ADVERTISEMENT

ವಿದ್ಯುತ್ ಮೀಟರ್‌ ಕಿತ್ತೊಗೆಯುವ ಆಂದೋಲನ: ಮಧು ಬಂಗಾರಪ್ಪ

ಕೆಪಿಸಿಸಿ ಹಿಂದುವಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 9:41 IST
Last Updated 27 ಸೆಪ್ಟೆಂಬರ್ 2022, 9:41 IST

ಮೈಸೂರು: ‘ರೈತರ ‍ಪಂಪ್‌ಸೆಟ್‌ಗಳಿಗೆ ಬಿಜೆಪಿ ಸರ್ಕಾರ ವಿದ್ಯುತ್‌ ಮೀಟರ್‌ ಅಳವಡಿಸಲು ಮುಂದಾದರೆ ಅದನ್ನು ಕಿತ್ತೊಗೆಯುವ ಆಂದೋಲನವನ್ನು ಕಾಂಗ್ರೆಸ್‌ ಆರಂಭಿಸಲಿದೆ’ ಎಂದು ಕೆಪಿಸಿಸಿ ಹಿಂದುವಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

‘ರೈತರಿಗೆ ದೊರೆಯುತ್ತಿದ್ದ ಸಬ್ಸಿಡಿಗಳನ್ನು ತೆಗೆಯಲಾಗಿದೆ. ರಸಗೊಬ್ಬರ, ಪರಿಕರಗಳ ಬೆಲೆ ಹೆಚ್ಚಾಗಿದೆ. ಬೆಂಬಲ ಬೆಲೆಯೂ ಸಿಗುತ್ತಿಲ್ಲ. ಸಂಕಷ್ಟಕ್ಕೆ ಸಿಲುಕಿರುವಾಗ ಮೀಟರ್ ಅಳವಡಿಕೆಗೆ ಮುಂದಾಗಿರುವುದು ರೈತರನ್ನು ನೆಲಕಚ್ಚಿಸುವ ಪ್ರಹಾರ’ ಎಂದು ಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಕಮಿಷನ್‌ ಲಾಭವನ್ನಷ್ಟೇ ನೋಡುತ್ತಿರುವ ಬಿಜೆಪಿಗೆ ಜನರ ಸಂಕಷ್ಟ ಅರ್ಥವಾಗುತ್ತಿಲ್ಲ. ಮೊಸರಿಂದ ಹಿಡಿದು ಹೆಣ ಸುಡುವವರೆಗೂ ತೆರಿಗೆ ಹೊರೆ ಹಾಕಲಾಗಿದೆ. ಸಾರ್ವಜನಿಕ ಉದ್ದಿಮೆಗಳನ್ನು ಉದ್ಯಮಿಗಳಿಗೆ ಮಾರಾಟ ಮಾಡಲಾಗಿದೆ. ಈಸ್ಟ್‌ ಇಂಡಿಯಾ ಕಂಪನಿಯಂತೆ ಜನರನ್ನು ಶೋಷಿಸುತ್ತಿದೆ. ಇದಕ್ಕಾಗಿ ಸ್ವಾತಂತ್ರ್ಯ ಹೋರಾಟ ಮತ್ತೆ ಆರಂಭಿಸಬೇಕಿದೆ’ ಎಂದರು.

ADVERTISEMENT

‘ಸರ್ಕಾರದ ಮೇಲೆ ಜನರಿಗಿರುವ ಸಿಟ್ಟನ್ನು ವಿಷಯಾಂತರಿಸುವುದಕ್ಕಾಗಿಯೇ ಪಿಎಫ್‌ಐ, ಎಸ್‌ಡಿಪಿಐ ಮೇಲೆ ಎನ್‌ಐಎ ಮೂಲಕ ಬಿಜೆಪಿ ದಾಳಿ ನಡೆಸುತ್ತಿದೆ. ಕಾಂಗ್ರೆಸ್‌ ದುರುದ್ದೇಶದ ದಾಳಿಗೆ ಹೆದರುವುದಿಲ್ಲ. ಬಿಜೆಪಿಯ ಭ್ರಷ್ಟಾಚಾರ, ಸುಳ್ಳುಗಳನ್ನು ಬಯಲಿಗೆಳೆಯುವುದನ್ನು ಮುಂದುವರಿಸುತ್ತೇವೆ’ ಎಂದು ತಿಳಿಸಿದರು.

ಜಿಲ್ಲಾವಾರು ಪ್ರಣಾಳಿಕೆ ರಚನೆ: ‘ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ರಚನೆಯ ಉಪಾಧ್ಯಕ್ಷನಾಗಿದ್ದು, ಜಿಲ್ಲಾ ಮಟ್ಟದಲ್ಲೂ ಚಿಂತನ– ಮಂಥನ ನಡೆಸಿ ಜಿಲ್ಲಾವಾರು ಪ್ರಣಾಳಿಕೆ ತಯಾರಿಸಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.