ತೀರ್ಪು
ಮೈಸೂರು: ಮದ್ಯಸೇವನೆಗೆ ಹಣ ನೀಡಲಿಲ್ಲವೆಂದು ತಂಗಿಯ 7 ತಿಂಗಳ ಹೆಣ್ಣು ಮಗುವನ್ನೇ ಕೊಲೆ ಮಾಡಿದ್ದ ಅಪರಾಧಿಗೆ ಇಲ್ಲಿನ 6ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿದೆ.
ನಗರದ ಕನಕಗಿರಿಯ 5ನೇ ಕ್ರಾಸ್ ನಿವಾಸಿ ಕೆ.ರಾಜು ಶಿಕ್ಷೆಗೊಳಗಾದವ. ತರಕಾರಿ ವ್ಯಾಪಾರ ಮಾಡುತ್ತಿದ್ದ ಆತ ಕುಡಿತದ ಚಟಕ್ಕೆ ಒಳಗಾಗಿ ಕೆಲಸ ಮಾಡದೇ ಪ್ರತಿ ದಿನ ಮದ್ಯಪಾನ ಮಾಡಲು ತಾಯಿ ಸಿದ್ದಮ್ಮ ಮತ್ತು ಬಾಣಂತನಕ್ಕೆಂದು ತವರಿಗೆ ಬಂದಿದ್ದ ತಂಗಿ ರಮ್ಯಾ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದ. ಹಣ ನೀಡದಿದ್ದರೆ ಹೊಡೆಯುವುದು, ಕೊಲೆ ಬೆದರಿಕೆಯೂ ಹಾಕುತ್ತಿದ್ದ. 2022ರ ಏ.29ರಂದು ರಮ್ಯಾಳ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರಗಟ್ಟಿದ್ದ, ಆಕೆಯ ಮಗು ರುತಿಯನ್ನು ಕಬ್ಬಿಣದ ತಕ್ಕಡಿಯಿಂದ ಹೊಡೆದು ಸಾಯಿಸಿದ್ದ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್ ಜಿ.ಸಿ.ರಾಜು ತನಿಖಾಧಿಕಾರಿಯಾಗಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ವಿ.ಎಚ್.ದಯಾನಂದ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ತೀರ್ಪು ನೀಡಿದ್ದಾರೆ. ಎಂ.ಕಾಮಾಕ್ಷಿ ಸರ್ಕಾರದ ಪರ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.