ADVERTISEMENT

‘ಮಾಘ ಹುಣ್ಣಿಮೆ’ ಸ್ನಾನ: ಕುಂಭಮೇಳ ಸಂಪನ್ನ

ತಿರುಮಕೂಡಲಿನ ತ್ರಿವೇಣಿಗೆ ಸಂಗಮಕ್ಕೆ ಹರಿದು ಬಂದ ಭಕ್ತಸಾಗರ

ಮೋಹನ್ ಕುಮಾರ ಸಿ.
Published 12 ಫೆಬ್ರುವರಿ 2025, 21:02 IST
Last Updated 12 ಫೆಬ್ರುವರಿ 2025, 21:02 IST
ಮೈಸೂರು ಜಿಲ್ಲೆ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಬುಧವಾರ ಮುಕ್ತಾಯಗೊಂಡ ಕುಂಭಮೇಳದಲ್ಲಿ ಸಾವಿರಾರು ಭಕ್ತರು ‘ಮಾಘ ಹುಣ್ಣಿಮೆ’ಯ ಪುಣ್ಯಸ್ನಾನ ಮಾಡಿದರು – ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರು ಜಿಲ್ಲೆ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಬುಧವಾರ ಮುಕ್ತಾಯಗೊಂಡ ಕುಂಭಮೇಳದಲ್ಲಿ ಸಾವಿರಾರು ಭಕ್ತರು ‘ಮಾಘ ಹುಣ್ಣಿಮೆ’ಯ ಪುಣ್ಯಸ್ನಾನ ಮಾಡಿದರು – ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.    

ತಿ.ನರಸೀಪುರ (ಮೈಸೂರು ಜಿಲ್ಲೆ): ‘ದಕ್ಷಿಣ ಪ್ರಯಾಗ’ ಖ್ಯಾತಿಯ ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ಬುಧವಾರ ‘ಮಾಘ ಹುಣ್ಣಿಮೆ’ಯ ಪುಣ್ಯಸ್ನಾನ ಮಾಡಿದರು. ಸಡಗರದಿಂದ ನಡೆದ ಮೂರು ದಿನಗಳ ‘ಕುಂಭಮೇಳ’ ಸಂಪನ್ನಗೊಂಡಿತು. 

ಕಾವೇರಿ, ಕಪಿಲೆ ಹಾಗೂ ಗುಪ್ತಗಾಮಿನಿ ಸ್ಪಟಿಕ ನದಿಗಳ ಸಂಗಮಕ್ಕೆ ಮುಂಜಾನೆ 3 ಗಂಟೆಯಿಂದಲೇ ಭಕ್ತರು ಹರಿದು ಬಂದರು. ಬೆಳಗಿನ ಚಳಿ, ಮಧ್ಯಾಹ್ನದ ಬಿರು ಬಿಸಿಲಿನಲ್ಲೇ ಜಳಕ ಮಾಡಿದರು. ಮೂರು ಕಿ.ಮೀ ಹಿಂದೆಯೇ ವಾಹನಗಳನ್ನು ನಿಲ್ಲಿಸಿ, ನಡೆದೇ ಸರದಿ ಸಾಲಿನಲ್ಲಿ ಆಗಮಿಸಿ, ಭಕ್ತಿ ಮೆರೆದರು.

ಅಗಸ್ತ್ಯೇಶ್ವರ ದೇಗುಲದಲ್ಲಿ ಬೆಳಿಗ್ಗೆ 5.30ರಿಂದ 11 ಗಂಟೆವರೆಗೆ ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಸಪ್ತನದಿತೀರ್ಥ ಕಲಶ ಪೂಜೆ, ಮಹಾಮಂಗಳಾರತಿ ನಡೆಯಿತು. ನಂತರ ಸಪ್ತ ನದಿಗಳ ತೀರ್ಥಗಳಿದ್ದ ಕುಂಭಗಳನ್ನು ತ್ರಿವೇಣಿ ಸಂಗಮದಲ್ಲಿ ಸಂಯೋಜಿಸಲಾಯಿತು.

ADVERTISEMENT

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ, ಕಾಗಿನೆಲೆ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ತಿರುಚ್ಚಿಮಠದ ಜಯೇಂದ್ರಪುರಿ ಸ್ವಾಮೀಜಿ, ದತ್ತ ವಿಜಯಾನಂದತೀರ್ಥ ಸ್ವಾಮೀಜಿ, ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ನಡುಹೊಳೆ ಬಸಪ್ಪನ ಸನ್ನಿಧಿಯಲ್ಲಿ 11.25ಕ್ಕೆ ಕುಂಭಸ್ನಾನ ಮಾಡಿ, ನಮಿಸಿದರು. 

ನೀರು ಕೆಸರುಮಯ: ಅಗಸ್ತ್ಯೇಶ್ವರ, ಗುಂಜಾ ನರಸಿಂಹಸ್ವಾಮಿ ಹಾಗೂ ಭಿಕ್ಷೇಶ್ವರ ಸ್ವಾಮಿ ದೇಗುಲಗಳ ಸ್ನಾನಘಟ್ಟಗಳು ಭಕ್ತರಿಂದ ಕಿಕ್ಕಿರಿದು ತುಂಬಿದ್ದವು. ಅಗಸ್ತ್ಯೇಶ್ವರ ಸ್ನಾನಘಟ್ಟದಲ್ಲಿ ಸಾವಿರಾರು ಮಂದಿ ನೀರಿಗಿಳಿದಿದ್ದರಿಂದ ನೀರು ಕೆಸರುಮಯವಾಗಿತ್ತು, ಹೀಗಾಗಿ ಮರದ ಪೋಲ್‌ಗಳಿಂದ ಹಾಕಲಾಗಿದ್ದ ತಡೆಗಳನ್ನು ಯುವಕರ ಗುಂ‍ಪು ತೆಗೆದು ಹಾಕಿತು. ಅವರನ್ನು ನಿಯಂತ್ರಿಸಲು ಪೊಲೀಸರು ಹೈರಾಣಾದರು.

ನೆರೆ ರಾಜ್ಯಗಳು ಹಾಗೂ ನಾಡಿನ ವಿವಿಧ ಮೂಲೆಗಳಿಂದ ಭಕ್ತರು ಸ್ನಾನಘಟ್ಟಗಳಲ್ಲದೇ ಸಂಗಮದ ನದಿ ತೀರಗಳುದ್ದಕ್ಕೂ ಸ್ನಾನ ಮಾಡಲು ಇಳಿದರು. 6 ದೋಣಿಗಳಲ್ಲಿ ಪೊಲೀಸರು, ಜನರು ಆಳವಿರುವ ಕಡೆಗೆ ಬರದಂತೆ ಗಸ್ತು ಹಾಕಿದರು. ಪಟ್ಟಣದಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ಚಲನಚಿತ್ರ ಗಾಯಕ ವಿಜಯಪ್ರಕಾಶ್‌, ಬಿಜೆಪಿ ಮುಖಂಡರಾದ ಡಿ.ವಿ.ಸದಾನಂದಗೌಡ, ಪ್ರತಾಪಸಿಂಹ ಸೇರಿದಂತೆ ವಿವಿಧ ಗಣ್ಯರು ಪುಣ್ಯಸ್ನಾನ ಮಾಡಿದರು.

ಮೈಸೂರು ಜಿಲ್ಲೆ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಬುಧವಾರ ಮುಕ್ತಾಯಗೊಂಡ ಕುಂಭಮೇಳದಲ್ಲಿ ಸಾವಿರಾರು ಭಕ್ತರು ‘ಮಾಘ ಹುಣ್ಣಿಮೆ’ಯ ಪುಣ್ಯಸ್ನಾನ ಮಾಡಿದರು – ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರು ಜಿಲ್ಲೆ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಬುಧವಾರ ಮುಕ್ತಾಯಗೊಂಡ ಕುಂಭಮೇಳದಲ್ಲಿ ಸಾವಿರಾರು ಭಕ್ತರು ‘ಮಾಘ ಹುಣ್ಣಿಮೆ’ಯ ಪುಣ್ಯಸ್ನಾನ ಮಾಡಿದರು – ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.