
ಮೈಸೂರು: ಜೀವವೈವಿಧ್ಯದ ಆಗರವಾದ ‘ಲಿಂಗಾಂಬುಧಿ’ ಕೆರೆ ಮರಣಶಯ್ಯೆಯತ್ತ ಸಾಗಿದೆ. ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿರುವ ಜಲನಿಧಿಗೆ ಪಾಲಿಕೆಯ ಉಸ್ತುವಾರಿಯ ಬಡಾವಣೆಗಳಿಂದ ರಾಜಕಾಲುವೆ ಮೂಲಕ ಕೊಳಚೆ ನೀರು, ಪ್ಲಾಸ್ಟಿಕ್ ಬಾಟಲಿಗಳ ರಾಶಿ ನಿತ್ಯ ಸೇರುತ್ತಿದೆ.
ದಟ್ಟಗಳ್ಳಿ, ಕನಕದಾಸ ನಗರ ಸೇರಿದಂತೆ ವಿವಿಧ ಬಡಾವಣೆಗಳಿಂದ ಬರುವ ಒಳಚರಂಡಿ ಪೈಪ್, ಸುಪ್ರೀಂ ಪಬ್ಲಿಕ್ ಶಾಲೆಯ ಬಳಿಯ ಉದ್ಯಾನದ ಪಕ್ಕದಲ್ಲಿನ ರಾಜಕಾಲುವೆ ಮಧ್ಯೆ ಹಾದು ಹೋಗಿದೆ. ಪೈಪ್ ಒಡೆದು ನೀರು ಉಕ್ಕುತ್ತಿದ್ದು, ಚೆಕ್ ಡ್ಯಾಂನಂತೆ ಕೊಳಚೆ ನೀರು ನಿಂತಿದೆ. ಅದರಿಂದ ಅಕ್ಕಪಕ್ಕದಲ್ಲೇ ಇರುವ ಶಾಲೆಗಳ ಮಕ್ಕಳು, ಸ್ಥಳೀಯ ನಿವಾಸಿಗಳು ಹೈರಾಣಾಗಿದ್ದಾರೆ.
‘ಒಂದೆಡೆ ಒತ್ತುವರಿಯಿಂದ ಕೆರೆಯ ಬಫರ್ ವಲಯವು ನಲುಗಿದೆ. ರಾಜಕಾಲುವೆಗೆ ಹೊಂದಿಕೊಂಡಿರುವ ಉದ್ಯಾನಗಳು ಸೊರಗಿವೆ. ಸಹಿಸಲಸಾಧ್ಯ ದುರ್ವಾಸನೆಯು ಇಡೀ ಬಡಾವಣೆಯನ್ನು ತುಂಬಿದ್ದು, ನಿವಾಸಿಗಳಿಗೆ ಉಸಿರಾಟವೇ ಕಷ್ಟವಾಗಿದೆ. ಜೊತೆಗೆ ಸೊಳ್ಳೆಗಳ ಕಾಟ ಹೆಚ್ಚಿದ್ದು, ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ’ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಸಂಚಕಾರ: ಐಯುಸಿಎನ್ ಕೆಂಪು ಪಟ್ಟಿಯಲ್ಲಿರುವ ಅಳಿವಿನಂಚಿನ ಬಾನಾಡಿಗಳೂ ಸೇರಿದಂತೆ ಮಧ್ಯ ಏಷ್ಯಾದಿಂದ ಇಲ್ಲಿಗೆ ಬರುವ ವಲಸೆ ಹಕ್ಕಿಗಳು, 210 ವಿವಿಧ ಜಾತಿಯ ಹಕ್ಕಿಗಳು, 44 ಜೌಗು ಹಕ್ಕಿಗಳು ಹಾಗೂ 18 ವಲಸೆ ಹಕ್ಕಿಗಳಿಗೆ ಕೊಳಚೆ ನೀರು ಸಂಚಕಾರವಾಗಿ ಪರಿಣಮಿಸಿದೆ.
ಇಲ್ಲಿನ ದ್ವೀಪಗಳು, ತೀರದಲ್ಲಿ 3 ಸಾವಿರ ಹಕ್ಕಿಗಳು ನೆಲೆಸಿದ್ದು, 54 ಜಾತಿಯ ಬಣ್ಣದ ಚಿಟ್ಟೆಗಳನ್ನು ಹೊಂದಿರುವ ಜೀವ ಪರಿಸರ ವ್ಯವಸ್ಥೆಯು ಅವಸಾನದತ್ತ ಸಾಗಿದೆ. ಕೊಳಚೆ ನೀರಿನಿಂದ ಕೆರೆಯನ್ನು ‘ಕತ್ತೆಕಿವಿ’ (ವಾಟರ್ ಹಯಸಿಂತ್) ಆವರಿಸುತ್ತಿದ್ದು, ಕೆರೆಯ ಜೀವ ವೈವಿಧ್ಯವನ್ನೇ ನುಂಗಲು ಸಜ್ಜಾಗಿದೆ.
ತೆರಿಗೆಯೇಕೆ ಕಟ್ಟಬೇಕು: ‘ಇಲ್ಲಿನ ಪ್ರತಿ ಮನೆಯವರೂ ಪಾಲಿಕೆಗೆ ವಾರ್ಷಿಕ ₹ 12 ಸಾವಿರ ತೆರಿಗೆ ಕಟ್ಟುತ್ತಿದ್ದಾರೆ. ನೆಮ್ಮದಿ ಇಲ್ಲದಾಗಿದೆ. ತೆರಿಗೆ ವಸೂಲಿ ಮಾಡುವುದೇಕೆ? ಈ ಬಗ್ಗೆ ಎಲ್ಲ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಇಲ್ಲಿನ ನಿವಾಸಿಯಾದ ನೌಕಾಪಡೆ ನಿವೃತ್ತ ಅಧಿಕಾರಿ ಕೆ.ವಿ.ರಂಜಿತ್ ‘ಪ್ರಜಾವಾಣಿ’ ಜೊತೆ ಬೇಸರ ವ್ಯಕ್ತಪಡಿಸಿದರು.
‘ಈ ಹಿಂದೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೂ ದೂರು ಸಲ್ಲಿಸಿದ್ದೆವು. ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಅರಣ್ಯ ಇಲಾಖೆಯ ಡಿಸಿಎಫ್ ಸೇರಿದಂತೆ ಎಲ್ಲರಿಗೂ ಪ್ರತಿ ವರ್ಷವೂ ನಿರಂತರವಾಗಿ ಪತ್ರ ಬರೆದಿದ್ದರೂ, ಇತ್ತ ಕಡೆ ತಿರುಗಿಯೋ ನೋಡಿಲ್ಲ. ವ್ಯವಸ್ಥೆ ಜಡ್ಡುಗಟ್ಟಿದೆ. ಹಸಿರು ಅಭಿಯಾನ, ಸ್ವಚ್ಛ ಮೈಸೂರು ಜಾಗೃತಿ ಪ್ರಚಾರಕ್ಕಷ್ಟೇ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದುರ್ವಾಸನೆ, ಸಾಂಕ್ರಾಮಿಕ ರೋಗ ಭೀತಿ ಶಾಲಾ ಮಕ್ಕಳು, ನಾಗರಿಕರು ಹೈರಾಣ ಆವರಿಸುತ್ತಿರುವ ‘ಕತ್ತೆಕಿವಿ’; ಜೀವವೈವಿಧ್ಯಕ್ಕೆ ಕುತ್ತು
ರಾಜಕಾಲುವೆಯಲ್ಲಿ ಪ್ಲಾಸ್ಟಿಕ್ ಬಾಟಲಿ ಕವರ್ ಸೇರಿದಂತೆ ತ್ಯಾಜ್ಯ ಸೇರದಂತೆ ಮಾಡಲು ಶಾಶ್ವತ ಜಾಲರಿಗಳನ್ನು ಅಲ್ಲಲ್ಲಿ ಅಳವಡಿಸಬೇಕುಪ್ರೊ.ಕೆ.ಎ.ನಾಣಯ್ಯ ಮೈಸೂರು ವಿವಿ ಬಡಾವಣೆ
ಮನೆಗಳಿಗೆ ದುರ್ವಾಸನೆ ಬರುತ್ತಿದೆ. ಜೀವಿಸುವ ಹಕ್ಕನ್ನು ಕಸಿಯಲಾಗಿದೆ. 2021ರಿಂದ ನಿರಂತರವಾಗಿ ಅಧಿಕಾರಿಗಳಿಗೆ ದೂರು ಸಲ್ಲಿಸುತ್ತಿದ್ದರೂ ಆಸಕ್ತಿ ವಹಿಸುತ್ತಿಲ್ಲಕೆ.ವಿ.ರಂಜಿತ್ ನೌಕಾಪಡೆ ನಿವೃತ್ತ ಅಧಿಕಾರಿ
ರಾಜಕಾಲುವೆಯಲ್ಲಿ ಮಳೆ ನೀರು ಮಾತ್ರವೇ ಹರಿಯಬೇಕು. ಕೂಡಲೇ ಪರಿಶೀಲಿಸಿ ಕ್ರಮ ವಹಿಸುತ್ತೇವೆ. ನಾನೂ ಖುದ್ದು ಭೇಟಿ ಮಾಡುವೆಶೇಖ್ ತನ್ವೀರ್ ಆಸೀಫ್ ಪಾಲಿಕೆ ಆಯುಕ್ತ
198 ವರ್ಷದ ಐತಿಹಾಸಿಕ ಕೆರೆ ಲಿಂಗಾಂಬುಧಿ ಕೆರೆಯ ಜಲಾನಯನ ಪ್ರದೇಶವು 22 ಚದರ ಕಿ.ಮೀ ವ್ಯಾಪಿಸಿದೆ. ನಗರದ ನೈರುತ್ಯ ಭಾಗದಲ್ಲಿ ವಿಶಾಲವಾಗಿ ಹರಡಿರುವ ‘ಲಿಂಗಾಂಬುಧಿ ಕೆರೆ’ಯನ್ನು ಮಹಾರಾಣಿ ಕೃಷ್ಣವಿಲಾಸ ಲಿಂಗರಾಜಮ್ಮಣ್ಣಿ ಸವಿನೆನಪಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು 1828ರಲ್ಲಿ 250 ಎಕರೆ ವಿಸ್ತೀರ್ಣದ ಲಿಂಗಾಂಬುಧಿ ಕೆರೆಯನ್ನು ಕಟ್ಟಿಸಿದರು. 150 ಎಕರೆಯಲ್ಲಿ ಜಲರಾಶಿಯಿದ್ದರೆ 100 ಎಕರೆಯಲ್ಲಿ ಮೀಸಲು ಅರಣ್ಯ ಹಬ್ಬಿದೆ. ಐತಿಹಾಸಿಕ ಮಹಾಲಿಂಗೇಶ್ವರ ದೇಗುಲವೂ ಕೆರೆ ಆವರಣದಲ್ಲಿದೆ. ಪಾರಂಪರಿಕ ಮಹತ್ವವಿರುವ ಕೆರೆಗೆ ಒತ್ತುವರಿ ಪ್ರಯತ್ನವೂ ನಡೆದಿದೆ. ಕೆರೆಯ ಮೇಲಿನ ಭಾಗದಲ್ಲಿದ್ದ ಜಾಗಗಳನ್ನು ಸಿ.ಎ ನಿವೇಶನಗಳನ್ನಾಗಿ ಹಂಚಿಕೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.