ಎಚ್.ಡಿ. ತಾಲ್ಲೂಕಿನ ಡಿ.ಬಿ. ಕುಪ್ಪೆ ವಲಯದ ಬಳ್ಳೆ ಆನೆ ಶಿಬಿರದಲ್ಲಿ ಅರ್ಜುನ ಆನೆಯ ಪ್ರತಿಮೆಯನ್ನು ಶುಕ್ರವಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಅನಾವರಣಗೊಳಿಸಿದರು
ಎಚ್.ಡಿ. ಕೋಟೆ/ ಹಂಪಾಪುರ: ‘ನಾಡಹಬ್ಬ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆ ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಜನರ ಮನಸ್ಸಿನಲ್ಲಿ ಉಳಿದಿದ್ದಾನೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ನೆನೆದರು.
ತಾಲ್ಲೂಕಿನ ಡಿ.ಬಿ. ಕುಪ್ಪೆ ವಲಯದ ಬಳ್ಳೆ ಆನೆ ಶಿಬಿರದಲ್ಲಿ ಅರ್ಜುನ ಆನೆಯ ಪ್ರತಿಮೆಯನ್ನು ಶುಕ್ರವಾರ ಅನಾವರಣಗೊಳಿಸಿ ಅವರು ಮಾತನಾಡಿದರು.
‘ದಸರೆದಲ್ಲಿ ಎಂಟು ಬಾರಿ ಅಂಬಾರಿ ಹೊತ್ತು ಕ್ಯಾಪ್ಟನ್ ಆಗಿದ್ದ, ಗಾಂಭಿರ್ಯಕ್ಕೆ ಹೆಸರಾಗಿದ್ದ. ಪುಂಡಾನೆ ಪಳಗಿಸಲು ಬೇಕಾಗಿದ್ದ. ಹುಲಿ ಸೆರೆ ಕಾರ್ಯಾಚರಣೆಯಲ್ಲೂ ಪಾಲ್ಗೊಳ್ಳುತ್ತಿದ್ದ. ಆ ಆನೆ ಕಾಳಗದಲ್ಲಿ ಸಾವಿಗೀಡಾದಾಗ, ಬಳ್ಳೆಯಲ್ಲೇ ಸಮಾಧಿ ಮಾಡುವಂತೆ ಎಚ್.ಡಿ. ಕೋಟೆ ಜನತೆ ಮನವಿ ಸಲ್ಲಿಸಿದ್ದರು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಅಂದು ಕಾಳಗ ನಡೆದ ಸ್ಥಳದಲ್ಲೇ ಸಮಾಧಿ ಮಾಡಲಾಯಿತು. ಯಸಳೂರು ಹಾಗೂ ಬಳ್ಳೆ ಶಿಬಿರದಲ್ಲಿ ಅರ್ಜುನ ಆನೆಯ ಪ್ರತಿಮೆ ಸ್ಥಾಪಿಸಲಾಗಿದೆ’ ಎಂದರು.
‘ಅರ್ಜುನ ಹಾಸನ ಜಿಲ್ಲೆ ಯಸಳೂರು ಬಳಿ ಮದಗಜ ಸೆರೆ ಕಾರ್ಯಾಚರಣೆ ವೇಳೆ 2023ರ ಡಿ.4ರಂದು ಏಕಾಂಗಿಯಾಗಿ ಹೋರಾಡಿ ಮಡಿದ. ಮಾವುತ ಮತ್ತು ಹಲವು ಅರಣ್ಯ ಸಿಬ್ಬಂದಿಯ ಜೀವ ಉಳಿಸಿ ಜೀವ ಬಲಿ ಕೊಟ್ಟ. ಅವರ ಅಗಲಿಕೆಯ ನೋವು ನಿರಂತರವಾಗಿ ಕಾಡುತ್ತದೆ’ ಎಂದರು.
‘ಈ ಸ್ಮಾರಕವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ಅರ್ಜುನ ಆನೆ ಪಾಲ್ಗೊಂಡ ವಿವಿಧ ಕಾರ್ಯಾಚರಣೆಗಳ ಚಿತ್ರ, ದಸರಾ ಮಹೋತ್ಸವದ ಅಪರೂಪದ ಕ್ಷಣಗಳ ಚಿತ್ರ ಎಲ್ಲವನ್ನೂ ಇಲ್ಲಿ ಪ್ರದರ್ಶಿಸಿ ಆತನ ಶೌರ್ಯ, ಸಾಹಸ ಎಲ್ಲರಿಗೂ ತಿಳಿಯುವಂತೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.
‘ಈ ಪ್ರತಿಮೆ 2.98 ಮೀಟರ್ ಎತ್ತರವಿದೆ. 3.74 ಮೀಟರ್ ಉದ್ದ ಇದೆ. 650 ಕೆ.ಜಿ. ತೂಕವಿದೆ. ಆ ಆನೆಯ ಶೌರ್ಯ ಮತ್ತು ಸಾಧನೆಯನ್ನು ಎಲ್ಲರಿಗೂ ತಿಳಿಸಲು ಮುಂದಿನ ದಿನಗಳಲ್ಲಿ ಯೋಜನೆಯನ್ನು ಬಳ್ಳೆಯಲ್ಲೇ ರೂಪಿಸಲಾಗುವುದು’ ಎಂದು ಹೇಳಿದರು.
‘ಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳು ಸಾವಿಗೀಡಾಗಿರುವುದು ಬೇಸರದ ಸಂಗತಿ. ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಲಾಗಿದೆ. ವರದಿ ಆಧರಿಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಕಾಡಂಚಿನ ಪ್ರದೇಶದಲ್ಲಿ ಪ್ರಾಣಿಗಳ ಅಸಹಜ ಸಾವು ತಪ್ಪಿಸಲು ಡ್ರೋನ್ ಹಾಗೂ ಮಾನವ ಗಸ್ತು ಹೆಚ್ಚಿಸಲಾಗುವುದು’ ಎಂದು ತಿಳಿಸಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ‘ಅರ್ಜುನ ಆನೆ ಪ್ರತಿಮೆ ಸ್ಥಾಪನೆಯು ಮುಖ್ಯಮಂತ್ರಿಯವರ ವಿಶೇಷ ಕಾಳಜಿಯಿಂದ ಸಾಧ್ಯವಾಯಿತು. ₹ 20 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಮಂಗಳೂರು ಮೂಲದ ಶಿಲ್ಪಿ ಧನಂಜಯ ಅವರು ಪ್ರತಿಮೆಯನ್ನು ಉತ್ತಮವಾಗಿ ಮಾಡಿದ್ದಾರೆ’ ಎಂದರು.
ಸಿಎಫ್‌ಗಳಾದ ಮಾಲತಿಪ್ರಿಯಾ, ಸೋನಾಲ್, ಎಸಿಎಫ್ ಮಧು ಲಕ್ಷ್ಮೀಕಾಂತ್, ಆರ್‌ಎಫ್‌ಒಗಳಾದ ಸಿದ್ದರಾಜು, ಹನುಮಂತರಾಜು, ಸುಬ್ರಹ್ಮಣಿ, ಅಭಿಷೇಕ್, ವನ್ಯಜೀವಿ ಪಶುವೈದ್ಯ ರಮೇಶ್, ಇಒ ಧರಣೇಶ್, ಡಿಸಿಎಫ್‌ಗಳಾದ ಸೀಮಾ, ಅಭಿಷೇಕ್, ನೆಹರೂ, ಪ್ರಭುಗೌಡ ಇದ್ದರು.
ಮಾನವ –ವನ್ಯಪ್ರಾಣಿ ಸಂಘರ್ಷ ತಡೆಗೆ ಎಷ್ಟು ರೈಲು ಬ್ಯಾರಿಕೇಡ್ ಅಳವಡಿಸಬೇಕು ಎಂಬುದರ ವರದಿ ತಯಾರಿಸಲಾಗುತ್ತಿದ್ದು ಹಣ ನೀಡಲು ಮುಖ್ಯಮಂತ್ರಿ ಸಿದ್ಧವಿದ್ದಾರೆಈಶ್ವರ ಖಂಡ್ರೆ ಅರಣ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.