
ಮೈಸೂರು: ‘ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಅಮೂಲ್ಯ ಸಾಹಿತ್ಯಗಳಿದ್ದು, ಅವನ್ನು ತರ್ಜುಮೆ ಮಾಡಿ ವಿದೇಶಿಗರ ಮನಕ್ಕೂ ತಲುಪಿಸುವ ಅಗತ್ಯವಿದೆ’ ಎಂದು ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಪ್ರೊ.ಆರ್.ವಿ.ಎಸ್. ಸುಂದರಂ ತಿಳಿಸಿದರು.
ಭಾರತೀಯ ಭಾಷಾ ಸಂಸ್ಥಾನಲ್ಲಿ (ಸಿಐಐಎಲ್) ಗುರುವಾರ ಆಯೋಜಿಸಿದ್ದ ‘ಭಾರತೀಯ ಭಾಷಾ ಉತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ‘ದೇಶದುದ್ದಕ್ಕೂ ವಿವಿಧ ಭಾಷೆಗಳಿದ್ದು, ಅದರಲ್ಲಿನ ಸಾಹಿತ್ಯವು ಶ್ರೀಮಂತವಾಗಿದೆ. ಅವು ಜಗತ್ತಿಗೆ ಪರಿಚಯವಾಗುವಷ್ಟು ಮೌಲ್ಯ ಹೊಂದಿವೆ’ ಎಂದರು.
‘ಪ್ರಾಚೀನ ಕಾಲದಲ್ಲಿ ವ್ಯಾಸ, ವಾಲ್ಮೀಕಿ, ಕಾಳಿದಾಸ ಮುಂತಾದ ಮಹಾನ್ ಕವಿಗಳು ರಚಿಸಿದ ಮಹಾನ್ ಗ್ರಂಥಗಳ ಫಲವಾಗಿ ನಮ್ಮ ದೇಶದ ಸಾಹಿತ್ಯವು ಶ್ರೀಮಂತಗೊಂಡಿದೆ. ಕೊಡವ, ತುಳು, ಗೋಂಡಿ ಮುಂತಾದ ಪ್ರಾದೇಶಿಕ ಭಾಷೆಗಳಲ್ಲಿ ಮೌಖಿಕ ಸಾಹಿತ್ಯಗಳೂ ಇವೆ. ಜನಪದ ಸಾಹಿತ್ಯದ ಪ್ರಮಾಣ ನಮ್ಮಲ್ಲಷ್ಟೇ ಹೆಚ್ಚಿದೆ. ಇಂತಹ ಶ್ರೀಮಂತ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನ ನಡೆಯಲಿ’ ಎಂದು ಹೇಳಿದರು.
‘ಪ್ರಪಂಚದ ಬೇರೆ- ಬೇರೆ ದೇಶ ನೋಡಿದರೆ, ಅಲ್ಲಿ ನೂರಾರು ಕಿಲೋ ಮೀಟರ್ ಒಂದೇ ರೀತಿಯ ಭಾಷೆ, ಆಚಾರ- ವಿಚಾರ ಕಾಣಸಿಗುತ್ತವೆ. ಆದರೆ ಭಾರತದ ವಾತಾವರಣ ಭಿನ್ನವಾಗಿದ್ದು, ಇಲ್ಲಿ ಕನ್ಯಾಕುಮಾರಿಯಲ್ಲಿ ರೈಲು ಹತ್ತಿ ಕಾಶ್ಮೀರದವರೆಗೆ ಪ್ರಯಾಣಿಸಿದರೆ ದೇಶದ ಸಂಸ್ಕೃತಿ ಹಾಗೂ ಆಹಾರ ಸಂಸ್ಕೃತಿಯ ವೈವಿಧ್ಯತೆಯ ಪರಿಚಯವಾಗುತ್ತದೆ. ವೈವಿಧ್ಯತೆಯ ನಡುವೆಯೂ ದೇಶ, ಸಂಸ್ಕೃತಿ, ಧರ್ಮದಲ್ಲಿ ಐಕ್ಯತೆಯಿರುವುದೇ ಭಾರತದ ವಿಶೇಷತೆ’ ಎಂದು ತಿಳಿಸಿದರು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ‘ಭಾಷೆ, ರಾಷ್ಟ್ರೀಯತೆ ಮತ್ತು ಸಂಸ್ಕೃತಿ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಿಐಐಎಲ್ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್, ಎಲ್.ಆರ್.ಪ್ರೇಮಕುಮಾರ್ ಭಾಗವಹಿಸಿದರು.
‘ಭಾಷಾ ಅಭಿಮಾನದ ದ್ಯೋತಕ’
ಸಿಐಐಎಲ್‌ನ ಉಪ ನಿರ್ದೇಶಕ ಪ್ರೊ.ಪಿ.ಆರ್.ಧರ್ಮೇಶ್ ಫರ್ನಾಂಡಿಸ್ ಮಾತನಾಡಿ ‘ಭಾರತದ ವಿಶಾಲ ಮತ್ತು ಸಮೃದ್ಧ ಭಾಷಾ ಪರಂಪರೆಯನ್ನು ಗೌರವಿಸುವ ಸಲುವಾಗಿ ಭಾರತೀಯ ಭಾಷಾ ಉತ್ಸವ ಆಯೋಜನೆ ಮಾಡಲಾಗಿದೆ. ಭಾರತದ ಸ್ಫೂರ್ತಿದಾಯಕ ರಾಷ್ಟ್ರೀಯವಾದಿ ಕವಿ ಸುಬ್ರಹ್ಮಣ್ಯ ಭಾರತೀ ಅವರ ಜನ್ಮ ದಿನದ ಸ್ಮರಣಾರ್ಥ ಆಚರಣೆ ಮಾಡುವ ಈ ಉತ್ಸವ ಏಕತೆ ಸಾಂಸ್ಕೃತಿಕ ಸಾಮರಸ್ಯ ಮತ್ತು ಭಾಷಾ ಅಭಿಮಾನದ ದ್ಯೋತಕವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.