ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ (ಎಂಸಿಡಿಸಿಸಿ) ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಗುರುವಾರ (ಜೂನ್ 27) ನಡೆಯಲಿದ್ದು, ನಾಲ್ವರು ಶಾಸಕರು ಸೇರಿದಂತೆ 12 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಈ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್–ಬಿಜೆಪಿ ಮೈತ್ರಿಕೂಟದ ಬೆಂಬಲಿಗರ ನಡುವೆ ತೀವ್ರ ಪೈಪೋಟಿ ಕಂಡುಬಂದಿದೆ. ಬ್ಯಾಂಕ್‌ನ 16 ಸ್ಥಾನಗಳ ಪೈಕಿ 13ಕ್ಕೆ ಮಾತ್ರ ಚುನಾವಣೆ ಘೋಷಣೆಯಾಗಿದ್ದು, ಯಳಂದೂರು ಕ್ಷೇತ್ರದ್ದು ಅವಿರೋಧ ಆಯ್ಕೆಯಾಗಿದೆ. ಹೀಗಾಗಿ, 12 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಕೆಲವು ಹೊಸ ಮುಖಗಳು ಸೇರಿದಂತೆ ಒಟ್ಟು 29 ಮಂದಿ ಕಣದಲ್ಲಿದ್ದಾರೆ.
ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗುರುವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಕ್ಷಣಗಣನೆ ಆರಂಭವಾಗಿದೆ. ನಂತರ ಮತ ಎಣಿಕೆ ನಡೆಯಲಿದೆ. ಮತದಾರರ ಸಂಖ್ಯೆ ಕಡಿಮೆ ಇರುವ ಕಾರಣ ಸಂಜೆಯೇ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.
ಒಟ್ಟು 380 ಮತದಾರರಿದ್ದಾರೆ. ಮತದಾನಕ್ಕಾಗಿ 100 ಮಂದಿ ಸಿಬ್ಬಂದಿ, ಭದ್ರತೆಗಾಗಿ 25 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮೈಸೂರಿನ ಉಪವಿಭಾಗಾಧಿಕಾರಿಯೂ ಆಗಿರುವ ಚುನಾವಣಾಧಿಕಾರಿ ಆಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಮುಖವಾಗಿ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕ್ಷೇತ್ರಗಳಿಂದ ಆಯ್ಕೆಗಾಗಿ ಚುನಾವಣೆ ನಡೆಯುತ್ತಿದೆ. ಹಲವು ದಿನಗಳಿಂದ ರಾಜಕೀಯ ಹಾಗೂ ಸಹಕಾರ ಕ್ಷೇತ್ರದಲ್ಲಿ ನಡೆಯುತ್ತಿದ್ದ ಚರ್ಚೆಗಳಿಗೆ ಗುರುವಾರ ತೆರೆಬೀಳಲಿದೆ.
ಜಿಲ್ಲೆಯ ಈ ಪ್ರಮುಖ ಬ್ಯಾಂಕ್‌ನ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಕಾಂಗ್ರೆಸ್ ತನ್ನ ಶಾಸಕರು ಸೇರಿದಂತೆ ಘಟಾನುಘಟಿಗಳನ್ನೇ ಕಣಕ್ಕಿಳಿಸಿದೆ. ಅಂತೆಯೇ, ಜೆಡಿಎಸ್–ಬಿಜೆಪಿಯಿಂದಲೂ ಪೈಪೋಟಿ ಕಂಡುಬಂದಿದೆ. ಮತದಾರರಾಗಿರುವ ಸಹಕಾರ ಸಂಘಗಳ ‘ಪ್ರತನಿಧಿ’ಗಳ ಮನವೊಲಿಕೆಗೆ ಕೊನೆ ಕ್ಷಣದ ಪ್ರಯತ್ನಗಳನ್ನು ಸ್ಪರ್ಧಿಗಳು ಮಾಡುತ್ತಿದ್ದಾರೆ. ಈ ಪೈಪೋಟಿಯಲ್ಲಿ ಯಾರ ಕೈಮೇಲಾಗಲಿದೆ ಎನ್ನುವುದು ತಿಳಿದುಬರಲು ಕ್ಷಣಗಣನೆ ಆರಂಭವಾಗಿದೆ.
ಹೋದ ಬಾರಿ ಮಗ, ಜಿ.ಡಿ. ಹರೀಶ್‌ಗೌಡ ಹಾಗೂ ತಂಡವನ್ನು ಗೆಲ್ಲಿಸಿಕೊಳ್ಳಲು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಶ್ರಮಿಸಿದ್ದರು. ಆದರೆ, ಈ ಬಾರಿ ಅವರು ‘ಮುಖ್ಯಭೂಮಿಕೆ’ಯಲ್ಲಿ ಕಾಣಿಸಿಕೊಂಡಿಲ್ಲ! ಪ್ರಮುಖರನ್ನು ಕಣಕ್ಕಿಳಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಯಾಂಕ್‌ನ ಮೇಲೆ ಹಿಡಿತ ಸಾಧಿಸಲು ತಂತ್ರ ರೂಪಿಸಿದ್ದು, ಅದರಲ್ಲಿ ಯಶಸ್ಸು ದೊರೆಯುವುದೇ ಎನ್ನುವುದು ಕುತೂಹಲ ಮೂಡಿಸಿದೆ.
ಕಣದಲ್ಲಿ ಇರುವವರಾರು?: ಮೈಸೂರು ತಾಲ್ಲೂಕು ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧಿ ಎಂ.ಕೆಂಚಪ್ಪ, ಎಂ.ಜಿ.ಸಿದ್ದರಾಜು, ನಂಜನಗೂಡು– ಕೆ.ರಾಜು, ಮಾಜಿ ನಿರ್ದೇಶಕ ಬಿ.ಎನ್.ಸದಾನಂದ, ತಿ.ನರಸೀಪುರ– ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಟಿ.ಪಿ.ಬೋರೇಗೌಡ, ಎಚ್.ಡಿ.ಕೋಟೆ– ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು, ಮಾದಪ್ಪ, ಜೆಡಿಎಸ್ ಬೆಂಬಲಿತ ಜೆ.ಕೆ.ಲಕ್ಷ್ಮೀಪ್ರಸಾದ್, ಶಿವನಂಜೇಗೌಡ, ಹುಣಸೂರು– ಗೋವಿಂದೇಗೌಡ, ಜೆ.ಶಿವಣ್ಣ, ಜೆಡಿಎಸ್ ಶಾಸಕ ಜಿ.ಡಿ.ಹರೀಶ್ ಗೌಡ, ಪಿರಿಯಾಪಟ್ಟಣ– ಸಿ.ಎನ್.ರವಿ, ಈ.ಪಿ.ಲೋಕೇಶ್, ಕೆ.ಆರ್.ನಗರ– ಜೆಡಿಎಸ್ ಬೆಂಬಲಿತ, ವಿಧಾನಪರಿಷತ್ ಬಿಜೆಪಿ ಸದಸ್ಯ ಎ.ಎಚ್.ವಿಶ್ವನಾಥ್ ಪುತ್ರ ಅಮಿತ್ ವಿ.ದೇವರಹಟ್ಟಿ, ಕಾಂಗ್ರೆಸ್ ಶಾಸಕ ಡಿ.ರವಿಶಂಕರ್ ಅವರ ತಂದೆ ದೊಡ್ಡಸ್ವಾಮೇಗೌಡ, ಎಸ್.ಸಿದ್ದೇಗೌಡ, ಚಾಮರಾಜನಗರ– ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ, ಬಿಜೆಪಿ ಬೆಂಬಲಿತ ಪಿ.ವೃಷಬೇಂದ್ರಪ್ಪ, ಗುಂಡ್ಲುಪೇಟೆ– ಕಾಂಗ್ರೆಸ್ ಶಾಸಕ ಎಚ್.ಎಂ.ಗಣೇಶಪ್ರಸಾದ್, ಬಿಜೆಪಿ ಬೆಂಬಲಿತ ಎಸ್.ಎಂ.ವೀರಪ್ಪ.
ಕೊಳ್ಳೇಗಾಲ ಮತ್ತು ಹನೂರು ತಾಲ್ಲೂಕು ಕ್ಷೇತ್ರ– ಮಾಜಿ ಶಾಸಕ ಆರ್.ನರೇಂದ್ರ, ಬಿಜೆಪಿ ಬೆಂಬಲಿತ ಬಿ.ಎಸ್.ಮಲ್ಲೇಶ್, ಪಟ್ಟಣ ಸಹಕಾರ ಬ್ಯಾಂಕ್‌ಗಳು ಮತ್ತು ಗೃಹ ನಿರ್ಮಾಣ ಸಹಕಾರ ಸಂಘಗಳ ಕ್ಷೇತ್ರ– ಜೆಡಿಎಸ್ ಬೆಂಬಲಿತ ಎಸ್‌ಬಿಎಂ ಮಂಜು, ಶಾಸಕ ತನ್ವೀರ್ ಸೇಠ್ ಆಪ್ತ ಜಿ.ಎನ್.ಮಂಜುನಾಥ್, ಮುಡಾ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಎಚ್.ವಿ.ರಾಜೀವ್, ಸಹಕಾರ ಸಂಘಗಳು ಮತ್ತು ಸಹಕಾರ ಬ್ಯಾಂಕುಗಳ ಕ್ಷೇತ್ರ– ಮಾಜಿ ಅಧ್ಯಕ್ಷ ಎಸ್.ಚಂದ್ರಶೇಖರ್ ಹಾಗೂ ಟಿ.ರಾಮೇಗೌಡ ನಡುವೆ ಪೈಪೋಟಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.