ADVERTISEMENT

ನಮ್ಮನ್ನೂ ಬದುಕಲು ಬಿಡಿ...

‘ನಮ್ಮ ಪ್ರೈಡ್‌ ಮೈಸೂರು ಮತ್ತು ಕ್ವೀರ್‌ ಹಬ್ಬ’ ಲೈಂಗಿಕ ಅಲ್ಪಸಂಖ್ಯಾತರ ಸ್ವಾಭಿಮಾನಿ ಮೆರವಣಿಗೆಯಲ್ಲಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 15:33 IST
Last Updated 19 ಮಾರ್ಚ್ 2023, 15:33 IST
ಮೈಸೂರಿನಲ್ಲಿ ‘7 ರೈನ್‌ಬೋಸ್’ ಸಂಘಟನೆ ಹಾಗೂ ಇತರ ಸಂಸ್ಥೆಗಳಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಕರ್ನಾಟಕ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸ್ವಾಭಿಮಾನಿ ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ನರ್ತಿಸುತ್ತಾ ಸಂಭ್ರಮಿಸಿದರು
ಮೈಸೂರಿನಲ್ಲಿ ‘7 ರೈನ್‌ಬೋಸ್’ ಸಂಘಟನೆ ಹಾಗೂ ಇತರ ಸಂಸ್ಥೆಗಳಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಕರ್ನಾಟಕ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸ್ವಾಭಿಮಾನಿ ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ನರ್ತಿಸುತ್ತಾ ಸಂಭ್ರಮಿಸಿದರು   

ಮೈಸೂರು: ‘ನಾವ್‌ ಇರೋದೆ ಹೀಗೆ, ಒಪ್ಪಿಕೊಳ್ಳಿ. ನಮ್ಮ ದೇಹ ನಮ್ಮ ಹಕ್ಕು, ನಮ್ಮನ್ನೂ ಬದುಕಲು ಬಿಡಿ. ಆಜಾದಿ ಆಜಾದಿ... ನಮಗೆ ಬೇಕು ಆಜಾದಿ’ ಎಂಬ ಘೋಷಣೆಗಳು ಮೈಸೂರಿನ ಪ್ರಮುಖ ರಸ್ತೆಗಳು ಮತ್ತು ವೃತ್ತಗಳನ್ನು ಆವರಿಸಿದ್ದವು.

ಕಾಮನಬಿಲ್ಲಿನ ಬಾವುಟಗಳನ್ನು ಹಿಡಿದು, ರಂಗುರಂಗಿನ ಬಟ್ಟೆ ತೊಟ್ಟು ಸ್ವತಂತ್ರ ಚಿಟ್ಟೆಗಳಂತೆ ಸಂಭ್ರಮಿಸುತ್ತಾ, ವಾದ್ಯಗಳಿಗೆ ಹೆಜ್ಜೆ ಹಾಕುತ್ತಾ, ಪರಸ್ಪರರ ಕೈಹಿಡಿದು ಪ್ರೇಮವನ್ನು ವ್ಯಕ್ತಪಡಿಸುತ್ತಲೇ ನಮ್ಮ ಭಾವನೆಗಳನ್ನು ಹಕ್ಕುಗಳಾಗಿಸಿ ಎಂಬ ಘೋಷಣೆಯನ್ನು ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಕೂಗಿದರು.

ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ, ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆಯಿಂದ ಮಾತ್ರವಲ್ಲದೇ ನೆರೆಯ ಕೇರಳ, ತಮಿಳುನಾಡು ಹಾಗೂ ದೂರದ ಪಶ್ಚಿಮ ಬಂಗಾಳದಿಂದಲೂ ಬಂದಿದ್ದ ನೂರಾರು ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತ(ಎಲ್‌ಜಿಬಿಟಿಕ್ಯೂ) ಸಮುದಾಯದವರು ಹಾಗೂ ಬೆಂಬಲಿಗರು ಮೆರವಣಿಗೆ ನಡೆಸಿದರು.

ADVERTISEMENT

‘7 ರೈನ್‌ಬೋಸ್’ ಸಂಘಟನೆ ಹಾಗೂ ಇತರ ಸಂಸ್ಥೆಗಳಿಂದ ಭಾನುವಾರ ಆಯೋಜಿಸಿದ್ದ ಕರ್ನಾಟಕ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸ್ವಾಭಿಮಾನಿ ಮೆರವಣಿಗೆ ‘ನಮ್ಮ ಪ್ರೈಡ್‌ ಮೈಸೂರು ಮತ್ತು ಕ್ವೀರ್‌ ಹಬ್ಬ’ ಸರ್ಕಾರಿ ಅತಿಥಿ ಗೃಹದಿಂದ ಜಗನ್ಮೋಹನ ಅರಮನೆವರೆಗೆ ಸಾಗಿತು. ಸಮುದಾಯಕ್ಕೆ ಸರ್ಕಾರದಿಂದ ಪರಿಹಾರ ಮತ್ತು ರಕ್ಷಣೆಗಾಗಿ ಆಗ್ರಹಿಸಿತು.

‘ಜನರು ನಮ್ಮನ್ನು ಹೆಚ್ಚು ಅರಿತುಕೊಳ್ಳಬೇಕು. ಈ ಮೆರವಣಿಗೆಯೂ ನಮ್ಮವರಲ್ಲಿ ಧೈರ್ಯವನ್ನು, ಉಳಿದವರಲ್ಲಿ ನಮ್ಮನ್ನು ಸಹಜವೆಂದು ಗುರುತಿಸುವ ಅನಿವಾ‌ರ್ಯತೆಯನ್ನು ಸೃಷ್ಟಿಸುವಂತಾದರೆ ಸಾರ್ಥಕ’ ಎಂದು ಬೆಂಗಳೂರಿನ ಪ್ರವೀಣ್‌ ತಿಳಿಸಿದರು.

‘ನಾನು ‘ಗೇ’ ಆಗಿದ್ದು,‌ 20 ವರ್ಷದಿಂದ ಜೊತೆಗಾರನೊಂದಿಗೆ ಜೀವನ ನಡೆಸುತ್ತಿದ್ದೇನೆ. ನಮ್ಮ ಮನೆಯವರು ನಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ನಾವು ಇಷ್ಟು ದೀರ್ಘಕಾಲ ಸಾಂಗತ್ಯ ಹೊಂದಲು ಸಾಧ್ಯವಾಯಿತು. ನಮ್ಮಲ್ಲಿಯೂ ಕಲಹಗಳು ಉಂಟಾಗುತ್ತವೆ. ಆದರೆ, ಅವುಗಳನ್ನು ನಿವಾರಿಸಿಕೊಳ್ಳುವಲ್ಲಿ ಕುಟುಂಬವೂ ಸಹಕಾರ ನೀಡುತ್ತದೆ. ಸಮಾಜ ಹಾಗೂ ಕುಟುಂಬದ ಸಹಕಾರವಿಲ್ಲದೇ ನಾವು ಉತ್ತಮ ಜೀವನ ನಡೆಸುವುದು ಸಾಧ್ಯವಿಲ್ಲ’ ಎಂದರು.

‘ನಾವು ಶಾಸ್ತ್ರೋಕ್ತ ಮದುವೆಯ ಹಕ್ಕನ್ನು ಕೇಳುತ್ತಿಲ್ಲ. ನಮ್ಮ ಸಂಬಂಧಕ್ಕೆ ಕಾನೂನಾತ್ಮಕ ಮಾನ್ಯತೆ ಬೇಕು. ಬ್ಯಾಂಕ್‌ನಲ್ಲಿ ಸಾಲ ಪಡೆಯುವಾಗ, ಆಸ್ತಿ ಖರೀದಿಸುವಾಗ, ವೈದ್ಯಕೀಯ ಸಮಸ್ಯೆ ಎದುರಾದಾಗ ಅಥವಾ ಸಾವಿನಂತಹ ಸಂದರ್ಭದಲ್ಲಿ ನಮ್ಮ ಜೊತೆಯಾಗಿದ್ದವರಿಗೆ ಕಾನೂನಿನ ಸೌಲಭ್ಯಗಳು ದೊರೆಯಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಣತಿ ಪ್ರಕಾಶ್ ಮೊದಲಾದವರು ನೇತೃತ್ವ ವಹಿಸಿದ್ದರು.

ಹಿಂದುತ್ವ ಸೇ ಆಜಾದಿ:

ಜಾತಿವಾದದಿಂದ, ಮನುವಾದದಿಂದ ಹಾಗೂ ಹಿಂದುತ್ವದಿಂದಲೂ ಆಜಾದಿ ಬೇಕು ಎಂಬ ಕೂಗೂ ಕೇಳಿ ಬಂದಿತು. ‘ಧರ್ಮ ಮತ್ತು ಸಂಸ್ಕೃತಿ ಇಂತಹ ಮದುವೆಯನ್ನು ಒಪ್ಪುವುದಿಲ್ಲ’ ಎಂಬ ಹೇಳಿಕೆಯನ್ನು ಖಂಡಿಸಲಾಯಿತು. ಇದು ಹಿಂದೂ ಧರ್ಮದ ಹೇಳಿಕೆಯಲ್ಲ, ತೀವ್ರವಾದದ ಹಿಂದುತ್ವದ ಹೇಳಿಕೆ’ ಎಂದು ಬೆಂಗಳೂರಿನ ಶಿವಗೌರಿ ಆಕ್ರೋಶ ವ್ಯಕ್ತಪಡಿಸಿದರು.

ಎಲ್‌ಜಿಬಿಟಿಕ್ಯೂ ಒಕ್ಕೂಟದ ಹೋರಾಟಗಾರ ಅಯನ್‌ ಮಾತನಾಡಿ, ‘ಭಿಕ್ಷೆ ಬೇಡುತ್ತಿದ್ದ ತೃತೀಯ ಲಿಂಗಿಗಳನ್ನು ಮೈಸೂರಿನ ಪೊಲೀಸರು ಬಂಧಿಸಿದ ಘಟನೆಯನ್ನು ವಿರೋಧಿಸುವುದು ಕೂಡ ನಮ್ಮ ಮೆರವಣಿಗೆಯ ಉದ್ದೇಶ. ಭಿಕ್ಷೆ ಬೇಡುವ ಪರಿಸ್ಥಿತಿ ಸೃಷ್ಟಿಸಿರುವ ಸಮಾಜವನ್ನು ಪ್ರಶ್ನಿಸುವ ಕೆಲಸ ಧ್ವನಿಯಿರುವ ವರ್ಗಗಳು ಮಾಡುತ್ತಿಲ್ಲ. ಧ್ವನಿಯಿಲ್ಲದ ನಮ್ಮ ಮೇಲೆಯೇ ಯಾವಾಗಲೂ ದೌರ್ಜನ್ಯವಾದರೆ ಹೇಗೆ. ಈ ನಡಿಗೆ ನಮ್ಮ ಸ್ವಾಭಿಮಾನ ಮತ್ತು ಸಂಘಟನೆಯ ಸಂಕೇತ’ ಎಂದರು.

‘ಲವ್‌ ಇಸ್‌ ಲವ್‌’

‘ಲವ್‌ ಇಸ್‌ ಲವ್‌’ ಎಂಬ ಘೋಷಣೆಯ ಚಿತ್ರ ಹಿಡಿದ ಮೈಸೂರಿನ ನಂದಿತಾ ಹಾಗೂ ಮಗಳು ತನ್ವಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ನಂದಿತಾ ಮಾತನಾಡಿ, ‘ನಾನು ಇವರ ಹಕ್ಕು ಮತ್ತು ಸಹಜ ಪ್ರೇಮ ಬಯಸುವ ಆಯ್ಕೆಯನ್ನು ಗೌರವಿಸುತ್ತೇನೆ. ಮೈಸೂರಿನ ನಾಗರಿಕಳಾಗಿ ನನ್ನ ಬೆಂಬಲವನ್ನು ವ್ಯಕ್ತಪಡಿಸಲು ಆಗಮಿಸಿದ್ದೇನೆ’ ಎಂದರು.

‘ಮಗಳು ತನ್ವಿಗೆ ಇವರ ಇರುವಿಕೆ ಅರ್ಥವಾಗಬೇಕು ಎಂಬುದು ನನ್ನ ಆಸೆ. ನಾಳೆ ಇವರೊಂದಿಗೆ ಆಕೆ ಸಹಜವಾಗಿ ವರ್ತಿಸಬೇಕು’ ಎಂದರು.

ಎಲ್ಲರಂತೆಯೇ ನಮ್ಮ ಹಕ್ಕುಗಳನ್ನು ಸರ್ಕಾರ ಗೌರವಿಸಬೇಕು. ಸಾರ್ವಜನಿಕರೂ ನಮ್ಮನ್ನು ಸ್ವೀಕರಿಸಬೇಕು.

–ಟಿ.ಶಿವರಾಮು, 7 ರೈನ್‌ಬೋಸ್‌ ಸಂಘಟನೆಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.