ADVERTISEMENT

ಮೈಸೂರು | ಹೂಬಿಟ್ಟ ಮಾವು; ಉತ್ತಮ ಫಸಲಿನ ನಿರೀಕ್ಷೆ

ಜಿಲ್ಲೆಯಲ್ಲಿ 4 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆ

ಜಿತೇಂದ್ರ ಆರ್
Published 24 ಜನವರಿ 2025, 5:29 IST
Last Updated 24 ಜನವರಿ 2025, 5:29 IST
ಮೈಸೂರು–ಗದ್ದಿಗೆ ರಸ್ತೆಯ ತೋಟವೊಂದರಲ್ಲಿ ಹೂ ತುಂಬಿ ನಿಂತ ಮಾವಿನ ಮರ– ಪ್ರಜಾವಾಣಿ ಚಿತ್ರ
ಮೈಸೂರು–ಗದ್ದಿಗೆ ರಸ್ತೆಯ ತೋಟವೊಂದರಲ್ಲಿ ಹೂ ತುಂಬಿ ನಿಂತ ಮಾವಿನ ಮರ– ಪ್ರಜಾವಾಣಿ ಚಿತ್ರ   

ಮೈಸೂರು: ಜಿಲ್ಲೆಯಲ್ಲಿ ಈ ಬಾರಿ ಮಾವಿನ ತೋಟಗಳು ಹೂವಿನಿಂದ ಮೈದುಂಬಿ ನಿಂತಿದ್ದು, ಉತ್ತಮ ಫಸಲಿನ ನಿರೀಕ್ಷೆ ಇದೆ.

ಜಿಲ್ಲೆಯಲ್ಲಿ 4 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಈ ವರ್ಷ ಶೇ 50ಕ್ಕೂ ಹೆಚ್ಚು ಭಾಗದಲ್ಲಿ ಹೂವು ಕಚ್ಚಿದ್ದು, ಕೆಲವೆಡೆ ಈಚು ಗಾತ್ರದ ಕಾಯಿ ಇದೆ. ಸದ್ಯ ಯಾವುದೇ ರೋಗಬಾಧೆ ಇಲ್ಲ. ವಾತಾವರಣ ಹೀಗೆಯೇ ಇದ್ದಲ್ಲಿ ಈ ವರ್ಷ ಉತ್ತಮ ಇಳುವರಿ ಸಿಗಲಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು.

‘ಶೇ 50–60ರಷ್ಟು ಮಾವಿನ ತೋಟಗಳಲ್ಲಿ ಹೂವು ಹೇರಳವಾಗಿದೆ. ಇದರಲ್ಲಿ ಶೇ 0.1ರಷ್ಟು ಹೂವು ಉಳಿದರೂ ರೈತರಿಗೆ ಲಾಭ ಆಗಲಿದೆ. ಸದ್ಯ ಬಿಸಿಲು ಉತ್ತಮವಾಗಿದ್ದು, ಬೆಳೆಗೆ ಪೂರಕವಾಗಿದೆ. ಯಾವ ತರಹದ ಕೀಟಬಾಧೆಯೂ ಇಲ್ಲ. ಅಕಾಲಿಕ ಮಳೆ ಇಲ್ಲವೇ ಇಬ್ಬನಿ ಹೆಚ್ಚಾದಲ್ಲಿ ಮಾತ್ರ ಒಂದಿಷ್ಟು ತೊಂದರೆ ಆಗಬಹುದು’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್‌ ಅಂಗಡಿ.

ADVERTISEMENT

ಕಳೆದ ವರ್ಷ ಸಹ ಶೇ 60–70ರಷ್ಟು ಮರಗಳು ಹೂವು ತುಂಬಿಕೊಂಡಿದ್ದರೂ ಕಾಯಿ ಕಚ್ಚುವ ಹಂತದಲ್ಲಿ ಬೇಸಿಗೆಯ ತಾಪ ವಿಪರೀತವಾದ್ದರಿಂದ ಹೂವು ನೆಲ ಕಚ್ಚಿದ್ದವು. ರೈತರು ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್‌ಗಳಲ್ಲಿ ನೀರು ಪೂರೈಸಿದ್ದರು. ನಂತರದಲ್ಲಿಯೂ ಕಾಯಿ ಉದುರಿದ ಪರಿಣಾಮ ನಿರೀಕ್ಷೆಯಷ್ಟು ಪ್ರಮಾಣದಲ್ಲಿ ಮಾವಿನ ಫಸಲು ಕೈ ಸೇರಿರಲಿಲ್ಲ. ಹೀಗಾಗಿ ಇಳುವರಿ ಕುಸಿದು ಮಾವಿನ ಬೆಲೆ ಏರಿತ್ತು.

ಎಲ್ಲೆಲ್ಲಿ ಹೆಚ್ಚು?: ಜಿಲ್ಲೆಯಲ್ಲಿ ಮೈಸೂರು ತಾಲ್ಲೂಕಿನ ಇಲವಾಲ, ಹುಲ್ಲಹಳ್ಳಿ, ಜಯಪುರ ಹೋಬಳಿ ಜೊತೆಗೆ ಕೆ.ಆರ್.ನಗರ, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಹುಣಸೂರು, ಬಿಳಿಕೆರೆ, ಹಂಪಾಪುರ ಭಾಗಗಳಲ್ಲಿ ಮಾವು ಬೆಳೆಯಲಾಗುತ್ತದೆ. ಬಾದಾಮಿ, ರಸಪುರಿ, ಸೇಂದೂರ, ಮಲಗೋವಾ, ತೋತಾಪುರಿ, ಮಲ್ಲಿಕಾ, ದಶೇರಿ, ಸಕ್ಕರೆಗುತ್ತಿ ತಳಿಗಳನ್ನು ಬೆಳೆಯಲಾಗುತ್ತಿದೆ.

ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ 35–40 ಸಾವಿರ ಟನ್‌ನಷ್ಟು ಮಾವು ಬೆಳೆಯಲಾಗುತ್ತಿದೆ. ಹವಾಮಾನ ಉತ್ತಮವಾಗಿದ್ದ ವರ್ಷಗಳಲ್ಲಿ 40 ಸಾವಿರ ಟನ್‌ಗಳಿಗೂ ಅಧಿಕ ಫಸಲು ಸಿಕ್ಕಿದೆ. ಆದರೆ ಈಚಿನ ವರ್ಷಗಳಲ್ಲಿ 25–30 ಸಾವಿರ ಟನ್‌ಗೆ ಇಳುವರಿ ಕುಸಿದಿತ್ತು. ಈ ವರ್ಷವೂ 30–40 ಸಾವಿರ ಟನ್ ಫಸಲಿನ ನಿರೀಕ್ಷೆ ಇದೆ.

ಜಿಲ್ಲೆಯಲ್ಲಿ ಏಪ್ರಿಲ್‌ ಮಧ್ಯಭಾಗದಿಂದ ಕೊಯ್ಲು ಆರಂಭಗೊಂಡು ಮೇ ಅಂತ್ಯದವರೆಗೂ ನಡೆಯಲಿದೆ. ಈ ಬಾರಿ ರಾಮನಗರ–ಕೋಲಾರ ಭಾಗದಲ್ಲಿ ಫಸಲು ಉತ್ತಮವಾಗಿಲ್ಲ. ಹೀಗಾಗಿ ಆರಂಭದಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

ಜಿಲ್ಲೆಯಾದ್ಯಂತ ಈ ಹಂಗಾಮಿನಲ್ಲಿ ಮಾವಿನ ಮರಗಳಲ್ಲಿ ಹೂವು ಹೇರಳವಾಗಿ ಬಂದಿದೆ. ಅಕಾಲಿಕ ಮಳೆ ಚಳಿ ಹೆಚ್ಚಾಗದೇ ವಾತಾವರಣ ಹೀಗೆ ಇದ್ದಲ್ಲಿ ಉತ್ತಮ ಫಸಲು ಸಿಗಲಿದೆ
ಮಂಜುನಾಥ್‌ ಅಂಗಡಿ, ಉಪನಿರ್ದೇಶಕ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.