ADVERTISEMENT

ಚಿತ್ರಕಲೆ, ತತ್ವಪದ ಗಾಯನದಲ್ಲಿ ಛಾಪು: ಅಂಗವೈಕಲ್ಯ ಮೆಟ್ಟಿನಿಂತ ಕೃಷ್ಣಕುಮಾರ್‌

ಪೋಲಿಯೊ ಪೀಡಿತರಾಗಿದ್ದ ಕಲಾವಿದ

ರವಿಕುಮಾರ್
Published 9 ಫೆಬ್ರುವರಿ 2022, 7:34 IST
Last Updated 9 ಫೆಬ್ರುವರಿ 2022, 7:34 IST
ಪೆನ್ಸಿಲ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ ಚಿತ್ರ ಬಿಡಿಸಿದ ಕೃಷ್ಣಕುಮಾರ್
ಪೆನ್ಸಿಲ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ ಚಿತ್ರ ಬಿಡಿಸಿದ ಕೃಷ್ಣಕುಮಾರ್   

ಹಂಪಾಪುರ: ಹುಟ್ಟಿದ ಎರಡು ವರ್ಷಕ್ಕೆ ಪೋಲಿಯೊ ಪೀಡಿತರಾದ ಆ ವ್ಯಕ್ತಿಗೆ ಒಂದು ಕಾಲಿನ ಸ್ವಾಧೀನವಿಲ್ಲ. ಅಂಗವೈಕಲ್ಯವನ್ನೂ ಮೆಟ್ಟಿನಿಂತ ಅವರು, ಚಿತ್ರಕಲೆ, ಶಿಲ್ಪಕಲೆ ಹಾಗೂ ತತ್ವಪದ ಗಾಯನದಲ್ಲಿ ಛಾಪು ಮೂಡಿಸಿದ್ದಾರೆ.

ಎಚ್.ಡಿ.ಕೋಟೆ ಪಟ್ಟಣದ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಚಿತ್ರಕಲಾ ಶಿಕ್ಷಕ ಕೃಷ್ಣಕುಮಾರ್‌ ಈ ಸಾಧಕ. ಇವರು ಜಲವರ್ಣ, ತೈಲ
ವರ್ಣದಲ್ಲಿ ಅನೇಕ ಕಲಾಕೃತಿಗಳನ್ನು ರಚಿಸಿದ್ದಾರೆ. ಪೆನ್ಸಿಲ್‌ ಬಳಸಿ ವ್ಯಕ್ತಿ ಚಿತ್ರ ರಚಿಸುವುದರಲ್ಲಿ ಇವರು ಸಿದ್ಧಹಸ್ತರು. ಸಿನಿಮಾ ನಟರಾದ ಡಾ.ರಾಜಕುಮಾರ್‌, ವಿಷ್ಣುವರ್ಧನ್‌, ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಅನೇಕ ನಟರ ಚಿತ್ರಗಳನ್ನು ಬಿಡಿಸಿದ್ದಾರೆ. ಇದ
ಲ್ಲದೆ, ಜನಸಾಮಾನ್ಯರ ಚಿತ್ರಗಳನ್ನೂ ಬಿಡಿಸಿದ್ದಾರೆ.

ಮಹಾತ್ಮ ಗಾಂಧೀಜಿ, ಡಾ.ಬಿ.ಆರ್‌.ಅಂಬೇಡ್ಕರ್‌, ಸರ್‌ ಎಂ.ವಿಶ್ವೇಶ್ವರಯ್ಯ, ಆದಿಚುಂಚನಗಿರಿ ಮಠದ ಬಾಲಗಂಗಾಧರ
ನಾಥ ಸ್ವಾಮೀಜಿ ಸೇರಿದಂತೆ ಅನೇಕ ಮಹನೀಯರ ಮೂರ್ತಿಗಳನ್ನು ಜೇಡಿಮಣ್ಣಿನಲ್ಲಿ ನಿರ್ಮಿಸಿದ್ದಾರೆ. ಜೇಡಿಮಣ್ಣಿನಲ್ಲಿ ವಿವಿಧ ಪ್ರಾಣಿಗಳನ್ನೂ ತಯಾರಿಸಿದ್ದಾರೆ. ಮಕ್ಕಳಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ.

ADVERTISEMENT

ಗೋಪಿದಾಸಯ್ಯ ಮತ್ತು ದೊಡ್ಡಪ್ಪ ಕೃಷ್ಣಯ್ಯ ಮಾರ್ಗದರ್ಶನದಲ್ಲಿ ಶೋಕಗೀತೆ, ಸಾವಿನ ಭಜನೆ, ಜಾನಪದ ಗೀತೆ ಹಾಗೂ ತತ್ವಪದ ಗಾಯನದಲ್ಲೂ ತೊಡಗಿಸಿಕೊಂಡಿದ್ದಾರೆ. 750ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ಎಚ್.ಮಟಕೆರೆ ಗ್ರಾಮದ ಗೋಪಿದಾಸಯ್ಯ ಮತ್ತು ಬಸಮ್ಮ ದಂಪತಿಯ ನಾಲ್ಕನೇ ಪುತ್ರರಾದ ಕೃಷ್ಣಕುಮಾರ್, ಮೈಸೂರಿನ ಕಲಾನಿಕೇತನ ಚಿತ್ರಕಲಾ ವಿದ್ಯಾಲಯ ಮತ್ತು ಮಂಡ್ಯದ ಜೈಭಾರತ್ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಪದವಿ ಪಡೆದಿದ್ದರು. ಇವರ ಕಲಾಕೃತಿಗಳು ಮೈಸೂರು ಹಾಗೂ ಮಂಡ್ಯದಲ್ಲಿ ಪ್ರದರ್ಶನಗೊಂಡು, ಕಲಾಸಕ್ತರ ಗಮನ ಸೆಳೆದಿದ್ದವು.

*
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಬಹುಮುಖ ಪ್ರತಿಭೆ ಕೃಷ್ಣಕುಮಾರ್‌ ಅವರ ಕಲೆಯನ್ನು ಗುರುತಿಸಿ, ಪ್ರೋತ್ಸಾಹ ನೀಡಬೇಕು
-ಬಿ.ಡಿ.ಮಲ್ಲಿಕಾರ್ಜುನ, ಬೆಳಗನಹಳ್ಳಿ

*
ಚಿತ್ರಕಲಾವಿದರಿಗೆ ಪ್ರೋತ್ಸಾಹದ ಕೊರತೆ ಇದೆ. ಸರ್ಕಾರಿ ಶಾಲೆಗಳಿಗೆ ಚಿತ್ರಕಲಾ ಶಿಕ್ಷಕರನ್ನು ನೇಮಕ ಮಾಡಬೇಕು.
-ಕೃಷ್ಣಕುಮಾರ್, ಚಿತ್ರಕಲಾ ಶಿಕ್ಷಕ

ಜೇಡಿಮಣ್ಣಿನಲ್ಲಿ ಕಲಾಕೃತಿ ರಚಿಸಿರುವ ಕೃಷ್ಣಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.