ಮೈಸೂರು: ಕಳೆದ ವಾರಾಂತ್ಯದಲ್ಲಿ ನಗರದ ಕುಪ್ಪಣ್ಣ ಉದ್ಯಾನದಲ್ಲಿ ನಡೆದ ಮಾವು ಮೇಳದಲ್ಲಿ ಸುಮಾರು 150 ಟನ್‌ನಷ್ಟು ಮಾವಿನ ಹಣ್ಣು ಮಾರಾಟವಾಯಿತು.
ತೋಟಗಾರಿಕೆ ಇಲಾಖೆಯು ಮೇ 23ರಿಂದ 25ರವರೆಗೆ ಆಯೋಜಿಸಿದ್ದ ಮೂರು ದಿನಗಳ ಈ ಮೇಳದಲ್ಲಿ ಮೈಸೂರು ಜೊತೆಗೆ ಮಂಡ್ಯ, ರಾಮನಗರ, ಕೋಲಾರ, ಧಾರವಾಡ, ಕೊಪ್ಪಳ ಜಿಲ್ಲೆಗಳಿಂದಲೂ ಮಾವು ಬೆಳೆಗಾರರು ಹಣ್ಣು ತಂದಿದ್ದರು. 48 ಮಳಿಗೆಗಳಲ್ಲಿ ವ್ಯಾಪಾರ ನಡೆದಿತ್ತು. ಈ ಬಾರಿ ಮೇಳದಲ್ಲಿ 200 ಟನ್‌ನಷ್ಟು ವಹಿವಾಟಿನ ನಿರೀಕ್ಷೆ ಇತ್ತು.
‘ಮೊದಲೆರಡು ದಿನ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ಭಾನುವಾರ ಮಧ್ಯಾಹ್ನದ ಬಳಿಕ ನಿರಂತರ ಮಳೆಯಾಗಿದ್ದು, ನಿರೀಕ್ಷೆಯಷ್ಟು ಗ್ರಾಹಕರು ಮೇಳಕ್ಕೆ ಬರಲಿಲ್ಲ. ಆದಾಗ್ಯೂ ಕಳೆದ ವರ್ಷಕ್ಕಿಂತ ಹೆಚ್ಚು ವಹಿವಾಟು ನಡೆಯಿತು’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ ಅಂಗಡಿ ತಿಳಿಸಿದರು.
2024ರ ಮೇನಲ್ಲಿ ನಡೆದ ಮೇಳದಲ್ಲಿ 130 ಟನ್ ಹಾಗೂ 2023ರಲ್ಲಿ ನಡೆದಿದ್ದ ಮಾವು ಮೇಳದಲ್ಲಿ 88 ಟನ್‌ನಷ್ಟು ಮಾವು ಮಾರಾಟ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.