ADVERTISEMENT

ಮೈಸೂರು: ‘ಮಂಥನ ಮುತ್ತುಗಳು’ ಚುಟುಕು ಸಂಕಲನ ಬಿಡುಗಡೆ ಮಾಡಿದ ನೀಲಗಿರಿ ತಳವಾರ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 2:14 IST
Last Updated 21 ಜುಲೈ 2025, 2:14 IST
<div class="paragraphs"><p>ಮೈಸೂರಿನ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಎಲ್‌.ಸಿ. ಶಂಕರ ಅವರ ‘ಮಂಥನ ಮುತ್ತುಗಳು’&nbsp; ಚುಟುಕು ಸಂಕಲನವನ್ನು ಪ್ರೊ.ನೀಲಗಿರಿ ತಳವಾರ ಬಿಡುಗಡೆ ಮಾಡಿದರು&nbsp; &nbsp; &nbsp; &nbsp; &nbsp; &nbsp; </p></div>

ಮೈಸೂರಿನ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಎಲ್‌.ಸಿ. ಶಂಕರ ಅವರ ‘ಮಂಥನ ಮುತ್ತುಗಳು’  ಚುಟುಕು ಸಂಕಲನವನ್ನು ಪ್ರೊ.ನೀಲಗಿರಿ ತಳವಾರ ಬಿಡುಗಡೆ ಮಾಡಿದರು           

   

 ಪ್ರಜಾವಾಣಿ ಚಿತ್ರ

ಮೈಸೂರು: ‘ಕಾವ್ಯಕ್ಕೆ ವಿಜ್ಞಾನ ಖಚಿತತೆಯ ಹಾಗೂ ವಿಜ್ಞಾನಕ್ಕೆ ಮಾನವೀಯತೆಯ ಸ್ಪರ್ಶ ಬೇಕು. ಆಗ ಮಾತ್ರ ವಿಜ್ಞಾನ ವಿನಾಶದ ಬದಲು ಪ್ರಗತಿಗೆ ಕಾರಣವಾಗಬಹುದು’ ಎಂದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ನೀಲಗಿರಿ ಎಂ. ತಳವಾರ ಅಭಿ‍ಪ್ರಾಯ ವ್ಯಕ್ತಪಡಿಸಿದರು.

ADVERTISEMENT

ಬೆಳಕು ಚಾರಿಟಬಲ್‌ ಟ್ರಸ್ಟ್‌ ಹಾಗೂ ಪ್ರಗತಿ ಪ್ರಕಾಶನದ ಸಹಯೋಗದಲ್ಲಿ ನಗರದ ಜೆಎಲ್‌ಬಿ ರಸ್ತೆಯ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲೆ ಅಕ್ಕಿಹೆಬ್ಬಾಳು ಸರ್ಕಾರಿ ಪಿಯು ಕಾಲೇಜಿನ ಭೌತವಿಜ್ಞಾನ ಉಪನ್ಯಾಸಕ ಎಲ್‌.ಸಿ. ಶಂಕರ ಅವರ ‘ಮಂಥನ ಮುತ್ತುಗಳು’ ಚುಟುಕು ಸಂಕಲನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಮಾನವ ಕಲ್ಯಾಣಕ್ಕಾಗಿ ಸಾಹಿತ್ಯ ಮತ್ತು ವಿಜ್ಞಾನ ಸಂಗಮವಾಗಬೇಕು’ ಎಂದು ಆಶಿಸಿದರು.

‘ಕಾವ್ಯದ ಮೂಲದ್ರವ್ಯವೆಂದರೆ ಭಾವತೀವ್ರತೆ ಮತ್ತು ಭಾಷೆ. ಕಾವ್ಯಕ್ಕೆ ಉತ್ಕಟವಾದ ಭಾವತೀವ್ರತೆ ಇರಬೇಕು. ಹೊರಮೈಯಲ್ಲಿ ಭಾಷೆ ಇರಬೇಕು. ಪ್ರಾಣಕ್ಕೆ ಉಸಿರಿನಂತೆ ಕಾವ್ಯಕ್ಕೆ ಭಾಷೆ ಇರಬೇಕು. ಭಾವ, ಭಾಷೆ, ಪ್ರತಿಭೆ ಸಂಗಮವಾದಾಗ ಕಾವ್ಯ ಮೂಡುತ್ತದೆ. ಕಾವ್ಯಕ್ಕೆ ವಸ್ತು ಮತ್ತು ಪರಿಸರ ಕೂಡ ಮುಖ್ಯವಾಗುತ್ತದೆ. ಲೌಕಿಕ, ಆನುಭಾವಿಕ ಕಾವ್ಯವಾಗುತ್ತದೆ’ ಎಂದರು.

ಹೊಸಬರನ್ನು ಸ್ವಾಗತಿಸಬೇಕು: 

‘ಓದಿಗೂ, ವೃತ್ತಿಗೂ, ಬರವಣಿಗೆಗೂ ಸಂಬಂಧವಿಲ್ಲ. ಆಸಕ್ತಿ ಇರುವವರೆಲ್ಲಾ ಸಾಹಿತ್ಯ ರಚಿಸಬಹುದು. ಕಾವ್ಯಕ್ಕೆ ಹೊಸ ಹೊಸ ನೀರು ಬರುತ್ತಾ ಇರಬೇಕು. ಸಾಹಿತ್ಯ ಲೋಕಕ್ಕೆ ಯಾರೇ ಹೊಸಬರು ಬಂದರೂ ಸ್ವಾಗತಿಸುವುದು ನಮ್ಮ ಕರ್ತವ್ಯವಾಗಬೇಕು. ಶಂಕರ ಅವರ ಚುಟುಕುಗಳಲ್ಲಿ ಪರಿಸರ, ಸಾರ್ವಜನಿಕ, ಕೌಟುಂಬಿಕ ಪ್ರಜ್ಞೆಯ ಚಿಂತನೆ ವ್ಯಾಪಕವಾಗಿ ಮೂಡಿಬಂದಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನೆರಳು ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಅಮ್ಮಸಂದ್ರ ಸುರೇಶ್‌, ‘ಈ ಕೃತಿಯಲ್ಲಿರುವ ಚುಟುಕುಗಳು ಚಿಕಿತ್ಸಕ ಗುಣ ಹೊಂದಿವೆ. ಸಮಾಜಕ್ಕೆ ಮುದ ನೀಡುವ ವಿಷಯಗಳು ಅಡಕವಾಗಿವೆ’ ಎಂದರು.

ಉದ್ಘಾಟಿಸಿದ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಪ್ರಗತಿ ಪ್ರಕಾಶನದ ಪುರುಷೋತ್ತಮ ಮಾತನಾಡಿದರು.

ಕನ್ನಡ ಉಪನ್ಯಾಸಕ ಶಿವಾನಂದ, ಕೆ.ಆರ್‌. ನಗರ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಶ್ರೀನಿವಾಸ್‌, ಸಂಗೀತ ಶಿಕ್ಷಕಿ ಡಿ. ಜ್ಞಾನೇಶ್ವರಿ, ಪ್ರೌಢಶಾಲಾ ಶಿಕ್ಷಕಿ ರೋಹಿಣಿ, ಉಪನ್ಯಾಸಕ ಗಿಡ್ಡಶೆಟ್ಟಿ, ನೆರಳು ಚಾರಿಟಬಲ್‌ ಟ್ರಸ್ಟ್‌ ಕಾರ್ಯದರ್ಶಿ ಕುಮಾರ್‌, ಅಕ್ಕಿಹೆಬ್ಬಾಳು ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ, ಪ್ರೌಢಶಾಲಾ ಮುಖ್ಯಶಿಕ್ಷಕ ಚಲುವರಾಜ್‌, ಗೃಹರಕ್ಷಕ ದಳದ ನಿವೃತ್ತ ಕಮಾಂಡೆಂಟ್‌ ವಿ. ಪುರುಷೋತ್ತಮ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.