ADVERTISEMENT

ರಾಜವಂಶಸ್ಥರಿಗೆ ಸೇರಿದ 4 ಹೆಣ್ಣಾನೆ ಗುಜರಾತ್‌ಗೆ ಸಾಗಣೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 14:43 IST
Last Updated 16 ಡಿಸೆಂಬರ್ 2021, 14:43 IST
ಮೈಸೂರು ಅರಮನೆಯಲ್ಲಿನ ಆನೆಗಳು
ಮೈಸೂರು ಅರಮನೆಯಲ್ಲಿನ ಆನೆಗಳು   

ಮೈಸೂರು: ರಾಜವಂಶಸ್ಥರಿಗೆ ಸೇರಿದ ಮೈಸೂರು ಅರಮನೆಯ ನಾಲ್ಕು ಹೆಣ್ಣಾನೆಗಳನ್ನು ಮಂಗಳವಾರ ರಾತ್ರಿ ಗುಜರಾತಿನ ಪುನರ್ವಸತಿ ಶಿಬಿರಕ್ಕೆ ಸಾಗಿಸಲಾಗಿದೆ.

ನಾಲ್ಕು ಪ್ರತ್ಯೇಕ ಟ್ರಕ್‌ಗಳಲ್ಲಿ ಸಾಗಿ ಸಿದ್ದು, ಎರಡು ದಿನಗಳಲ್ಲಿ ಶಿಬಿರ ತಲುಪುವ ನಿರೀಕ್ಷೆ ಇದೆ. ಅರಮನೆಯಲ್ಲಿರುವ ಒಟ್ಟು ಆರು ಆನೆಗಳ ಪೈಕಿ ಸೀತಾ, ರೂಬಿ, ಜೆಮಿನಿ ಹಾಗೂ ರಾಜೇಶ್ವರಿಯನ್ನು ಕಳುಹಿಸಲಾಗಿದೆ.

ಆನೆಗಳನ್ನು ಸರ್ಕಸ್‌ ಕಂಪನಿಯವರು ರಾಜವಂಶಸ್ಥರಿಗೆ ನೀಡಿದ್ದರು. ಅವುಗಳ ನಿರ್ವಹಣೆ ಕಷ್ಟವಾಗಿದ್ದರಿಂದ ಅರಣ್ಯ ಇಲಾಖೆಗೆ ಒಪ್ಪಿಸಲು ಮುಂದಾಗಿದ್ದರು.

ADVERTISEMENT

‘ನಿರ್ವಹಣೆ ಖರ್ಚು ನೀಡುವಂತೆ ಅರಣ್ಯ ಇಲಾಖೆ ಕೇಳಿದ್ದರಿಂದ, 3 ವರ್ಷದಿಂದ ಅರಮನೆಯಲ್ಲೇ ಸಾಕಲಾಗಿತ್ತು. ಗುಜರಾತ್‌ನಲ್ಲಿ ಇಸ್ಕಾನ್‌ ಸಂಸ್ಥೆಯವರು ಪುನರ್ವಸತಿ ಶಿಬಿರದಲ್ಲಿ 50 ಆನೆಗಳನ್ನು ಸಾಕುತ್ತಿದ್ದಾರೆ. ಸುಸಜ್ಜಿತ ವ್ಯವಸ್ಥೆ, ವೈದ್ಯರು ಅಲ್ಲಿದ್ದಾರೆ. ಸಾಗಣೆಗೆ ಅರಣ್ಯ ಇಲಾಖೆಯ ಅನುಮತಿ ಬೇಕು. ಈ ಸಂಬಂಧ ಇಲಾಖೆಗೆ ಪತ್ರ ಬರೆದು ಒಪ್ಪಿಗೆ ಪಡೆದಿದ್ದೇವೆ’ ಎಂದು ಅರಮನೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಆನೆಗಳ ಸಾಗಣೆಗೆ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅನುಮತಿ ನೀಡಿದ್ದಾರೆ. ನಾಲ್ಕು ಆನೆಗಳನ್ನು ಸಾಗಿಸಲಾಗಿದೆ’‌ ಎಂದು ಡಿಸಿಎಫ್‌ (ವನ್ಯಜೀವಿ) ವಿ.ಕರಿಕಾಳನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.