ADVERTISEMENT

ಪ್ರೀತಿಯಿದ್ದರೆ ಮಾತ್ರ ಶಿಕ್ಷಕ ವೃತ್ತಿ ಆಯ್ಕೆ ಮಾಡಿ: ಡಾ.ಶಾಂತವ್ರತಾನಂದ ಸ್ವಾಮೀಜಿ

ರಾಮಕಷ್ಣ ಆಶ್ರಮದ ಮೈಸೂರು ಘಟಕದ ಅಧ್ಯಕ್ಷರ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 10:18 IST
Last Updated 10 ಜೂನ್ 2019, 10:18 IST
ಮೈಸೂರು ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾಣಿಜ್ಯ ಉಪನ್ಯಾಸಕರಿಗೆ ಐದು ದಿನಗಳ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮವನ್ನು ರಾಮಕಷ್ಣ ಆಶ್ರಮದ ಮೈಸೂರು ಘಟಕದ ಅಧ್ಯಕ್ಷ ಡಾ.ಶಾಂತವ್ರತಾನಂದ ಸ್ವಾಮೀಜಿ ಉದ್ಘಾಟಿಸಿದರು. ಮೈಸೂರು ವಿಶ್ವವಿದ್ಯಾಲಯದ ಯುಜಿಸಿ–ಎಚ್‌ಆರ್‌ಡಿಸಿ ನಿರ್ದೇಶಕಿ ಡಾ.ಮಿಡತಲ ರಾಣಿ, ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಮರೀಗೌಡ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್‌, ಅಧ್ಯಕ್ಷ ಗುಂಡಪ್ಪಗೌಡ, ಖಜಾಂಚಿ ಶ್ರೀಶೈಲ ರಾಮಣ್ಣನವರ್‌ ಇದ್ದಾರೆ
ಮೈಸೂರು ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾಣಿಜ್ಯ ಉಪನ್ಯಾಸಕರಿಗೆ ಐದು ದಿನಗಳ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮವನ್ನು ರಾಮಕಷ್ಣ ಆಶ್ರಮದ ಮೈಸೂರು ಘಟಕದ ಅಧ್ಯಕ್ಷ ಡಾ.ಶಾಂತವ್ರತಾನಂದ ಸ್ವಾಮೀಜಿ ಉದ್ಘಾಟಿಸಿದರು. ಮೈಸೂರು ವಿಶ್ವವಿದ್ಯಾಲಯದ ಯುಜಿಸಿ–ಎಚ್‌ಆರ್‌ಡಿಸಿ ನಿರ್ದೇಶಕಿ ಡಾ.ಮಿಡತಲ ರಾಣಿ, ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಮರೀಗೌಡ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್‌, ಅಧ್ಯಕ್ಷ ಗುಂಡಪ್ಪಗೌಡ, ಖಜಾಂಚಿ ಶ್ರೀಶೈಲ ರಾಮಣ್ಣನವರ್‌ ಇದ್ದಾರೆ   

ಮೈಸೂರು: ಶಿಕ್ಷಕ ವೃತ್ತಿಯ ಬಗ್ಗೆ ಪ್ರೀತಿಯಿದ್ದಲ್ಲಿ ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ರಾಮಕಷ್ಣ ಆಶ್ರಮದ ಮೈಸೂರು ಘಟಕದ ಅಧ್ಯಕ್ಷ ಡಾ.ಶಾಂತವ್ರತಾನಂದ ಸ್ವಾಮೀಜಿ ಕಿವಿಮಾತು ಹೇಳಿದರು.

ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾಣಿಜ್ಯ ಉಪನ್ಯಾಸಕರಿಗೆ ಐದು ದಿನಗಳ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇವಲ ಸಂಬಳಕ್ಕಾಗಿ ಶಿಕ್ಷಕ ವೃತ್ತಿಯನ್ನು ನಡೆಸಲು ಸಾಧ್ಯವಿಲ್ಲ. ಏಕೆಂದರೆ, ಇಡೀ ದೇಶವೊಂದನ್ನು ಕಟ್ಟಬೇಕಾದ ಜವಾಬ್ದಾರಿ ಶಿಕ್ಷಕರ ಹೆಗಲ ಮೇಲಿರುತ್ತದೆ. ಒಬ್ಬ ಕೆಟ್ಟ ಎಂಜಿನಿಯರ್‌ ಕಟ್ಟಡವೊಂದನ್ನು ಸರಿಯಾಗಿ ಕಟ್ಟದೇ ಹಾಳು ಮಾಡಬಲ್ಲ; ವೈದ್ಯ ರೋಗಿಯೊಬ್ಬನ ಜೀವ ತೆಗೆಯಬಲ್ಲ. ಆದರೆ, ಒಬ್ಬ ಕೆಟ್ಟ ಶಿಕ್ಷಕ ಜನಾಂಗವೊಂದನ್ನೇ ಹಾಳುಮಾಡಿಬಿಡುತ್ತಾರೆ. ಇದು ಒಟ್ಟಾರೆಯಾಗಿ ದೇಶ ಕಟ್ಟುವ ಪ್ರಕ್ರಿಯೆಗೆ ತಡೆ ಉಂಟುಮಾಡುತ್ತದೆ. ಹಾಗಾಗಿ, ಶಿಕ್ಷಕರು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸುವ ಜತೆಗೆ, ತಮ್ಮ ಆಯ್ಕೆಯ ವಿಷಯವನ್ನೂ ಪ್ರೀತಿಸಬೇಕು. ಅದಕ್ಕೂ ಮುಖ್ಯವಾಗಿ ತಮ್ಮ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ನಡೆಸಿಕೊಳ್ಳಬೇಕು. ಇದರಿಂದ ಮಾತ್ರ ಶಿಕ್ಷಕ ವೃತ್ತಿಗೆ ಗೌರವ ಲಭಿಸುತ್ತದೆ ಎಂದು ಆಭಿಪ್ರಾಯಪಟ್ಟರು.

ವೃತ್ತಿಯ ಬಗ್ಗೆ ಗೌರವ, ಪ್ರೀತಿ ಇಲ್ಲದೇ ಇದ್ದಲ್ಲಿ ಕಾಲೇಜಿನಲ್ಲಿ ವ್ಯರ್ಥ ಹರಟೆ, ರಾಜಕಾರಣ ಶುರುವಾಗುತ್ತದೆ. ಇದರಿಂದ ಮಿದುಳು ಕಸದ ತೊಟ್ಟಿಯಾಗಿ ಪರಿಣಮಿಸುತ್ತದೆ. ತಾವು ಹಾಳಾಗುವುದರ ಜತೆಗೆ ವಿದ್ಯಾರ್ಥಿಗಳ ಬದುಕನ್ನೂ ಶಿಕ್ಷಕರು ಹಾಳು ಮಾಡಿಬಿಡುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಜತೆಗೆ, ಶಿಕ್ಷಕರು ತಮ್ಮ ಜ್ಞಾನವನ್ನು ಕಾಲಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಿಕೊಳ್ಳುತ್ತಿರಬೇಕು. ಏಕೆಂದರೆ, ವಿದ್ಯಾರ್ಥಿಗಳು ಈಗ ಶಿಕ್ಷಕರಷ್ಟೇ ಬುದ್ಧಿವಂತರಿರುತ್ತಾರೆ. ಅವರ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಜವಾಬ್ದಾರಿ ಶಿಕ್ಷಕರ ಮೇಲೆ ಇರುತ್ತದೆ. ಇಲ್ಲವಾದಲ್ಲಿ ವಿದ್ಯಾರ್ಥಿಗಳಿಂದ ಅಪಹಾಸ್ಯಕ್ಕೆ ಈಡಾಗಬೇಕಾಗುವುದು ಎಂದು ಅವರು ಎಚ್ಚರಿಸಿದರು.

ಮೈಸೂರು ವಿಶ್ವವಿದ್ಯಾಲಯದ ಯುಜಿಸಿ–ಎಚ್‌ಆರ್‌ಡಿಸಿ ನಿರ್ದೇಶಕಿ ಡಾ.ಮಿಡತಲ ರಾಣಿ ಮಾತನಾಡಿ, ‘ಗೂಗಲ್‌’ ಎಲ್ಲ ವಿಷಯ ಬಲ್ಲ ಬ್ರಹ್ಮ ಎಂದು ತಿಳಿಯುವ ಅಗತ್ಯವಿಲ್ಲ. ಪುಸ್ತಕ ಹಾಗೂ ಗ್ರಂಥಾಲಯಕ್ಕೆ ಸರಿಸಮವಾದ ಜ್ಞಾನದ ಮೂಲ ಮತ್ತೊಂದಿಲ್ಲ. ಇವುಗಳ ಸದುಪಯೋಗ ವಿದ್ಯಾರ್ಥಿ ಹಾಗೂ ಶಿಕ್ಷಕರಿಂದಾಗಬೇಕು ಎಂದು ಸಲಹೆ ನೀಡಿದರು.

ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಏರ್ಪಡಿಸಬೇಕು. ಇದರಿಂದ ಸಂಸ್ಥೆಯ ಪರಿಣತಿ ಹೆಚ್ಚಾಗುವುದು ಎಂದು ಅವರು ಹೇಳಿದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ಮಾತನಾಡಿ, ಬೋಧಕ ವೃಂದವು ಬಹುಕಾಲವಾದರೂ ಮೇಲ್ದರ್ಜೆಗೆ ಒಳಪಡುವುದೇ ಇಲ್ಲ. ಪಿಎಚ್‌.ಡಿ ಪದವಿ, ಪ್ರಬಂಧ ಮಂಡಣೆ ಇತ್ಯಾದಿ ಶೈಕ್ಷಣಿಕ ಕಾರ್ಯಗಳಿಗೆ ಒತ್ತು ನೀಡಬೇಕು. ಆಗ ಮಾತ್ರವೇ ಸಂಸ್ಥೆ ಹಾಗೂ ನೌಕರರಿಬ್ಬರ ಶ್ರೇಯಸ್ಸು ಸಾಧ್ಯ ಎಂದು ಹೇಳಿದರು.

ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣನವರ್‌ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಎಸ್‌.ಮರೀಗೌಡ ಪ್ರಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಎಸ್‌.ಅಶ್ವಿನಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.