ಆರ್ಭಟಿಸುತ್ತಾ ಧುಮ್ಮಿಕ್ಕುತ್ತಿರುವ ರುದ್ರ ರಮಣೀಯ ದೃಶ್ಯ
ತುಂತುರು ಮಳೆ ನಡುವೆ ಪ್ರಕೃತಿಯ ಐಸಿರಿ ಸವಿಯುತ್ತಿರುವ ಜನ
ಅರಿಸಿನ, ಕುಂಕುಮ, ಹೂವು ಇಟ್ಟು ಭಕ್ತಿ ಸಮರ್ಪಣೆ
ಸಾಲಿಗ್ರಾಮ: ನಾಡಿನ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದು, ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದ ಹೊರವಲಯದ ಪ್ರಕೃತಿಯ ಐಸಿರಿ ನಡುವೆ ಇರುವ ‘ಧನುಷ್ಕೋಟಿ’ ಜಲಪಾತ ಆರ್ಭಟಿಸುತ್ತಾ ಧುಮ್ಮಿಕ್ಕುತ್ತಿ ರುವ ರುದ್ರ ರಮಣೀಯ ದೃಶ್ಯ ಪ್ರವಾಸಿ ಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ವಾಡಿಕೆಯಂತೆ ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡು ಕಾವೇರಿ ನದಿ ಮೈದುಂಬಿ ಹರಿಯುವ ದಿನಗಳಲ್ಲಿ ‘ಧನುಷ್ಕೋಟಿ’ ಜಲಪಾತಕ್ಕೆ ಜೀವಕಳೆ ಬರುತ್ತಿತ್ತು. ಆದರೆ, ಈ ವರ್ಷ ಮೇ ತಿಂಗಳಿನಲ್ಲೇ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಜಲಪಾತದಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಮಹಿಳೆಯರು ಮತ್ತು ಮಕ್ಕಳಾದಿಯಾಗಿ ಎಲ್ಲರೂ ನದಿ ದಂಡೆ ಮೇಲೆ ನಿಂತು ಪ್ರಕೃತಿ ಐರಿಸಿಯನ್ನು ಸವಿಯುವಂತೆ ಮಾಡಿದೆ.
ಕಾವೇರಿಯ ಸೊಬಗನ್ನು ಕಣ್ತುಂಬಿ ಕೊಳ್ಳಲು ಪ್ರವಾಸಿಗರು ಮಳೆಯ ನಡುವೆಯೂ ಬರುತ್ತಿದ್ದಾರೆ. ಸುಮಾರು 50 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ವೈಭವವನ್ನು ನೋಡುವುದೇ ಒಂದು ಚೆಂದ. ನದಿ ದಂಡೆ ಮೇಲೆ ನಿಂತು ಮಳೆಯನ್ನೂ ಲೆಕ್ಕಿಸದೆ ವೀಕ್ಷಿಸುತ್ತಿದ್ದಾರೆ. ಕಾವೇರಿ ನದಿಯಲ್ಲಿ ರಾಮನ ಪತ್ನಿ ಸೀತಾ ಮಾತೆಗಾಗಿ ನಿರ್ಮಿಸಿರುವ ‘ಧನುಷ್ಕೋಟಿ’ಗೆ ಮಹಿಳೆಯರು ಅರಿಸಿನ, ಕುಂಕುಮ ಮತ್ತು ಹೂವು ಇಟ್ಟು ಭಕ್ತಿ ಮೆರೆಯುತ್ತಿದ್ದಾರೆ.
‘ನದಿ ದಂಡೆ ಮೇಲಿರುವ ಕೋದಂಡ ರಾಮನ ದೇವಾಲಯದೊಳಗೆ ಹೋದರೆ ನದಿಯ ಆರ್ಭಟವು ಜನರ ಕಿವಿಗೆ ಕೊಂಚವೂ ಕೇಳಿಸದಿರುವುದು ಸೋಜಿಗವೇ ಸರಿ’ ಎಂದು ಪ್ರವಾಸಿಗರು ಅಚ್ಚರಿ ವ್ಯಕ್ತಪಡಿಸುತ್ತಾರೆ.
ಶ್ರೀರಾಮ ವನವಾಸ ಮಾಡುತ್ತಿದ್ದ ದಿನಗಳಲ್ಲಿ ಪತ್ನಿ ಸೀತಾಮಾತೆ, ನೀರು ಬೇಕು ಎಂದು ಕೇಳಿದಾಗ ಬಿಲ್ಲು ಬಿಟ್ಟು ನೀರು ಬರುವಂತೆ ಮಾಡಿದ ಸ್ಥಳವನ್ನು ರಾಮನ ಭಕ್ತರು ‘ಧನುಷ್ಕೋಟಿ’ ಎಂದು ಕರೆದರು. ಇದು ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದ ಬಳಿ ಆರ್ಭಟಿಸಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಕಾಣಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.