ಮೈಸೂರು: ‘ಹೊಸ ತಲೆಮಾರಿನವರು ಸಂಸ್ಕೃತಿ, ಪರಂಪರೆ ಮರೆಯುತ್ತಿದ್ದಾರೆ. ಹೀಗಾಗಿ ಹಿರಿಯರನ್ನು ಸ್ಮರಿಸುವ ಕೆಲಸ ನಡೆಯಬೇಕು’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ವಿಜಯನಗರದಲ್ಲಿ ಹೊಯ್ಸಳ ಕರ್ನಾಟಕ ಸಂಘವು ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಸಮುದಾಯದ ಹಿರಿಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮುದಾಯವು ವಿಶಿಷ್ಟ ಆಚರಣೆ, ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ. ಆದರಾತಿಥ್ಯ, ಸ್ವಾಭಿಮಾನಕ್ಕೆ ಹೆಸರುವಾಸಿಯಾಗಿದೆ. ಆಡುನುಡಿಯೂ ವಿಭಿನ್ನತೆಯನ್ನು ಹೊಂದಿದೆ’ ಎಂದರು.
‘ಹೊಯ್ಸಳ ಕರ್ನಾಟಕದವರು ಎಲ್ಲ ಸಮುದಾಯದವರೊಡನೆ ಸೌಹಾರ್ದವನ್ನು ಬೆಳೆಸಿಕೊಂಡು ಬಂದಿದ್ದಾರೆ. ನಾಡಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅರಮನೆ ಹಾಗೂ ಸಮುದಾಯದೊಂದಿಗೆ ಅವಿನಾಭಾವ ಸಂಬಂಧವಿದೆ’ ಎಂದು ಸ್ಮರಿಸಿದರು.
‘ಮುಂದಿನ ಐದು ವರ್ಷದಲ್ಲಿ ಮೈಸೂರು ಪಾರಂಪರಿಕ ನಗರವಾಗಿಯೇ ಉಳಿಯಲು ಜನರ ಸಹಕಾರ ಅಗತ್ಯ. ಲಕ್ಷ್ಮೀಪುರಂ ಕಟ್ಟಡವು ಪಾರಂಪರಿಕವಾಗಿದೆ. ಅದರೊಂದಿಗೆ ನೆನಪುಗಳಿವೆ. ಸಮುದಾಯವು ನಡೆಸಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಗೊತ್ತಿದ್ದು, ಸಂಘದ ಕಾರ್ಯಗಳಿಗೆ ನೆರವಾಗುವೆ’ ಎಂದರು.
80 ವರ್ಷ ಮೇಲ್ಪಟ್ಟ 80 ಹಿರಿಯರನ್ನು ಸನ್ಮಾನಿಸಲಾಯಿತು. ಸಂಸ್ಥಾಪಕರ 20 ಕುಟುಂಬದ ಸದಸ್ಯರಿಗೆ ಗೌರವ, 20ಕ್ಕೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧನೆ ಮಾಡಿದ 20 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಶಾಸಕ ಟಿ.ಎಸ್.ಶ್ರೀವತ್ಸ, ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ, ಮೈಸೂರು ಬ್ರಾಹ್ಮಣ ಸಭಾದ ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ್, ಲೇಖಕ ಎ.ವಿ.ಸೂರ್ಯನಾರಾಯಣ ಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.