ADVERTISEMENT

ಸಾಲ ದುರ್ಬಳಕೆಯಾಗದಂತೆ ಕ್ರಮ: ಎಸ್‌.ಟಿ.ಸೋಮಶೇಖರ್‌

ಆರ್ಥಿಕಸ್ಪಂದನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 3:28 IST
Last Updated 3 ಅಕ್ಟೋಬರ್ 2020, 3:28 IST
ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸಾಲದ ಚೆಕ್ ವಿತರಣೆ ಮಾಡಲಾಯಿತು. ಎಸ್‌.ಟಿ.ಸೋಮಶೇಖರ್, ಎಲ್‌.ನಾಗೇಂದ್ರ, ಎಸ್‌.ಎ.ರಾಮದಾಸ್, ಜಿ.ಟಿ.ದೇವೇಗೌಡ, ಜಿ.ಡಿ.ಹರೀಶ್‌ ಗೌಡ, ಎಚ್‌.ವಿ.ರಾಜೀವ್‌ ಇದ್ದಾರೆ
ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸಾಲದ ಚೆಕ್ ವಿತರಣೆ ಮಾಡಲಾಯಿತು. ಎಸ್‌.ಟಿ.ಸೋಮಶೇಖರ್, ಎಲ್‌.ನಾಗೇಂದ್ರ, ಎಸ್‌.ಎ.ರಾಮದಾಸ್, ಜಿ.ಟಿ.ದೇವೇಗೌಡ, ಜಿ.ಡಿ.ಹರೀಶ್‌ ಗೌಡ, ಎಚ್‌.ವಿ.ರಾಜೀವ್‌ ಇದ್ದಾರೆ   

ಮೈಸೂರು: ಸಹಕಾರ ಬ್ಯಾಂಕ್‍ಗಳಿಂದ ಪಡೆದ ಸಾಲದ ದುರ್ಬಳಕೆ ಆಗದಂತೆ ಕ್ರಮವಹಿಸಲಾಗುವುದು. ಇದಕ್ಕಾಗಿ ಈಗಾಗಲೇ ರಾಜ್ಯದಾದ್ಯಂತ ಸಮೀಕ್ಷೆ ಆರಂಭಿಸಲಾಗಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಮೈಸೂರು ವಿಭಾಗೀಯ ಮಟ್ಟದ ಆರ್ಥಿಕ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಲ ಪಡೆದವರು ಅದನ್ನು ಸದ್ಬಳಕೆ ಅಥವಾ ದುರ್ಬಳಕೆ ಮಾಡಿದ್ದಾರೆಯೇ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.

ಪ್ರಸ್ತುತ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿರುವ 37 ಸಾವಿರ ಸಹಕಾರ ಸಂಘಗಳಿಂದ ₹ 39 ಸಾವಿರ ಕೋಟಿ ಸಾಲ ವಿತರಿಸಲು ಉದ್ದೇಶಿಸಲಾಗಿದೆ. ಮೈಸೂರು ವಿಭಾಗದ ಎಂಟು ಜಿಲ್ಲೆಗಳಲ್ಲಿ 21.49 ಲಕ್ಷ ಸದಸ್ಯರಿಗೆ ₹ 16,572 ಕೋಟಿ ಸಾಲ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ADVERTISEMENT

ಆತ್ಮನಿರ್ಭರ ಯೋಜನೆ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆ ಯಡಿ ₹ 39,300 ಕೋಟಿ ಹಣವನ್ನು ಆರ್ಥಿಕ ಸ್ಪಂದನದ ಮೂಲಕ ರೈತರು, ವ್ಯಾಪಾರಸ್ಥರು, ಸ್ವಸಹಾಯ ಸಂಘಗಳು, ಹಾಲು ಉತ್ಪಾದಕ ಸಂಘಗಳು, ಸಣ್ಣ - ದೊಡ್ಡ ಉದ್ದಿಮೆಗಳಿಗೆ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ಜಿ.ಟಿ.ದೇವೇಗೌಡ ಮಾತ ನಾಡಿ, ಸಾಲ ಮನ್ನಾದಿಂದ ಸಹಕಾರ ಬ್ಯಾಂಕ್‍ಗಳು ದಿವಾಳಿಯಾಗಲಿವೆ. ಸಹಕಾರ ಕ್ಷೇತ್ರ ಉಳಿಯಬೇಕಾದರೆ ಸಾಲ ಮನ್ನಾ ಪದ್ಧತಿ ನಿಲ್ಲಿಸಬೇಕು ಎಂದು ಅಭಿಪ್ರಾಯಪಟ್ಟರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಪಟ್ಟಣ, ಗ್ರಾಮೀಣ ಭಾಗ ಗಳ ಜನತೆಗೆ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಹಾಗೂ ರೈತರಿಗೆ ಸಾಲ ನೀಡುವ ಸಲುವಾಗಿ ಆತ್ಮನಿರ್ಭರ ಭಾರತ ಯೋಜನೆ ಸಹಕಾರಿಯಾಗಿದೆ ಎಂದು ಹೇಳಿದರು.

ಶಾಸಕ ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಸಹಕಾರ ಸಂಘಗಳ ನಿಬಂಧಕ
ಎಸ್.ಜಿಯಾವುಲ್ಲ, ಮೇಯರ್ ತಸ್ನಿಂ ಇದ್ದರು.

₹ 4,285 ಕೋಟಿ ಬೆಳೆ ಸಾಲ: ಈ ಆರ್ಥಿಕ ವರ್ಷದಲ್ಲಿ 5.65 ಲಕ್ಷ ರೈತರಿಗೆ ₹ 4,285 ಕೋಟಿ ಬೆಳೆ ಸಾಲ ವಿತರಿಸಲು ಉದ್ದೇಶಿಸಲಾಗಿದ್ದು, ಇದುವರೆಗೆ 2.94 ಲಕ್ಷ ರೈತರಿಗೆ ₹ 2,866 ಕೋಟಿ ಸಾಲ ವಿತರಿಸಲಾಗಿದೆ. ಇದರಲ್ಲಿ 57 ಸಾವಿರ ಹೊಸ ರೈತರಿಗೆ ₹ 439 ಕೋಟಿ ಸಾಲ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.