ADVERTISEMENT

ಘನತ್ಯಾಜ್ಯ ವಿಲೇವಾರಿ ಯೋಜನೆಗೆ ಚಾಲನೆ ನೀಡದ ಶಾಸಕ; ನಗರಸಭೆ ಸದಸ್ಯರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 8 ಮೇ 2025, 16:01 IST
Last Updated 8 ಮೇ 2025, 16:01 IST
ಹುಣಸೂರು ನಗರದ ಹೊರ ವಲಯದ ಘನತ್ಯಾಜ್ಯ ಸಂಗ್ರಹ ಕೇಂದ್ರದಲ್ಲಿ ಗುರುವಾರ ತ್ಯಾಜ್ಯ ವಿಲೇವಾರಿ ಟೆಂಡರ್ ಪ್ರಕ್ರಿಯೆ ಕುರಿತು ಸದಸ್ಯರು ಅಧಿಕಾರಿಗಳ ಕ್ರಮ ವಿರೋಧಿಸಿ ಶಾಸಕ ಜಿ.ಡಿ.ಹರೀಶ್ ಗೌಡ ಗಮನ ಸೆಳೆದು ಯೋಜನೆ ಜಾರಿಗೆ ತಡೆ ಹಿಡಿದರು
ಹುಣಸೂರು ನಗರದ ಹೊರ ವಲಯದ ಘನತ್ಯಾಜ್ಯ ಸಂಗ್ರಹ ಕೇಂದ್ರದಲ್ಲಿ ಗುರುವಾರ ತ್ಯಾಜ್ಯ ವಿಲೇವಾರಿ ಟೆಂಡರ್ ಪ್ರಕ್ರಿಯೆ ಕುರಿತು ಸದಸ್ಯರು ಅಧಿಕಾರಿಗಳ ಕ್ರಮ ವಿರೋಧಿಸಿ ಶಾಸಕ ಜಿ.ಡಿ.ಹರೀಶ್ ಗೌಡ ಗಮನ ಸೆಳೆದು ಯೋಜನೆ ಜಾರಿಗೆ ತಡೆ ಹಿಡಿದರು   

ಹುಣಸೂರು: ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಗ್ರಹ ಘಟಕದಿಂದ ತೆರವುಗೊಳಿಸಲು ಸ್ವಚ್ಛ ಭಾರತ್ ಅಭಿಯಾನ– 2 ಯೋಜನೆ ಅಡಿಯಲ್ಲಿ ತಮಿಳುನಾಡಿನ ಖಾಸಗಿ ಕಂಪನಿಗೆ ಟೆಂಡರ್ ನೀಡಿರುವ ಬಗ್ಗೆ ಸದಸ್ಯರು ತಕರಾರು ಎತ್ತಿ ಯೋಜನೆ ಅನುಷ್ಠಾನಕ್ಕೆ ತಡೆಯೊಡ್ಡಿದರು.

‘ನಗರದ ಹೊರ ವಲಯದ ತ್ಯಾಜ್ಯ ಸಂಗ್ರಹ ಕೇಂದ್ರದಲ್ಲಿ ಕಳೆದ 17 ವರ್ಷದಿಂದ ಸಂಗ್ರಹವಾಗಿರುವ ತ್ಯಾಜ್ಯ ವಿಲೇವಾರಿಗೆ ಕೇಂದ್ರ ಸರ್ಕಾರದ ಸ್ವಚ್ಚ ಭಾರತ್ ಅಭಿಯಾನ–2 ಯೋಜನೆಯಲ್ಲಿ ₹ 1.72 ಕೋಟಿಗೆ ಟೆಂಡರ್ ಪ್ರಕ್ರಿಯೆ ನಡೆಸಿ ಗುತ್ತಿಗೆ ನೀಡಿದ್ದು, ಇದನ್ನು ಆಯುಕ್ತರು ಸದಸ್ಯರ ಗಮನಕ್ಕೆ ತಂದಿರುವುದಿಲ್ಲ’ ಎಂದು ಉದ್ಘಾಟನಾ ಸ್ಥಳದಲ್ಲಿ ಸದಸ್ಯೆ ಗೀತಾ ನಿಂಗರಾಜ್ ತಕರಾರು ತೆಗೆದರು.

ಈ ಸಂಬಂಧ ಶಾಸಕರು ಸಮಗ್ರ ಮಾಹಿತಿ ಪಡೆದರು. ಬಳಿಕ ಮಾತನಾಡಿ, ನಗರಸಭೆ ಅಸ್ಥಿತ್ವದಲ್ಲಿದ್ದರೂ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ‘ಪ್ರತಿಯೊಂದು ಸಭೆಯಲ್ಲೂ ಖುದ್ದು ಹಾಜರಿದ್ದರೂ ಏಕೆ ವಿಷಯ ಚರ್ಚೆಗೆ ಇಡಲಿಲ್ಲ. ಟೆಂಡರ್ ಪ್ರಕ್ರಿಯೆ ನಡೆದು ಯೋಜನೆ ಅನುಷ್ಠಾನದ ಹಂತದಲ್ಲಿ ವಿಷಯ ಸದಸ್ಯರಿಗೆ ತಿಳಿಸಿರುವುದು ಎಷ್ಟು ಸರಿ’ ಎಂದು ಆಯುಕ್ತೆ ಮಾನಸ ಅವರಿಗೆ ತರಾಟೆಗೆ ತೆಗೆದುಕೊಂಡರು.

ADVERTISEMENT

‘ತ್ಯಾಜ್ಯ ಸಂಗ್ರಹ ವಿಲೇವಾರಿ ಕಾಮಗಾರಿ ಕುರಿತಂತೆ ಮುಂದಿನ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಬೇಕು. ಟೆಂಡರ್ ಯಾರಿಗೆ ನೀಡಬೇಕು ಎಂದು ಜನಪ್ರತಿನಿಧಿಗಳು ತೀರ್ಮಾನಿಸಿದ ಬಳಿಕ ಯೋಜನೆಗೆ ಚಾಲನೆ ನೀಡಲಾಗುವುದು’ ಎಂದು ತಿಳಿಸಿ ತೆರಳಿದರು.

ನಗರಸಭೆ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಉಪಾಧ್ಯಕ್ಷೆ ಆಶಾ ದೇವನಾಯಕ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.