ADVERTISEMENT

ಶೇ 33 ಅಂಕ ನಿಗದಿ; ಮಕ್ಕಳ ಉತ್ಸಾಹ ಅಡಗಿಸುವ ಕ್ರಮ: ಎಚ್‌.ವಿಶ್ವನಾಥ್ ಟೀಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 23:39 IST
Last Updated 16 ಅಕ್ಟೋಬರ್ 2025, 23:39 IST
ಎಚ್‌.ವಿಶ್ವನಾಥ್‌
ಎಚ್‌.ವಿಶ್ವನಾಥ್‌   

ಮೈಸೂರು: ‘ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ತೇರ್ಗಡೆಯಾಗಲು ಬೇಕಾದ ಕನಿಷ್ಠ ಅಂಕವನ್ನು ಶೇ 33ಕ್ಕೆ ನಿಗದಿ ಮಾಡಿರುವ ರಾಜ್ಯ ಸರ್ಕಾರದ ಕ್ರಮವು ಮಕ್ಕಳ ಕಲಿಕಾ ಉತ್ಸಾಹವನ್ನು ಕುಗ್ಗಿಸುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್‌.ವಿಶ್ವನಾಥ್ ಟೀಕಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕಲಿಕಾ ಸಾಮರ್ಥ್ಯ ಕಡಿಮೆ ಮಾಡುವ ಇಂಥ ನೀತಿಗಳನ್ನು ತರಬಾರದು’ ಎಂದು ಪ್ರತಿಪಾದಿಸಿದರು.

‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗಾಗಿ ದಸರಾ ರಜೆಯನ್ನು ವಿಸ್ತರಿಸಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಶಾಲಾ ಶಿಕ್ಷಣ ಅಧೋಗತಿಗೆ ಹೋಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಸಮೀಕ್ಷೆಯಿಂದ ರಾಜ್ಯದ ಮಕ್ಕಳಿಗೆ ಊಟ–ಪಾಠ ಇಲ್ಲದಾಗಿದೆ. ಉತ್ತರ ಕರ್ನಾಟಕದಲ್ಲಿ ಮಕ್ಕಳು ಹಸಿವಿನಿಂದ ಮಲಗುತ್ತಿದ್ದಾರೆ. ಶಾಲೆಗಳನ್ನು ಕೂಡಲೇ ಆರಂಭಿಸಬೇಕು. ಅಕ್ಷರ ಹಾಗೂ ಆರೋಗ್ಯವನ್ನು ಕಡೆಗಣಿಸಬಾರದು’ ಎಂದು ಆಗ್ರಹಿಸಿದರು.

ADVERTISEMENT

‘ಆರ್‌ಎಸ್‌ಎಸ್‌ ಚಟುವಟಿಕೆಗಳಿಂದ ರಾಜ್ಯಕ್ಕೆ ಯಾವ ಅನಾಹುತವಾಗಿದೆ? ಕೆಲಸಕ್ಕೆ ಬಾರದ ವಿಚಾರ ಮಾತಾಡಿ ರಾಷ್ಟ್ರೀಯ ನಾಯಕನೆಂದು ಬಿಂಬಿಸಿಕೊಳ್ಳಲು ಪ್ರಿಯಾಂಕ್‌ ಖರ್ಗೆ ಮುಂದಾಗಿದ್ದಾರೆ’ ಎಂದು ದೂರಿದರು. 

‘ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರನಿಗೆ ಯಾರು ಬೆದರಿಕೆ ಹಾಕಲು ಸಾಧ್ಯ? ನಾನೂ ಸಿದ್ದರಾಮಯ್ಯ ವಿರುದ್ಧ ಎಷ್ಟೊಂದು ಟೀಕೆ ಮಾಡಿದ್ದೇನೆ. ನನಗೆ ಯಾರೊಬ್ಬರೂ ಬೆದರಿಕೆ ಹಾಕಿಲ್ಲ. ಪ್ರಿಯಾಂಕ್‌ಗೆ ಬೆದರಿಕೆ ಕರೆ ಬಂದಿದೆ ಎಂದಿರುವುದು ಶುದ್ದ ಸುಳ್ಳು’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.