ADVERTISEMENT

ಸ್ತಬ್ಧಚಿತ್ರ ಸಿದ್ಧತೆ ಪರಿಶೀಲಿಸಿದ ಸಚಿವ ಎಸ್.ಟಿ.ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 12:38 IST
Last Updated 3 ಅಕ್ಟೋಬರ್ 2022, 12:38 IST
ಮೈಸೂರಿನ ಎಪಿಎಂಸಿ ಆವರಣದಲ್ಲಿ ಸಿದ್ಧಗೊಳ್ಳುತ್ತಿರುವ ಸ್ತಬ್ಧಚಿತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಸೋಮವಾರ ವೀಕ್ಷಿಸಿದರು
ಮೈಸೂರಿನ ಎಪಿಎಂಸಿ ಆವರಣದಲ್ಲಿ ಸಿದ್ಧಗೊಳ್ಳುತ್ತಿರುವ ಸ್ತಬ್ಧಚಿತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಸೋಮವಾರ ವೀಕ್ಷಿಸಿದರು   

ಮೈಸೂರು: ಬಂಡಿಪಾಳ್ಯದ ಎಪಿಎಂಸಿ ಆವರಣದಲ್ಲಿ ನೂತನವಾಗಿ ಆರಂಭಿಸಿರುವ ‘ಶ್ರೀ ಅನ್ನಪೂರ್ಣ’ ಕ್ಯಾಂಟೀನ್ ಅನ್ನು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೋಮವಾರ ಉದ್ಘಾಟಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕ್ಯಾಂಟೀನ್‌ನಲ್ಲಿ ದಸರಾವರೆಗೆ ಉಚಿತವಾಗಿ ಊಟ ನೀಡಲಾಗುತ್ತದೆ. ನಂತರದ ದಿನಗಳಲ್ಲಿ ₹ 10 ರೂಪಾಯಿಗೆ ಕೊಡಲಾಗುತ್ತದೆ’ ಎಂದು ತಿಳಿಸಿದರು.

‘ದಾನಿಗಳ ನೆರವಿನಿಂದ ರೈತರಿಗೆ ರುಚಿ ಮತ್ತು ಶುಚಿಯಾದ ಊಟ ನೀಡುವ ಕೆಲಸವನ್ನು ವರ್ತಕರು ಮಾಡುತ್ತಿದ್ದಾರೆ. ಸಹಕಾರ ಕ್ಷೇತ್ರದಿಂದ ಈ ಕ್ಯಾಂಟೀನ್ ಆರಂಭಿಸಲಾಗಿದೆ. ದಾನಿಗಳು ಮುಂದೆ ಬಂದರೆ ರಾಜ್ಯದ ಇತರ ಎಪಿಎಂಸಿಗಳಲ್ಲೂ ಕ್ಯಾಂಟೀನ್‌ ತೆರೆಯಲು ಚಿಂತಿಸಲಾಗುವುದು’ ಎಂದರು.

ADVERTISEMENT

ದಸರಾ ಜಂಬೂಸವಾರಿಯಲ್ಲಿ ಸಾಗಲಿರುವ ಸ್ತಬ್ಧಚಿತ್ರಗಳು ಸಿದ್ಧಗೊಳ್ಳುತ್ತಿರುವುದನ್ನು ಸಚಿವರು ವೀಕ್ಷಿಸಿದರು.

‘ಪ್ರತಿ ಜಿಲ್ಲೆಯಿಂದಲೂ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಇರಲಿವೆ. ಆಯಾ ಜಿಲ್ಲೆಯ ಕಲೆ, ಸಂಸ್ಕೃತಿ ಬಿಂಬಿಸಲಿವೆ. ಜಂಬೂಸವಾರಿ ತಯಾರಿಯು ಅಂತಿಮ ಹಂತದಲ್ಲಿದೆ. ಯಾವುದೇ ಕೊರತೆ ಇಲ್ಲ. ಕಲಾತಂಡಗಳೂ ಆಗಮಿಸಿವೆ’ ಎಂದರು.

ಶಾಸಕರಾದ ನಿರಂಜನ್ ಕುಮಾರ್, ಜಿ.ಟಿ.ದೇವೇಗೌಡ, ಬಿಜೆಪಿ ಮುಖಂಡ ಎಚ್‌.ವಿ.ರಾಜೀವ್, ಸ್ತಬ್ಧಚಿತ್ರ ಉಪ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.