ADVERTISEMENT

ತಳ ಸಮುದಾಯಗಳ ಮಾನಸಿಕ ಕ್ರಾಂತಿ ಮಹದೇವಪ್ಪ ಕರೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 5:23 IST
Last Updated 24 ಜೂನ್ 2021, 5:23 IST

ಮೈಸೂರು: ಜಾತಿಶ್ರೇಷ್ಠತೆ ಮತ್ತು ಫ್ಯೂಡಲ್ ರಾಜಕಾರಣದ ನಡುವೆ ಜನಪರ ರಾಜಕಾರಣ ನಲುಗುತ್ತಿದ್ದು, ತಳವರ್ಗದಲ್ಲಿ ಇದನ್ನು ಅರ್ಥ ಮಾಡಿಕೊಳ್ಳುವಂತ ಮಾನಸಿಕ ಕ್ರಾಂತಿ ಆಗಬೇಕು ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಕರೆ ನೀಡಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಭವಿಷ್ಯವು ಅಪಾಯದ ಕಡೆಗೇ ಜಾರಿದೆ. ತಮ್ಮ ಶ್ರಮದಿಂದಲೇ ದೇಶವನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಟ್ಟುತ್ತಿರುವ ಈ ದೇಶದ ಮೂಲ ನಿವಾಸಿಗಳು ಈಗಂತೂ ಕೋಮುವಾದಿಗಳ ವಿಷದ ಮುಷ್ಠಿಯಲ್ಲಿ ನಲುಗಿ ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತೈಲ ಬೆಲೆಯು ₹ 100ಕ್ಕೆ ಮುಟ್ಟಿದ್ದರೂ ‘ಇರಲಿ ಬಿಡು, ಸರ್ಕಾರ ನಡೆಸುತ್ತಿರುವುದು ನಮ್ಮ ಜಾತಿಯವರೇ ಅಲ್ಲವೇ‌’ ಎಂಬ ಅಘಾತಕಾರಿ ಎನಿಸುವ ನೆಮ್ಮದಿಯು, ಬಹಳಷ್ಟು ಜನರಲ್ಲಿ ಮನೆ ಮಾಡಿರುವುದಕ್ಕೆ ಜಾತಿವಾದ ಮತ್ತು ಕೋಮುವಾದ ಪ್ರಬಲವಾಗಿ ರಾರಾಜಿಸುತ್ತಿರುವುದೇ ಕಾರಣ ಮತ್ತು ಇದು ಪಕ್ಷಾತೀತವಾಗಿ ಕಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಹಿಂದುಳಿದವರು, ಅಲ್ಪಸಂಖ್ಯಾತರ ನಾಯಕತ್ವದ ಬಗ್ಗೆ ಮಾತನಾಡಿದಾಗ ಉಂಟಾಗುವ ಪ್ರತಿರೋಧವು ಫ್ಯೂಡಲ್‌ಗಳ ನಾಯಕತ್ವದ ಬಗ್ಗೆ ಮಾತನಾಡಿದಾಗ ಉಂಟಾಗುವುದಿಲ್ಲ. ಅಹಿಂದ ವರ್ಗದ ಸಿದ್ದರಾಮಯ್ಯನವರ ವಿಷಯದಲ್ಲೂ ಕೂಡಾ ಇದೇ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು ಸಂಘಟಿಸಿ ಎನ್ನುತ್ತಾರೆ. ಸಂಘಟನೆ ಎಂದರೆ ಸಮಾವೇಶ ಮಾಡುವುದಲ್ಲ. ತಳವರ್ಗದಲ್ಲಿ ಇಂತಹದ್ದನ್ನೆಲ್ಲಾ ಅರ್ಥ ಮಾಡಿಕೊಳ್ಳುವಂತ ಮಾನಸಿಕ ಕ್ರಾಂತಿ ಆಗುವುದೇ ಸಂಘಟನೆ ಎನಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.