ADVERTISEMENT

ಹಿಂದುಳಿದ ವರ್ಗಗಳಿಗೆ ಮೀಸಲಾತಿ: ಮಂಡಲ್‌ ಕಾರಣ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 4:53 IST
Last Updated 20 ಸೆಪ್ಟೆಂಬರ್ 2025, 4:53 IST
ಮೈಸೂರಿನ ರೈಲ್ವೆ ಕಲ್ಯಾಣ ಮಂಟಪದಲ್ಲಿ ಎಐಒಬಿಸಿ ರೈಲ್ವೆ ನೌಕರರ ಸಂಘ ಶುಕ್ರವಾರ ಆಯೋಜಿಸಿದ್ದ ಬಿ.ಪಿ. ಮಂಡಲ್ 107ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಕೆ. ಹರೀಶ್ ಗೌಡ ಉದ್ಘಾಟಿಸಿದರು– ಪ್ರಜಾವಾಣಿ ಚಿತ್ರ
ಮೈಸೂರಿನ ರೈಲ್ವೆ ಕಲ್ಯಾಣ ಮಂಟಪದಲ್ಲಿ ಎಐಒಬಿಸಿ ರೈಲ್ವೆ ನೌಕರರ ಸಂಘ ಶುಕ್ರವಾರ ಆಯೋಜಿಸಿದ್ದ ಬಿ.ಪಿ. ಮಂಡಲ್ 107ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಕೆ. ಹರೀಶ್ ಗೌಡ ಉದ್ಘಾಟಿಸಿದರು– ಪ್ರಜಾವಾಣಿ ಚಿತ್ರ   

ಮೈಸೂರು: ‘ಕೇಂದ್ರದಲ್ಲಿ ಹಿಂದುಳಿದ ವರ್ಗಗಳಿಗೆ ಶೇ 27ರಷ್ಟು ಮೀಸಲಾತಿ ದೊರೆಯುವಂತಾಗಲು ಬಿ.ಪಿ. ಮಂಡಲ್ ಅಧ್ಯಕ್ಷತೆಯಲ್ಲಿ ನೇಮಕಗೊಂಡಿದ್ದ ಆಯೋಗ ಸಲ್ಲಿಸಿದ ವರದಿಯೇ ಕಾರಣ’ ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್‌ ಗೌಡ ಸ್ಮರಿಸಿದರು.

ನಗರದ ಕೆಆರ್‌ಎಸ್‌ ರಸ್ತೆಯ ರೈಲ್ವೆ ಕಲ್ಯಾಣ ಮಂಟಪದಲ್ಲಿ ಎಐಒಬಿಸಿ ನೈರುತ್ಯ ರೈಲ್ವೆ ನೌಕರರ ಸಂಘವು ಶುಕ್ರವಾರ ಹಮ್ಮಿಕೊಂಡಿದ್ದ ಬಿ.ಪಿ. ಮಂಡಲ್‌ ಅವರ 107ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆ ವರದಿಯ ಕಾರಣದಿಂದಾಗಿ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿಯ ಪ್ರಯೋಜನ ಪಡೆದಿರುವವರು ಮಂಡಲ್‌ ಅವರನ್ನು ಸದಾ ಸ್ಮರಿಸಬೇಕು’ ಎಂದರು.

ADVERTISEMENT

ಮುಖ್ಯ ಅತಿಥಿಯಾಗಿದ್ದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ. ರಂಗೇಗೌಡ, ‘ಹಿಂದುಳಿದ ವರ್ಗಗಳಿಗೆ ಮೀಸಲಾತಿ ನಿಗದಿಪಡಿಸಲು ಮಂಡಲ್‌ ಆಯೋಗ ನೀಡಿದ ವರದಿ ಆಧಾರವಾಗಿದೆ. ಅಂಬೇಡ್ಕರ್‌ ಅವರು ಸಂವಿಧಾನ ನೀಡುವ ಮೂಲಕ ಇಡೀ ದೇಶದ ಜನರಿಗೆ ಬೆಳಕಾಗಿದ್ದಾರೆ. ಶೋಷಿತರು, ಬಡವರು, ದಲಿತ ಸಮುದಾಯ ಅವರನ್ನು ಸದಾ ಆರಾಧಿಸುತ್ತದೆ. ಆದರೆ, ಹಿಂದುಳಿದ ವರ್ಗಗಳು ಮಂಡಲ್‌ ಅವರನ್ನು ಸ್ಮರಿಸುವುದೇ ಇಲ್ಲ’ ಎಂದು ವಿಷಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವಾಧ್ಯಕ್ಷ, ನಿವೃತ್ತ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ಮಾತನಾಡಿ, ‘ಮೊದಲೆಲ್ಲಾ ಹಿಂದುಳಿದ ವರ್ಗದವರನ್ನು ಕೇಳುವವರೇ ಇರಲಿಲ್ಲ. ಆದರೆ, ಮಂಡಲ್‌ ಆಯೋಗದ ವರದಿ ಜಾರಿ ನಂತರ ಸಾಕಷ್ಟು ಮಂದಿ ಒಳ್ಳೆಯ ಉದ್ಯೋಗಾವಕಾಶ ಪಡೆದಿದ್ದಾರೆ. ನೊಬೆಲ್‌ ಬಹುಮಾನ ಪಡೆದವರಲ್ಲಿ ಕೂಡ ಸಾಕಷ್ಟು ಮಂದಿ ಹಿಂದುಳಿದ ವರ್ಗದವರು ಇದ್ದಾರೆ. ಇದನ್ನೆಲ್ಲಾ ಇಂದಿನ ಮಕ್ಕಳಿಗೆ ತಿಳಿಸಿಕೊಡಬೇಕು’ ಎಂದರು.

ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು ಮಾತನಾಡಿ, ‘ರೈಲ್ವೆ ಇಲಾಖೆಯಲ್ಲಿ ಹಿಂದುಳಿದ ವರ್ಗದವರಿಗೆ ಯಾವುದೇ ರೀತಿಯ ತಾರತಮ್ಯ ಆಗಬಾರದು. ಈ ಬಗ್ಗೆ ಸಚಿವ ವಿ. ಸೋಮಣ್ಣ ಅವರ ಗಮನ ಸೆಳೆದಿರುವೆ’ ಎಂದು ತಿಳಿಸಿದರು.

ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಮುದಿತ್‌ ಮಿತ್ತಲ್‌ ಮಾತನಾಡಿದರು. ಎಐಒಬಿಸಿಆರ್‌ ಇಎ ಪ್ರಧಾನ ಕಾರ್ಯದರ್ಶಿ ವೈ. ಗೋವರ್ಧನ್‌, ಲೋಹಿತೇಶ್ವರ, ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್‌, ಸಿ.ಕೆ. ಮಹೇಂದ್ರ, ಬಿಜೆಪಿ ರಾಜ್ಯ ಒಬಿಸಿ ಮೋರ್ಚಾದ ಸುರೇಶ್‌ ಬಾಬು, ಜಿಲ್ಲಾ ಸರ್ಕಾರಿ ವಕೀಲ ಉಮೇಶ್‌, ಮದನ್‌ ಮಹದೇಶ್‌, ಪೆಮ್ಮಡಿ ರಾಜೇಶ್‌, ವಿಭಾಗೀಯ ಅಧ್ಯಕ್ಷರಾದ ಸಿ. ವೈಶಾಖ್‌, ಎಚ್‌.ಸಿ. ಸಂತೋಷ್‌, ಕಾರ್ಯದರ್ಶಿಗಳಾದ ಜಗದೀಶ, ಕೆ. ಮರುಗನ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.