
ಮೈಸೂರು: ‘ತಾಯಂದಿರ ಮರಣ ಪ್ರಮಾಣ ತಡೆಯುವಲ್ಲಿ ಮೈಸೂರು ವಿಭಾಗದ ಹೆಚ್ಚಿನ ಜಿಲ್ಲೆಗಳು ವಿಫಲವಾಗಿವೆ. ಅಧಿಕಾರಿಗಳು ನ್ಯೂನತೆ ಪತ್ತೆಹಚ್ಚಿ ಕ್ರಮವಹಿಸಬೇಕು. ಮರಣ ಸಂಖ್ಯೆ ಶೂನ್ಯಕ್ಕೆ ಇಳಿಸಬೇಕು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.
ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಸೋಮವಾರ ನಡೆದ ಇಲಾಖೆಯ ಮೈಸೂರು ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
‘ಮೈಸೂರಿನಲ್ಲಿ ಗರ್ಭಿಣಿಯರ ಮರಣ ಸಂಖ್ಯೆಯು 27ರಿಂದ 7ಕ್ಕೆ ಇಳಿಕೆಯಾಗಿದೆ. ಮಂಡ್ಯವೂ ಸುಧಾರಿಸಿದೆ. ಆದರೆ ದಕ್ಷಿಣ ಕನ್ನಡದಲ್ಲಿ ಕಳೆದ ವರ್ಷ 6 ಗರ್ಭಿಣಿಯರು ಮರಣ ಹೊಂದಿದ್ದರು. ಈ ಬಾರಿ ವರ್ಷ ಪೂರ್ಣಗೊಳ್ಳಲು ಐದು ತಿಂಗಳು ಬಾಕಿ ಇರುವಂತೆ 5 ಸಾವು ಸಂಭವಿಸಿದೆ. ಚಿಕ್ಕಮಗಳೂರು, ಚಾಮರಾಜನಗರ, ಕೊಡಗು, ಹಾಸನ, ಉಡುಪಿಯಲ್ಲೂ ನಿರೀಕ್ಷಿತ ಕೆಲಸ ಆಗಿಲ್ಲ. ಇಲ್ಲಿನ ಅಂಕಿ– ಅಂಶವು ಅಧಿಕಾರಿಗಳ ವಿಫಲತೆಯನ್ನು ತೋರಿಸುತ್ತಿದೆ’ ಎಂದು ತರಾಟೆಗೆ ತೆಗೆದುಕೊಂಡರು.
‘ಇತರೆ ಜಿಲ್ಲೆಯಿಂದ ಚಿಕಿತ್ಸೆಗೆ ಬಂದು ಮರಣ ಹೊಂದಿದ್ದಾರೆ ಎಂದು ಕಾರಣ ನೀಡಬೇಡಿ. ಒಂದೊಂದು ಜೀವ ಉಳಿಸಿದರೂ ಅದೇ ಸಾಧನೆ. ವರ್ಷಾಂತ್ಯದಲ್ಲಿ ಪರಿಶೀಲಿಸುವಾಗ ಎಲ್ಲಾ ಜಿಲ್ಲೆಗಳ ಮರಣ ಪ್ರಮಾಣವು ಕಡಿಮೆಯಾಗಬೇಕು. 2028ರಲ್ಲಿ ಶೇ 20ರೊಳಗಿರಬೇಕು’ ಎಂದು ತಾಕೀತು ಮಾಡಿದರು.
ಚೆಲುವಾಂಬ ಆಸ್ಪತ್ರೆಯ ಮೇಲ್ವಿಚಾರಕಿ ಸುಧಾ ಮಾತನಾಡಿ, ‘ಹತ್ತಿರದ ಜಿಲ್ಲೆಯಲ್ಲಿ ವಿಶೇಷ ನವಜಾತ ಶಿಶು ಆರೈಕೆ ಘಟಕ ಇಲ್ಲದಿರುವ ಕಾರಣ ನಮ್ಮ ಆಸ್ಪತ್ರೆಗೆ ಹೆಚ್ಚಿನ ಜನರು ಬರುತ್ತಿದ್ದಾರೆ. ಎಲ್ಲಾ ಜಿಲ್ಲೆಯಲ್ಲೂ ಘಟಕ ತೆರೆದರೆ ಸಾಮಾನ್ಯರಿಗೂ ಸಹಾಯವಾಗಲಿದೆ’ ಎಂದು ತಿಳಿಸಿದರು.
‘ಶಿಶು ಮರಣ ಪ್ರಮಾಣ ತಗ್ಗಿಸಲು ವಿಶೇಷ ನವಜಾತ ಶಿಶು ಆರೈಕೆ ಘಟಕಗಳನ್ನು ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಲು ಕ್ರಮವಹಿಸಿ. ಕೊಡಗು ಹಾಗೂ ಚಾಮರಾಜನಗರದಲ್ಲಿ ಘಟಕ ಇಲ್ಲ. ಕೊಡಗಿನಲ್ಲಿ 62, ಹಾಸನದಲ್ಲಿ 161 ಶಿಶು ಮರಣ ವರದಿಯಾಗಿದೆ. ಇದಕ್ಕೆ ಕಾರಣವೇನು’ ಎಂದು ಸಚಿವರು ಪ್ರಶ್ನಿಸಿದರು.
ಇದಕ್ಕೆ ಕೊಡಗಿನ ಡಿಎಚ್‌ಒ ಪ್ರತಿಕ್ರಿಯಿಸಿ, ‘ಹಾಡಿಗಳಲ್ಲಿ ಹರ್ಬಲ್ ಜ್ಯೂಸ್ ನೀಡುತ್ತಾರೆ. ಆ ಕಾರಣದಿಂದ 7 ಮಕ್ಕಳು ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.
‘ಕಾರಣಗಳು ಸಮಂಜಸವಾಗಿಲ್ಲ. ನಿಮ್ಮ ಸೇವೆ ಪರಿಣಾಮಕಾರಿಯಾಗದಿರುವುದರಿಂದ ವೈಫಲ್ಯ ಎದ್ದು ಕಾಣುತ್ತಿದೆ. ಮೇಲಧಿಕಾರಿಗಳು ಎರಡೂ ಜಿಲ್ಲೆಗಳ ಬಗ್ಗೆ ಪರಿಶೀಲನೆ ಮಾಡಬೇಕು’ ಎಂದು ತಾಕೀತು ಮಾಡಿದರು.
‘ಆರೋಗ್ಯ ಕೇಂದ್ರಗಳಿಗೆ ಜಾಗದ ಕೊರತೆಯ ಸಮಸ್ಯೆ ಶೀಘ್ರ ಪರಿಹರಿಸಿಕೊಳ್ಳಿ. ನಮ್ಮ ಕ್ಲಿನಿಕ್‌ಗೆ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಅವಕಾಶ ನೀಡದಿದ್ದರೆ ತಕ್ಷಣವೇ ಬದಲಿ ಸ್ಥಳ ಹುಡುಕಿ. ಸ್ಥಳಾವಕಾಶ ನೀಡುವಂತೆ ಕೆಎಸ್‌ಆರ್‌ಟಿಸಿಗೆ ಮನವಿ ಮಾಡಿ’ ಎಂದರು.
‘ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಸೆಮಿ ಕ್ರಿಟಿಕಲ್ ಹಂತದಲ್ಲಿದ್ದ 1,646 ಜನರಿಗೆ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಿದ್ದು, ಇವರಲ್ಲಿ ಮರಣ ಹೊಂದಿದವರು ಹಾಗೂ ಜೀವಕ್ಕೆ ತೊಂದರೆಯಾಗದವರ ವಿವರ ನೀಡಬೇಕು. ಇದರಿಂದ ಯೋಜನೆಯ ಉಪಯುಕ್ತತೆಯ ಬಗ್ಗೆ ನಿಖರ ಮಾಹಿತಿ ದೊರಕುತ್ತದೆ’ ಎಂದು ಹೇಳಿದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಮಂಜೇಗೌಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಶಿವಕುಮಾರ್, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕ ವಸಂತ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಮೆನನ್, ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್ ಭಾಗವಹಿಸಿದ್ದರು.
ಆರೋಗ್ಯ ಇಲಾಖೆಯ ಸಮಸ್ಯೆಗಳ ಚರ್ಚೆ ಎಂಟು ಜಿಲ್ಲೆಯ ಅಧಿಕಾರಿಗಳು ಭಾಗಿ ಜನಪರ ಸೇವೆಗೆ ಸಚಿವರ ಸಲಹೆ
ವೈದ್ಯರು ಸಿಬ್ಬಂದಿ ಸಹಜ ಹೆರಿಗೆಗೆ ಒತ್ತು ನೀಡಬೇಕು. 78302 ಹೆರಿಗೆಗಳಲ್ಲಿ 39706 ಹೆರಿಗೆ ಸಿಸೇರಿಯನ್ ಮೂಲಕ ಆಗಿದೆ. ಬಾಣಂತಿಯರಿಗೆ ಮಾನಸಿಕ ಹಾಗೂ ದೈಹಿಕವಾಗಿ ಧೈರ್ಯ ತುಂಬಬೇಕುದಿನೇಶ್ ಗುಂಡೂರಾವ್ ಸಚಿವ
ಲಿಂಗಾನುಪಾತ: ಜಾಗೃತಿ ಮೂಡಿಸಿ’
‘ಮೈಸೂರು ವಿಭಾಗದಲ್ಲಿ ಭ್ರೂಣ ಹತ್ಯೆ ಪ್ರಮಾಣ ಪರಿಣಾಮಕಾರಿಯಾಗಿ ಕಡಿಮೆಯಾಗಿರುವುದು ವರದಿಯಲ್ಲಿ ಕಂಡುಬಂದಿದೆ. ಈ ಕೆಲಸ ಮತ್ತಷ್ಟು ವೇಗ ಪಡೆಯಬೇಕು. ಕಾರ್ಯಾಚರಣೆ ಮಾತ್ರವಲ್ಲದೇ ಜನರಲ್ಲಿ ಲಿಂಗಾನುಪಾತದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯಲಿ’ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
‘ಹಾವು ಕಡಿತ: ಚಿಕಿತ್ಸೆಯ ಅರಿವು ಮೂಡಿಸಿ’
‘ಹಾವು ಕಡಿತಕ್ಕೆ ಸಂಬಂಧಿಸಿ ಮೈಸೂರು ವಿಭಾಗದ 8 ಜಿಲ್ಲೆಗಳಲ್ಲಿ 4089 ಪ್ರಕರಣಗಳು ವರದಿಯಾಗಿದ್ದು 4084 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 23 ಜನ ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಆ್ಯಂಟಿರೇಬಿಸ್ ಹಾಗೂ ಸ್ನೇಕ್ ವ್ಯಾಕ್ಸಿನ್ ಇರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಆರಂಭದಲ್ಲೇ ಆಸ್ಪತ್ರೆಗೆ ಬರಲು ತಿಳಿಸಿ’ ಎಂದು ಸಚಿವರು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.