ADVERTISEMENT

ಸರಗೂರಿನಲ್ಲಿ ಇಂದು ಕನ್ನಡ ಜಾತ್ರೆ

ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನ: ಸಾಂಸ್ಕೃತಿಕ ವೈಭವಕ್ಕೆ ವೇದಿಕೆ ಸಜ್ಜು

ಎಸ್.ಆರ್.ನಾಗರಾಮ
Published 17 ಜನವರಿ 2025, 5:24 IST
Last Updated 17 ಜನವರಿ 2025, 5:24 IST
ಸರಗೂರು ಪಟ್ಟಣದಲ್ಲಿ ಸಾಹಿತ್ಯ ಸಮ್ಮೇಳನ ಪ್ರಯುಕ್ತ ದೀಪಾಲಂಕಾರ ಮಾಡಿರುವುದು
ಸರಗೂರು ಪಟ್ಟಣದಲ್ಲಿ ಸಾಹಿತ್ಯ ಸಮ್ಮೇಳನ ಪ್ರಯುಕ್ತ ದೀಪಾಲಂಕಾರ ಮಾಡಿರುವುದು   

ಸರಗೂರು: ತಾಲ್ಲೂಕು ಇಂದು (ಜ.17ರಂದು) ಕನ್ನಡ ಜಾತ್ರೆಗೆ ಸಜ್ಜಾಗುತ್ತಿದ್ದು, ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆ ಸಜ್ಜಾಗಿದೆ.

ಎಚ್.ಡಿ.ಕೋಟೆ ತಾಲ್ಲೂಕಿನಿಂದ ಬೇರ್ಪಟ್ಟ ನಂತರ ಇದೇ ಪ್ರಥಮವಾಗಿ ಸಮ್ಮೇಳನ ನಡೆಯುತ್ತಿದ್ದು, ಸಾಹಿತಿ ಡಾ. ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.

ಐದು ಸಾವಿರ ಜನರು ಸೇರಲು ಆಯೋಜನೆ ಮಾಡಲಾಗಿದ್ದು, ಆರೋಗ್ಯ ಚಿಕಿತ್ಸಾ ಕೇಂದ್ರ, ರಕ್ತದಾನ ಕೇಂದ್ರ, ಪುಸ್ತಕ ಮಳಿಗೆಗೆ ವ್ಯವಸ್ಥೆ ಮಾಡಲಾಗಿದೆ. ಸರಗೂರು ಬಸ್ ನಿಲ್ದಾಣ, ಮಹಾವೀರ ವೃತ್ತ, ಒಂದನೇ ಮುಖ್ಯರಸ್ತೆ, ಎರಡನೇ ಮುಖ್ಯರಸ್ತೆಗಳಲ್ಲಿ ಕನ್ನಡ ಬಾವುಟ, ಫ್ಲೆಕ್ಸ್ ರಾರಾಜಿಸುತ್ತಿವೆ. ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ.

ADVERTISEMENT

ವೇದಿಕೆ: ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆ ವ್ಯವಸ್ಥೆ ಮಾಡಲಾಗಿದೆ. ಪೌರ ಕಾರ್ಮಿಕರು ಎರಡು ದಿನದಿಂದ ಸ್ವಚ್ಛತೆ ಕೆಲಸ ನಿರ್ವಹಿಸುತ್ತಿದ್ದಾರೆ. ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಇರುವ ಮಂದಿರದಲ್ಲಿ ಊಟದ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಶಾಸಕ ಅನಿಲ್ ಚಿಕ್ಕಮಾದು ಉಪಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದ್ದಾರೆ.

ಬಿಡುಗಲು ಪಡುವಲ ವಿರಕ್ತ ಮಠದಲ್ಲಿ ಗಣ್ಯರಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸುಮಾರು 8 ರಿಂದ 10 ಜಾನಪದ ಕಲಾ ತಂಡಗಳು ಭಾಗವಹಿಸಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ಸನ್ಮಾನಕ್ಕೆ ತಯಾರಿ ನಡೆದಿದೆ.

ಬೆಳಿಗ್ಗೆ 8ಕ್ಕೆ ಶಾಸಕ ಅನಿಲ್ ಚಿಕ್ಕಮಾದು ರಾಷ್ಟ್ರ ಧ್ವಜಾರೋಹಣ, ತಹಶೀಲ್ದಾರ್ ಮೋಹನಕುಮಾರಿ ನಾಡ ಧ್ವಜಾರೋಹಣ ಹಾಗೂ ಕಸಾಪ ಅಧ್ಯಕ್ಷ ಎಂ.ಕೆಂಡಗಣ್ಣಸ್ವಾಮಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದ ಬಳಿಕ ಪೂರ್ಣಕುಂಭ ಹಾಗೂ ವಿವಿಧ ಜಾನಪದ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಪ್ರಾರಂಭಗೊಳ್ಳಲಿದೆ.

ಪಟ್ಟಣ ಪಂಚಾಯತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ಶಿವಕುಮಾರ್, ಸದಸ್ಯೆ ಹೇಮಾವತಿ, ಚೈತ್ರಾ, ಸಣ್ಣ ತಾಯಮ್ಮ, ಚಂದ್ರಕಲಾ, ನೂರಾಳಸ್ವಾಮಿ, ಚೈತ್ರಾ, ಉಮಾ, ಶ್ರೀನಿವಾಸ್, ದಿವ್ಯಾ, ಚೆಲುವ ಕೃಷ್ಣ, ವಿನಾಯಕ ಪ್ರಸಾದ್ ಭಾಗವಹಿಸಲಿದ್ದಾರೆ.

ಬೆಳಿಗ್ಗೆ 10.30ಕ್ಕೆ ದಡದಹಳ್ಳಿಯ ಗುರುಮಲ್ಲೇಶ್ವರ ದಾಸೋಹ ಮಠದ ಷಡಕ್ಷರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಸಚಿವ ಕೆ.ವೆಂಕಟೇಶ್, ಶಾಸಕ ಅನಿಲ್ ಚಿಕ್ಕಮಾದು, ಸಂಸದ ಸುನೀಲ್ ಬೋಸ್, ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಮಹೇಶ್ ಜೋಷಿ, ಎಂ.ಕೆಂಡಗಣ್ಣಸ್ವಾಮಿ ಭಾಗಿಯಾಗಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಡಿ.ರವಿಶಂಕರ್ ಭಾಗವಹಿಸುವರು.

ಎಚ್.ಡಿ.ಕೋಟೆ ತಾಲ್ಲೂಕಿನ ಭಾಗವಾಗಿದ್ದಾಗ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಬಿ.ಸತೀಶ್ ಕುಮಾರ್ ಅವರ ಅವಧಿಯಲ್ಲಿ 1992ರಲ್ಲಿ ಹಾಗೂ ಕನ್ನಡ ಪ್ರಮೋದ್ ಅವರ ಅವಧಿಯಲ್ಲಿ 2016ರಲ್ಲಿ ಸಮ್ಮೇಳನ ನಡೆದಿತ್ತು.

ಸರಗೂರಿನಲ್ಲಿ ತಾಲ್ಲೂಕು ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಸ್ವಯಂ ಪ್ರೇರಿತರಾಗಿ ಇಲ್ಲಿನ ಜನತೆ ಸಂಘ-ಸಂಸ್ಥೆಗಳು ಇಲಾಖೆಗಳು ಸಹಕಾರ ನೀಡುತ್ತಿದ್ದಾರೆ
ಎಂ.ಕೆಂಡಗಣ್ಣಸ್ವಾಮಿ ಕಸಾಪ ಅಧ್ಯಕ್ಷ ಸರಗೂರು

ವಿಚಾರ ಗೋಷ್ಠಿ ಸಾಂಸ್ಕೃತಿಕ ವೈಭವ ಅನಾವರಣ

ಉದ್ಘಾಟನೆ ಬಳಿಕ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 3ಕ್ಕೆ ವಿಚಾರ ಗೋಷ್ಠಿಗಳು ಆರಂಭಗೊಳ್ಳಲಿದ್ದು ಮೊದಲ ಗೋಷ್ಠಿಯಲ್ಲಿ ‘ಸರಗೂರು ತಾಲ್ಲೂಕು ದರ್ಶನ’ ಕುರಿತು ಚಲನಚಿತ್ರ ನಿರ್ದೇಶಕ ಕಾರ್ತಿಕ್ ಹಾಗೂ ಕೃತಿಕಾ ಗಣೇಶ್ ವಿಚಾರ ಮಂಡನೆ ಮಾಡುವರು. ಈ ವಿಚಾರಗೋಷ್ಠಿಯನ್ನು ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಉದ್ಘಾಟಿಸಲಿದ್ದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸುವರು 3 ಗಂಟೆಗೆ ಆರಂಭಗೊಳ್ಳುವ ಎರಡನೇ ವಿಚಾರಗೋಷ್ಠಿಯಲ್ಲಿ ‘ಕನ್ನಡ ಶಾಲೆಗಳು-ಇತ್ತೀಚಿನ ಬೆಳವಣಿಗೆ’ ಕುರಿತು ಎಚ್.ಬಿ.ಬೆಟ್ಟಸ್ವಾಮಿ ವಿಚಾರ ಮಂಡನೆ ಮಾಡುವರು. ಲೇಖಕ ಎಂ.ಎನ್.ರವಿಶಂಕರ್ ಆಶಯ ಭಾಷಣ ಮಾಡಲಿದ್ದಾರೆ. ಸಂಜೆ 4ಕ್ಕೆ ಆಚಾರ್ಯ ವಿದ್ಯಾಕುಲದ ಪ್ರಾಧ್ಯಾಪಕ ಹಾಗೂ ಕುಲಸಚಿವ ಎಚ್.ಪಿ.ಮೋಹನ್‌ಕುಮಾರ್ ಶಾಸ್ತ್ರಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು ಯುವ ಚಿಂತಕ ಗ್ರಾಮೀಣ ಮಹೇಶ್ ಮಾತನಾಡುವರು. ಸಂಜೆ 6 ಗಂಟೆಗೆ ಶಾಸಕ ಅನಿಲ್ ಚಿಕ್ಕಮಾದು ನೇತೃತ್ವದಲ್ಲಿ ಸಮಾರೋಪ ಬಳಿಕ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.