ADVERTISEMENT

‘ಮನೆಯಿಂದಲೇ ಮತದಾನ’ ಪೂರ್ಣ; ಹಕ್ಕು ಚಲಾಯಿಸಿದ 3,247 ಮಂದಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 16:32 IST
Last Updated 19 ಏಪ್ರಿಲ್ 2024, 16:32 IST
ಮೈಸೂರಿನ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದಲ್ಲಿ ಅಂಚೆ ಮತದಾನ ಪ್ರಕ್ರಿಯೆ ಶುಕ್ರವಾರ ನಡೆಯಿತು
ಮೈಸೂರಿನ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದಲ್ಲಿ ಅಂಚೆ ಮತದಾನ ಪ್ರಕ್ರಿಯೆ ಶುಕ್ರವಾರ ನಡೆಯಿತು   

ಮೈಸೂರು: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಏ.26ರಂದು ನಡೆಯಲಿದ್ದು, ಅದಕ್ಕೆ ಮುನ್ನ ನಡೆಸಲಾದ ‘ಮನೆಯಿಂದಲೇ ಮತದಾನ’ ಪ್ರಕ್ರಿಯೆ ಮುಕ್ತಾಯಗೊಂಡಿದೆ.

ಈ ಅವಕಾಶಕ್ಕೆ ನೋಂದಾಯಿಸಿದ್ದ 85 ವರ್ಷ ವಯಸ್ಸಿನ ಮೇಲಿನವರು ಮತ್ತು ಶೇ 40ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಇರುವವರಲ್ಲಿ ಒಟ್ಟು 3,393 ಮತದಾರರ ಪೈಕಿ 3,247 ಮಂದಿ ಹಕ್ಕು ಚಲಾಯಿಸಿದ್ದಾರೆ.

ಏ.13ರಿಂದ 17ರವರೆಗೆ ಪ್ರಕ್ರಿಯೆ ಜರುಗಿತು. ವಿಧಾನಸಭಾ ಕ್ಷೇತ್ರವಾರು ಮತದಾನವನ್ನು ನಡೆಸಲಾಯಿತು. ನಿಯೋಜಿತ ಸಿಬ್ಬಂದಿ ಪೂರ್ವನಿಗದಿತ ವೇಳಾಪಟ್ಟಿಯಂತೆ ಮತದಾರರ ಮನೆಗಳಿಗೆ ತೆರಳಿ ಮತದಾನ ಮಾಡಿಸಿದರು. ವಿವರವನ್ನು ನಿಗದಿತ ತಂತ್ರಾಂಶದಲ್ಲಿ ದಾಖಲಿಸಿದರು.

ADVERTISEMENT

ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 2,475 ಮಂದಿ 85+ ಮತದಾರರಲ್ಲಿ 2,358 ಮಂದಿ ಹಾಗೂ 918 ಮಂದಿ ಶೇ 40ರಷ್ಟು ಅಂಗವೈಕಲ್ಯವುಳ್ಳವರಲ್ಲಿ 889 ಮಂದಿ ಹಕ್ಕು ಚಲಾಯಿಸಿದ್ದಾರೆ.

ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 5 ವಿಧಾನಸಭಾ ಕ್ಷೇತ್ರಗಳ ಪೈಕಿ, 85 ವರ್ಷ ವಯಸ್ಸಿನ ಮೇಲಿನವರು ‘12ಡಿ’ ಅರ್ಜಿ ನಮೂನೆಯ ಮೂಲಕ ನೋಂದಾಯಿಸಿದ್ದರು. ಅದರಲ್ಲಿ 966 ಮಂದಿ ಮತ ಚಲಾಯಿಸಿದ್ದಾರೆ. ಅಂತೆಯೇ, 275 ಮಂದಿ ಶೇ 40ರಷ್ಟು ಅಂಗವೈಕಲ್ಯವುಳ್ಳ (ಪಿಡಬ್ಲ್ಯುಡಿ ಮತದಾರರು) ವ್ಯಕ್ತಿಗಳ ಪೈಕಿ 269 ಮಂದಿ ಮತದಾನ ಮಾಡಿದ್ದಾರೆ.

85 ವರ್ಷ ವಯಸ್ಸಿನ ಮೇಲಿನವರಲ್ಲಿ 20 ಮಂದಿಯು ಅವರ ಮನೆಗಳಿಗೆ ಎರಡು ಬಾರಿ ಭೇಟಿ ನೀಡಿದಾಗಲೂ ಲಭ್ಯವಾಗಿಲ್ಲ. 62 ಮಂದಿ ಮತ ಚಲಾಯಿಸಿಲ್ಲ. 15 ಮಂದಿ (ಚಾಮರಾಜ–ಇಬ್ಬರು, ಚಾಮುಂಡೇಶ್ವರಿ–ಒಬ್ಬರು, ಹುಣಸೂರು–ನಾಲ್ವರು, ಕೃಷ್ಣರಾಜ–ಆರು ಮಂದಿ, ನರಸಿಂಹರಾಜ–ಒಬ್ಬರು, ಪಿರಿಯಾಪಟ್ಟಣ–ಒಬ್ಬರು) ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ಶೇ 40ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಇರುವವರಲ್ಲಿ 275 ಮಂದಿ ನೋಂದಾಯಿಸಿದ್ದರು. ಪಿರಿಯಾಪಟ್ಟಣದಲ್ಲಿ ಒಬ್ಬರು ಅವರ ಮನೆಗಳಿಗೆ ಎರಡು ಬಾರಿ ಭೇಟಿ ನೀಡಿದಾಗಲೂ ಲಭ್ಯವಾಗಿಲ್ಲ. 6 ಮಂದಿ ಮತ ಚಲಾಯಿಸಲಿಲ್ಲ. ನಾಲ್ವರು ಮೃತಪಟ್ಟಿದ್ದಾರೆ (ಚಾಮುಂಡೇಶ್ವರಿ–ಇಬ್ಬರು ಮತ್ತು ಹುಣಸೂರು ಹಾಗೂ ನರಸಿಂಹರಾಜ ಕ್ಷೇತ್ರದಲ್ಲಿ ತಲಾ ಒಬ್ಬರು).

ಕೊಡಗು ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 12ಡಿ ನಮೂನೆ ಸಲ್ಲಿಸಿದ್ದ 697 ಮಂದಿಯಲ್ಲಿ 666 ಮತದಾರರು, ಶೇ 40ರಷ್ಟು ಅಂಗವೈಕಲ್ಯವುಳ್ಳ 285 ಮತದಾರರ ಪೈಕಿ 272 ಮಂದಿ ಮತದಾನ ಮಾಡಿದ್ದಾರೆ. ವಿರಾಜಪೇಟೆ ಕ್ಷೇತ್ರದಲ್ಲಿ 777 ಮಂದಿ 85+ ಮತದಾರರಲ್ಲಿ 726 ಮತ್ತು 358 ಅಂಗವಿಕಲರಲ್ಲಿ 348 ಮಂದಿ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ಏ.13ರಿಂದ 17ರವರೆಗೆ ನಡೆದ ಪ್ರಕ್ರಿಯೆ ಮತದಾರರ ಮನೆಗಳಿಗೆ ತೆರಳಿ ಮತದಾನ ಮಾಡಿಸಿದ ಸಿಬ್ಬಂದಿ ಹಕ್ಕು ಚಲಾಯಿಸಿದ 889 ಅಂಗವಿಕಲರು
ಅಂಚೆ ಮತದಾನ ಆರಂಭ
ಲೋಕಸಭಾ ಚುನಾವಣೆಯಲ್ಲಿ ‘ಅಗತ್ಯ ಸೇವೆ ವರ್ಗದಡಿ ಬರುವ ಗೈರು ಹಾಜರಿ ಮತದಾರ’ರಿಗೆ (ಎವಿಇಎಸ್) ಇಲ್ಲಿನ ಸಿದ್ಧಾರ್ಥನಗರದ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಿರುವ ಅಂಚೆ ಮತದಾನ ಕೇಂದ್ರ(ಪಿವಿಸಿ)ದಲ್ಲಿ ಮತದಾನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಏ.21ರವರೆಗೆ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ತೆರೆದಿರಲಿದೆ. ಅಗತ್ಯ ಸೇವೆ ವರ್ಗದಡಿ ಬರುವ ಗೈರುಹಾಜರಿ ಮತದಾರರು ಇಲ್ಲಿ ಮತ ಚಲಾಯಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.