ADVERTISEMENT

ಮೈಸೂರು: ‘ಬೆಳೆಯುವ ಸಿರಿ’ಗೆ ಲ್ಯಾಪ್‌ಟಾಪ್‌ ನೀರು

ಶಾಸಕ ಕೆ.ಹರೀಶ್‌ಗೌಡ ಸೇವಾ ಕಾರ್ಯ; ಕ್ಷೇತ್ರದ 300 ವಿದ್ಯಾರ್ಥಿಗಳಿಗೆ ನೆರವು

ಎಂ.ಮಹೇಶ್
Published 24 ನವೆಂಬರ್ 2025, 2:33 IST
Last Updated 24 ನವೆಂಬರ್ 2025, 2:33 IST
ಕೆ. ಹರೀಶ್‌ಗೌಡ
ಕೆ. ಹರೀಶ್‌ಗೌಡ   
ಅತ್ಯಾಧುನಿಕ ತಂತ್ರಜ್ಞಾನದ ವೈಯಕ್ತಿಕ ಕಂಪ್ಯೂಟರ್‌ ಶೈಕ್ಷಣಿಕ ಜೀವನಕ್ಕೆ ನೆರವಾಗುವ ಉದ್ದೇಶ ನ.25ರ ಮಧ್ಯಾಹ್ನ 3ಕ್ಕೆ ಕಲಾಮಂದಿರದಲ್ಲಿ ಕಾರ್ಯಕ್ರಮ

ಮೈಸೂರು: ಬೆಳೆಯುವ ಸಿರಿಗಳಾದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೆರವಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಶಾಸಕ ಕೆ.ಹರೀಶ್‌ಗೌಡ ಅವರು ಲ್ಯಾಪ್‌ಟಾಪ್‌ ವಿತರಿಸುವ ಸೇವಾ ಕಾರ್ಯ ಹಮ್ಮಿಕೊಂಡಿದ್ದಾರೆ.

ತಾವು ಪ್ರತಿನಿಧಿಸುವ ಚಾಮರಾಜ ಕ್ಷೇತ್ರದ 300 ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಕಂಪ್ಯೂಟರ್‌ಗಳನ್ನು ಉಚಿತವಾಗಿ ಒದಗಿಸುತ್ತಿದ್ದಾರೆ. ಈ ಮೂಲಕ ಅವರ ಶೈಕ್ಷಣಿಕ ಜೀವನಕ್ಕೆ ನೆರವಿನ ಹಸ್ತವನ್ನು ಚಾಚುತ್ತಿದ್ದಾರೆ. ಅರ್ಜಿ ಆಹ್ವಾನಿಸುವ ಮೂಲಕ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗಿದೆ.

ನ. 25ರಂದು ಮಧ್ಯಾಹ್ನ 3ಕ್ಕೆ ನಗರದ ಹುಣಸೂರು ರಸ್ತೆಯ ಕಲಾಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ವಿತರಣೆ ಕಾರ್ಯ ಹಮ್ಮಿಕೊಳ್ಳಲಾಗಿದೆ. ಶ್ರೀಕ್ಷೇತ್ರ ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್‌ಸೇಠ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರು, ವಿಧಾನಪರಿಷತ್‌ ಸದಸ್ಯರು ಹಾಗೂ ಸಂಸದರನ್ನು ಆಹ್ವಾನಿಸಲಾಗಿದೆ. 

ADVERTISEMENT

ಪೈಪೋಟಿಗೆ ಸಜ್ಜಾಗಲೆಂದು: 

ತಮ್ಮ ತಾಯಿ– ತಂದೆ ಹೆಸರಿನಲ್ಲಿ ಸ್ಥಾಪಿಸಿರುವ ‘ಯಶೋದಾ–ಕೃಷ್ಣ ಚಾರಿಟಬಲ್ ಟ್ರಸ್ಟ್’ ವತಿಯಿಂದ ಅವರು ಕ್ಷೇತ್ರದ ಬಿಇ, ಬಿಸಿಎ ಹಾಗೂ ಎಂಸಿಎ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುತ್ತಿದ್ದಾರೆ. ಇಂದಿನ ಶೈಕ್ಷಣಿಕ ಜೀವನದ ಪೈಪೋಟಿಗೆ ತಕ್ಕಂತೆ ಸಜ್ಜಾಗುವ ನಿಟ್ಟಿನಲ್ಲಿ ಕಲಿಕಾರ್ಥಿಗಳಿಗೆ ಸಹಾಯವಾಗಲೆಂದು ಈ ಕ್ರಮ ಕೈಗೊಂಡಿದ್ದಾರೆ. 

16 ಜಿಬಿ ರ‍್ಯಾಮ್‌, 13 ಜನರೇಷನ್‌ನ ಐ5 ತಂತ್ರಜ್ಞಾನದ ಲೆನೊವಾ ಕಂಪನಿಯ ಲ್ಯಾಪ್‌ಟಾಪ್‌ಗಳನ್ನು ನೀಡಲಾಗುತ್ತಿದೆ. ಹಿಂದಿನಿಂದಲೂ ವೈಯಕ್ತಿಕವಾದ ನೆಲೆಯಲ್ಲಿ ಕ್ಷೇತ್ರದಲ್ಲಿ ಒಂದಿಲ್ಲೊಂದು ಸೇವಾ ಕಾರ್ಯವನ್ನು ಮಾಡುತ್ತಲೇ ಬಂದಿರುವ ಅವರು, ಈಗ ತಂದೆ–ತಾಯಿ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ಯೋಜನೆ ಹಮ್ಮಿಕೊಂಡಿದ್ದಾರೆ. 

‘ಬಿಇ, ಬಿಸಿಎ ಹಾಗೂ ಎಂಸಿಎ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆಂದು ಲ್ಯಾಪ್‌ಟಾಪ್‌ ಬಹಳ ಅಗತ್ಯ ಇರುತ್ತದೆ. ಹೀಗಾಗಿ ಅವರಿಗೆ ಭವಿಷ್ಯ ಕಲ್ಪಿಸುವ ನಿಟ್ಟಿನಲ್ಲಿ ಸಹಾಯ ಮಾಡುತ್ತಿದ್ದೇನೆ. ಒಳ್ಳೆಯ ಕೆಲಸಗಳಿಗೆ ಅವರು ಸೇರುವಂತಾಗಬೇಕು ಎಂಬುದು ನನ್ನ ಆಶಯವಾಗಿದೆ. ಸರ್ಕಾರದಿಂದ ಮಹಾನಗರಪಾಲಿಕೆ ವತಿಯಿಂದಲೂ ಲ್ಯಾಪ್‌ಟಾಪ್‌ ಕೊಡಿಸುವ ಕೆಲಸವನ್ನು ಮಾಡುತ್ತಿದ್ದೇನೆ. ವಿವಿಧ ವಲಯಗಳಲ್ಲಿನ ಸೇವಾ ಕಾರ್ಯವನ್ನು ಮುಂದುವರಿಸುತ್ತೇನೆ’ ಎನ್ನುತ್ತಾರೆ ಹರೀಶ್‌ಗೌಡ.

ವಿತರಿಸಲಿರುವ ಲ್ಯಾಪ್‌ಟಾಪ್‌
ವಿದ್ಯಾರ್ಥಿ ವಿದ್ಯಾರ್ಥಿನಿಯರು ಲ್ಯಾಪ್‌ಟಾಪ್‌ಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಸಾಧನೆ ತೋರಿದರೆ ನಮ್ಮ ಉದ್ದೇಶ ಈಡೇರುತ್ತದೆ
ಕೆ.ಹರೀಶ್‌ಗೌಡ ಶಾಸಕ

ಹಲವು ದಿನಗಳ ಕನಸು...

‘ಯಶೋದಾ–ಕೃಷ್ಣ ಚಾರಿಟಬಲ್ ಟ್ರಸ್ಟ್‌ ಸ್ಥಾಪಿಸಬೇಕು ಎಂಬುದು ನನ್ನ ಹಲವು ದಿನಗಳ ಕನಸಾಗಿತ್ತು. ಅದೀಗ ನನಸಾಗುತ್ತಿದೆ. ಅದರ ಉದ್ಘಾಟನೆಯ ಭಾಗವಾಗಿ ಏನಾದರೂ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಯೋಚಿಸಿದಾಗ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎನಿಸಿತು. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಅವರಿಗೆ ಸುಧಾರಿತ ತಂತ್ರಜ್ಞಾನದ ಅರಿವಿರಬೇಕು ಎಂಬುದನ್ನು ಮನಗಂಡು ಅವರಿಗೆ ಸಹಕಾರಿ ಆಗಲೆಂದು ಅತ್ಯಾಧುನಿಕ ತಂತ್ರಜ್ಞಾನದ ಲ್ಯಾಪ್‌ಟಾಪ್‌ಗಳನ್ನು ಉಚಿತವಾಗಿ ನೀಡುತ್ತಿದ್ದೇನೆ’ ಎಂದು ಹರೀಶ್‌ಗೌಡ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.