ADVERTISEMENT

20 ರಂದು ‘ಮತ್ತೆ ಮುಖ್ಯಮಂತ್ರಿ’ ಪ್ರದರ್ಶನ

‘ಮುಖ್ಯಮಂತ್ರಿ’ ಚಂದ್ರು ಅಭಿನಯದ ಹೊಸ ನಾಟಕ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 14:18 IST
Last Updated 16 ಮಾರ್ಚ್ 2022, 14:18 IST
‘ಮುಖ್ಯಮಂತ್ರಿ’ ಚಂದ್ರು
‘ಮುಖ್ಯಮಂತ್ರಿ’ ಚಂದ್ರು   

ಮೈಸೂರು: ರಂಗಾಯಣದ ಬಹುರೂಪಿ ರಂಗೋತ್ಸವದಲ್ಲಿ ‘ಮುಖ್ಯಮಂತ್ರಿ‘ ಚಂದ್ರು ಅಭಿನಯದ 'ಮತ್ತೆ ಮುಖ್ಯಮಂತ್ರಿ' ನಾಟಕ ಮಾರ್ಚ್‌ 20 ರಂದು ಸಂಜೆ 7ಕ್ಕೆ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

'ಮುಖ್ಯಮಂತ್ರಿ' ನಾಟಕ 735ಕ್ಕೂ ಅಧಿಕ ಪ್ರದರ್ಶನಗಳನ್ನು ಕಂಡು ದಾಖಲೆ ಸೃಷ್ಟಿಸಿತ್ತು. ಇದೀಗ ‘ಮುಖ್ಯಮಂತ್ರಿ’ ಚಂದ್ರು ಅವರೇ ಪ್ರಧಾನ ಪಾತ್ರದಲ್ಲಿರುವ 'ಮತ್ತೆ ಮುಖ್ಯಮಂತ್ರಿ' ಹೊಸ ನಾಟಕ ಸಿದ್ಧವಾಗಿದೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಟ ‘ಮುಖ್ಯಮಂತ್ರಿ‘ ಚಂದ್ರು, ‘‘ಮುಖ್ಯಮಂತ್ರಿ’ ನಾಟಕವನ್ನೇ ಮತ್ತೆ ಮತ್ತೆ ಪ್ರದರ್ಶಿಸುವ ಬದಲು ಭಿನ್ನವಾದ ನಾಟಕ ಮಾಡಬೇಕೆಂಬ ಉದ್ದೇಶದಿಂದ ಹೊಸ ನಾಟಕ ತಯಾರಾಗಿದೆ’ ಎಂದರು.

ADVERTISEMENT

‘ಹಳೆಯ ನಾಟಕಕ್ಕೂ, ಹೊಸದಕ್ಕೂ ಸಂಬಂಧವಿಲ್ಲ. ಡಾ.ಕೆ.ವೈ.ನಾರಾಯಣಸ್ವಾಮಿ ರಚಿಸಿರುವ ನಾಟಕ ಸಂಪೂರ್ಣ ಭಿನ್ನವಾಗಿದೆ. ಬೆಂಗಳೂರಿನಲ್ಲಿ ತಾಂತ್ರಿಕ ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರೇಕ್ಷಕರ ಮುಂದೆ ಮೊದಲ ಪ್ರದರ್ಶನ ಮೈಸೂರಿನಲ್ಲಿ ನಡೆಯಲಿದೆ’ ಎಂದರು.

‘ರಾಜ್ಯಕ್ಕೆ ಎಂಥ ಮುಖ್ಯಮಂತ್ರಿ ಬೇಕು? ನಾವು ಬಯಸಿದಂತಹ ವ್ಯಕ್ತಿ ಮುಖ್ಯಮಂತ್ರಿಯಾದರೆ ಏನೇನು ಆಗಬಹುದೆಂಬುದನ್ನು ಚಿತ್ರಿಸಲಾಗಿದೆ. ವ್ಯಕ್ತಿಗತವಾಗಿ ಯಾರನ್ನೂ ಗುರಿಯಾಗಿಸದೆಯೇ, ಪ್ರಜಾಪ್ರಭುತ್ವದ ಲೋಪಗಳನ್ನು ಎತ್ತಿತೋರಿಸಲು ಪ್ರಯತ್ನಿಸಿದ್ದೇವೆ. ಹಳೆಯ ನಾಟಕಕ್ಕಿಂತ ಈ ನಾಟಕದ ಪಾತ್ರ ತುಂಬಾ ಕಷ್ಟಕರವಾಗಿತ್ತು. ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆಂಬ ವಿಶ್ವಾಸವಿದೆ’ ಎಂದು ನುಡಿದರು.

ನಾಟಕದ ನಿರ್ದೇಶಕ ಡಾ.ಬಿ.ವಿ.ರಾಜಾರಾಂ ಮಾತನಾಡಿ, ‘ಚಂದ್ರು ಅವರು ‘ಹಳೆಯ ನಾಟಕದಲ್ಲಿ 1960–70ರ ದಶಕದ ರಾಜಕೀಯ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಇದು 2022ರ ನಾಟಕ. ಈಗಿನ ರಾಜಕೀಯದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ತೋರಿಸಿದ್ದೇವೆ’ ಎಂದರು. ಪ್ರಕಾಶಕ ಗಣೇಶ ಅಮೀನಗಡ ಸುದ್ದಿಗೋಷ್ಠಿಯಲ್ಲಿದ್ದರು.

‘ಬಹುಮುಖಿಯಾಗಿರಬೇಕು’:

‘ರಂಗಾಯಣದ ನಿರ್ದೇಶಕರ ಸ್ಥಾನದಲ್ಲಿರುವವರು ಏಕಮುಖಿಯಾಗಿ ವರ್ತಿಸದೆ, ಬಹುಮುಖಿಯಾಗಿರಬೇಕು’ ಎಂದು ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.

‘ಬೇರೆಯವರ ಭಾವನೆಗಳಿಗೆ ನೋವುಂಟು ಮಾಡಬಾರದು. ಯಾವುದೆ ಸಿದ್ಧಾಂತವನ್ನು ಹೇರಬಾರದು. ಒಪ್ಪುವುದು, ಬಿಡುವುದು ಬೇರೆ ವಿಚಾರ. ಸಿದ್ಧಾಂತದಿಂದ ಸಮಾಜಕ್ಕೆ ತೊಂದರೆ ಇದೆಯೇ, ಇಲ್ಲವೇ ಎಂಬುದನ್ನು ಗಮನಿಸಿ ಮಾತನಾಡಬೇಕು. ಪ್ರಚಾರಕ್ಕಾಗಿ ಏನೆಲ್ಲಾ ಮಾತನಾಡುವುದು ತಪ್ಪು’ ಎಂದರು.

‘ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರೊಂದಿಗೆ ನಾನು ಕೆಲಸ ಮಾಡಿಲ್ಲ. ಆದ್ದರಿಂದ ಅವರ ಕಾರ್ಯವೈಖರಿ ಬಗ್ಗೆ ಏನೂ ಹೇಳಲು ಆಗುವುದಿಲ್ಲ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.