ADVERTISEMENT

ಪೌರಕಾರ್ಮಿಕರು ಕಾರ್ಯಕ್ಷಮತೆ ವೃದ್ಧಿಸಿಕೊಳ್ಳಬೇಕು

ನಗರಸಭೆ ಆಯುಕ್ತೆ ಮಾನಸ ಸಲಹೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 3:11 IST
Last Updated 27 ನವೆಂಬರ್ 2025, 3:11 IST
ಹುಣಸೂರು ನಗರದ ಅಂಬೇಡ್ಕರ್‌ ಭವನದಲ್ಲಿ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಕೌಶಲ ತರಬೇತಿ ಕಾರ್ಯಾಗಾರವನ್ನು ನಗರಸಭೆ ಆಯುಕ್ತೆ ಮಾನಸ ಮತ್ತು ಇತರರು ಉದ್ಘಾಟಿಸಿದರು 
ಹುಣಸೂರು ನಗರದ ಅಂಬೇಡ್ಕರ್‌ ಭವನದಲ್ಲಿ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಕೌಶಲ ತರಬೇತಿ ಕಾರ್ಯಾಗಾರವನ್ನು ನಗರಸಭೆ ಆಯುಕ್ತೆ ಮಾನಸ ಮತ್ತು ಇತರರು ಉದ್ಘಾಟಿಸಿದರು    

ಹುಣಸೂರು: ವೃತ್ತಿಯಲ್ಲಿ ಕೌಶಲ ಅಳವಡಿಕೆ ಮತ್ತು ಸೇವೆಯಲ್ಲಿ ಸಕಾರಾತ್ಮಕತೆ ಮೈಗೂಡಿಸಿಕೊಳ್ಳುವ ಮೂಲಕ ನಾಗರಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಗರಸಭೆ ಆಯುಕ್ತೆ ಮಾನಸ ಪೌರಕಾರ್ಮಿಕರಿಗೆ ಸಲಹೆ ನೀಡಿದರು. 

ನಗರದ ಅಂಬೇಡ್ಕರ್‌ ಭವನದಲ್ಲಿ ನಗರಸಭೆ ಪೌರಕಾರ್ಮಿಕರು ಒಳಗೊಂಡಂತೆ ವಿವಿಧ ವಿಭಾಗದ ಸಿಬ್ಬಂದಿಗೆ ಎಸ್.ಬಿ.ಎಂ. 2.0 ಯೋಜನೆ ಅಡಿಯಲ್ಲಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯಿಂದ ಸಮಾಜ ಉತ್ಕೃಷ್ಟ ಸೇವೆ ನಿರೀಕ್ಷಿಸುತ್ತದೆ. ಅದಕ್ಕೆ ತಕ್ಕಂತೆ ಪ್ರಾಮಾಣಿಕ ಸೇವೆ ನೀಡಬೇಕಾದ ಜವಾಬ್ದಾರಿ ನಮ್ಮ ಹೆಗಲಿಗಿದೆ. ವೃತ್ತಿಯಲ್ಲಿ ಕೌಶಲ ಪಡೆದುಕೊಂಡು ಬುದ್ಧಿವಂತಿಕೆಯಿಂದ ಕಾರ್ಯ ನಿರ್ವಹಿಸಿ ಎಂದರು.

ADVERTISEMENT

ನೂತನ ತಂತ್ರಜ್ಞಾನಗಳ ಬಳಕೆ ಅರಿತುಕೊಂಡು, ಪೌರಕಾರ್ಮಿಕರು ಸೇವೆಯಲ್ಲಿ ಅದನ್ನು ತೊಡಗಿಸಿಕೊಳ್ಳುವ ಮೂಲಕ ನಗರದ ಸ್ವಚ್ಛತೆಗೆ ಒತ್ತು ನೀಡಬೇಕು. ನಿಮ್ಮ ಕಾರ್ಯಶೈಲಿ, ತಂತ್ರಜ್ಞಾನಗಳ ಬಳಕೆ ಕುರಿತು ಮಾಹಿತಿ ನೀಡಲು ಈ ರೀತಿಯ ಕಾರ್ಯಾಗಾರಗಳು ಅವಶ್ಯ ಎಂದರು.

ಸಭೆಯಲ್ಲಿ ನಂಜನಗೂಡು ನಗರಸಭೆ ಪರಿಸರ ವಿಭಾಗದ ಎಇಇ ನೇತ್ರಾವತಿ ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ವಿಂಗಡಣೆ, ವಿತರಣೆ ಕುರಿತು ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.

ಜಗದೀಶ್‌ ಸಿಬ್ಬಂದಿಯ ವೈಯಕ್ತಿಕ ಆರೋಗ್ಯ, ಸುರಕ್ಷತೆ, ಕುರಿತು ಮಾಹಿತಿ ನೀಡಿದರು. ಮೈಸೂರಿನ ಜೆ.ಸಿ. ಕಾಲೇಜಿನ ಪ್ರೊ.ಶಿವಪ್ರಸಾದ್‌ ಒಳಚರಂಡಿ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ನಗರಸಭೆ ಪರಿಸರ ವಿಭಾಗದ ಎಇಇ ಸೌಮ್ಯ, ಆರೋಗ್ಯ ನಿರೀಕ್ಷಕ ಶಶಿಕುಮಾರ್‌, ಕೃಷ್ಣೇಗೌಡ, ರಾಚಯ್ಯ, ಜಯಮ್ಮ, ಮಾದ ಸೇರಿ ಇತರರಿದ್ದರು.