ADVERTISEMENT

ಮೈಸೂರು| ಹೊಸ ಕಾರ್ಮಿಕ ಸಂಹಿತೆ ಜನವಿರೋಧಿ: ವಸಂತ ಕುಮಾರ್ ಹಿಟ್ಟಣಗಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 5:53 IST
Last Updated 26 ಜನವರಿ 2026, 5:53 IST
ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಭಾನುವಾರ ನಡೆದ ಸಿಡಬ್ಲ್ಯುಎಫ್‌ಐ ಸಂಘಟನಾ ಕಾರ್ಯಾಗಾರದಲ್ಲಿ ವಸಂತಕುಮಾರ್ ಹಿಟ್ಟಣಗಿ ಮಾತನಾಡಿದರು. ಕೆ. ಮಹಾಂತೇಶ್‌, ಬಾಲಕೃಷ್ಣ ಶೆಟ್ಟಿ, ಜಯರಾಂ, ಎಚ್‌.ಎಂ. ಬಸವಯ್ಯ, ಜಗದೀಶ ಸೂರ್ಯ ಜೊತೆಗಿದ್ದರು – ಪ್ರಜಾವಾಣಿ ಚಿತ್ರ
ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಭಾನುವಾರ ನಡೆದ ಸಿಡಬ್ಲ್ಯುಎಫ್‌ಐ ಸಂಘಟನಾ ಕಾರ್ಯಾಗಾರದಲ್ಲಿ ವಸಂತಕುಮಾರ್ ಹಿಟ್ಟಣಗಿ ಮಾತನಾಡಿದರು. ಕೆ. ಮಹಾಂತೇಶ್‌, ಬಾಲಕೃಷ್ಣ ಶೆಟ್ಟಿ, ಜಯರಾಂ, ಎಚ್‌.ಎಂ. ಬಸವಯ್ಯ, ಜಗದೀಶ ಸೂರ್ಯ ಜೊತೆಗಿದ್ದರು – ಪ್ರಜಾವಾಣಿ ಚಿತ್ರ    

ಮೈಸೂರು: ‘ಕೇಂದ್ರ ಸರ್ಕಾರ ಜಾರಿ ಮಾಡಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಶ್ರಮಿಕ ವರ್ಗದ ವಿರೋಧಿಯಾಗಿವೆ’ ಎಂದು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿವೃತ್ತ ಕಾರ್ಯದರ್ಶಿ ವಸಂತ ಕುಮಾರ್ ಹಿಟ್ಟಣಗಿ ದೂರಿದರು.

ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಭಾನುವಾರ ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟದಿಂದ ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

‘ಈ ಸಂಹಿತೆಯಲ್ಲಿ 40 ಕೋಟಿಗೂ ಹೆಚ್ಚಿರುವ ಕೃಷಿ ಕಾರ್ಮಿಕರನ್ನು ಒಳಗೊಂಡಿಲ್ಲ. ಬಹುಸಂಖ್ಯೆಯ ಅಸಂಘಟಿತ ವಿಭಾಗವನ್ನು ಹೊರಗಿಡಲಾಗಿದೆ. ಹೀಗಾಗಿ ಕಾರ್ಮಿಕ ಸಂಹಿತೆಗಳು ಸಮಸ್ತ ಕಾರ್ಮಿಕ ವರ್ಗವನ್ನು ಪ್ರತಿನಿಧಿಸುತ್ತವೆ ಎಂಬುದು ಸತ್ಯಕ್ಕೆ ದೂರವಾದುದು’ ಎಂದರು.

ADVERTISEMENT

‘ಕಾರ್ಖಾನೆಯನ್ನು ಮುಚ್ಚಲು ಸರ್ಕಾರದ ಪೂರ್ವಾನುಮತಿ ತೆಗೆದುಹಾಕಿರುವುದು ಮಾಲೀಕರ ನಿರಂಕುಶತನಕ್ಕೆ ಎಡೆ ಮಾಡುತ್ತದೆ. ಕಾರ್ಖಾನೆಯಿಂದ ಹೊರಹಾಕಲಾದ ಕಾರ್ಮಿಕರಿಗೆ ಯಾರು ರಕ್ಷಣೆ ಒದಗಿಸಬೇಕು ಎಂಬ ಬಗ್ಗೆ ಸಂಹಿತೆಯಲ್ಲಿ ಸ್ಪಷ್ಟನೆ ಇಲ್ಲ, ಇದು ಆತಂಕಕಾರಿ' ಎಂದು ಹಿಟ್ಟಣಗಿ ಆತಂಕ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ‘ಎರಡು ದಿನಗಳ ಕಾರ್ಯಾಗಾರದಲ್ಲಿ, ಲೇಬರ್ ಕೋಡ್‌ಗಳ ಅಪಾಯಗಳ ಕುರಿತು ಚರ್ಚಿಸಿ, ಹೋರಾಟಗಳನ್ನು ರೂಪಿಸಲು ನಿರ್ಣಯ ಮಾಡುತ್ತೇವೆ. ಹೊಸ ಕಾರ್ಮಿಕ ಸಂಹಿತೆಗಳ ಜಾರಿ ವಿರುದ್ಧ ಫೆಬ್ರುವರಿ 12ರಂದು ಕರೆ ನೀಡಿರುವ ಅಖಿಲ ಭಾರತ ಮುಷ್ಕರದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ಭಾಗವಹಿಸಲಿದ್ದಾರೆ’ ಎಂದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್, ಸಿಪಿಐಎಂ ಮೈಸೂರು ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ರಾಜ್ಯ ಕಾರ್ಯದರ್ಶಿ ಲಿಂಗರಾಜು, ರಾಜ್ಯ ಖಜಾಂಚಿ ಯಲ್ಲಾಲಿಂಗ ಮಳವಳ್ಳಿ, ಮುಖಂಡರಾದ ಬಸವಯ್ಯ, ನವೀನ್ ಕುಮಾರ್, ಸೋಮಶಂಕರ್ ಭಾಗವಹಿಸಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ 200ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.