಎನ್ನುವ ಶಿಫಾರಸು ಜಾರಿಗೆ ತಂದು ಕಾರ್ಮಿಕರ ಹಿತಕ್ಕಾಗಿ ಶ್ರಮಿಸಿದರು’ ಎಂದು ಸ್ಮರಿಸಿದರು.

ADVERTISEMENT

‘ಕಾರ್ಮಿಕರು ಜಾತಿ-ಮತವನ್ನು ಮನೆಯಲ್ಲಿ ಬಿಟ್ಟು ಕಾರ್ಖಾನೆಗೆ ಬರಬೇಕು. ನಾವೆಲ್ಲರೂ ಭಾರತೀಯರು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಸ್ವಾರ್ಥದ ಕತ್ತರಿಗಳಾಗದೆ ಎಲ್ಲರನ್ನೂ ಒಂದುಗೂಡಿಸುವ ಸೂಜಿಯಾಗಿ ಕೆಲಸ ಮಾಡಬೇಕು. ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ನಾವೆಲ್ಲರೂ ಒಂದೇ ಎನ್ನುವ ಮನೋಭಾವದಿಂದ ಕೆಲಸ ಮಾಡಬೇಕು. ಇದರಿಂದ ದೇಶದ ಅಭಿವೃದ್ಧಿ ಜೊತೆಗೆ, ಕಾರ್ಮಿಕರ ಕಲ್ಯಾಣವೂ ಆಗುತ್ತದೆ’ ಎಂದು ಹೇಳಿದರು.

‘ದೇಶದಲ್ಲಿ ಜಾತಿ-ಜಾತಿಗಳು, ಧರ್ಮ-ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ. ಇವೆಲ್ಲವನ್ನೂ ಅಖಂಡ ಭಾರತದ ಪ್ರಜೆಗಳಾದ ನಾವು ಮೆಟ್ಟಿ ನಿಲ್ಲಬೇಕು. ಅಂಬೇಡ್ಕರ್ ಆಶಯದ ದೇಶ ಕಟ್ಟಲು ಕೈಜೋಡಿಸಬೇಕು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜೆ.ಕೆ. ಟೈರ್ಸ್ ಅಂಡ್ ಇಂಡಸ್ಟ್ರೀಸ್ ಉಪಾಧ್ಯಕ್ಷ (ವರ್ಕ್ಸ್) ಇಪ್ಪೊ ಈಶ್ವರರಾವ್, ‘ದೊಡ್ಡ ದೇಶವು ವಿಶ್ವಕ್ಕೆ ಮಾದರಿಯಾಗುವ ಪ್ರಜಾಪ್ರಭುತ್ವ ರಾಷ್ಟ್ರವಾಗುವುದಕ್ಕೆ ಅಂಬೇಡ್ಕರ್ ನೀಡಿರುವ ಸಂವಿಧಾನ ಕಾರಣ. ಶ್ರೀಸಾಮಾನ್ಯರೂ ಪ್ರಧಾನಿ, ರಾಷ್ಟ್ರಪತಿ ಅವರನ್ನು ಭೇಟಿ ಮಾಡುವುದಕ್ಕೆ ಅವಕಾಶವಿದೆ. ವಾಕ್ ಸ್ವಾತಂತ್ರ್ಯವಿದೆ. ಇದೆಲ್ಲವೂ ಸಂವಿಧಾನದ ಅಡಿಯಲ್ಲಿ ಬರುತ್ತದೆ. ಇದೆಲ್ಲ ಕಾರಣದಿಂದಾಗಿಯೇ ಅಂಬೇಡ್ಕರ್ ನಮಗೆಲ್ಲರಿಗೂ ಮಾದರಿಯಾಗಿದ್ದಾರೆ’ ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಪಿ. ಮಹೇಶ್‌ಚಂದ್ರ ಗುರು ಮಾತನಾಡಿದರು. ಸಂಘದ ಅಧ್ಯಕ್ಷ ಎಸ್. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಪುರುಷೋತ್ತಮ, ಜೆ.ಕೆ. ಟೈರ್ಸ್‌ ಮುಖ್ಯ ಪ್ರಧಾನ ವ್ಯವಸ್ಥಾಪಕ (ಉತ್ಪಾದನೆ, ರೇಡಿಯಲ್ ಪ್ಲಾಂಟ್) ಎಚ್.ಕೆ. ಸುಬ್ರಹ್ಮಣ್ಯ, ಉದ್ಯಮಿ ಗಂಗಾಧರ್, ಕಾರ್ಮಿಕ ಸಂಘದ ಸಹ ಕಾರ್ಯದರ್ಶಿ ಬಿ. ಶಿವಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಪಿ. ಮಹಾದೇವಮೂರ್ತಿ, ಖಜಾಂಚಿ ಬಿ. ಶಿವರುದ್ರಸ್ವಾಮಿ, ಗೌರಾವಾಧ್ಯಕ್ಷ ಮಲ್ಲೇಶ್, ಉಪಾಧ್ಯಕ್ಷರಾದ ಪಿ. ದಿನೇಶ್ ಕುಮಾರ್, ಎಂ. ದೀಪುಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.