ADVERTISEMENT

ಕೋವಿಡ್‌: ಶಾಸಕ ರಾಮದಾಸ್‌ ಸಭೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 6:54 IST
Last Updated 29 ಸೆಪ್ಟೆಂಬರ್ 2020, 6:54 IST
ಕೋವಿಡ್‌ ಸಂಬಂಧ ನಡೆದ ಸಭೆಯಲ್ಲಿ ಶಾಸಕ ಎಸ್‌.ಎ.ರಾಮದಾಸ್‌ ಮಾತನಾಡಿದರು
ಕೋವಿಡ್‌ ಸಂಬಂಧ ನಡೆದ ಸಭೆಯಲ್ಲಿ ಶಾಸಕ ಎಸ್‌.ಎ.ರಾಮದಾಸ್‌ ಮಾತನಾಡಿದರು   

ಮೈಸೂರು: ನಗರದಲ್ಲಿ ಕೋವಿಡ್-19 ಸಮಸ್ಯೆ ಉಲ್ಬಣವಾಗಿದ್ದು, ಈ ಸಂಬಂಧ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಕರೆದು ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ, ಪಾಲಿಕೆ, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕ ಎಸ್.ಎ.ರಾಮದಾಸ್ ಸಭೆ ನಡೆಸಿದರು.

ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರಕದೆ ಮೈಸೂರಿನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳ ಶೇ 50 ಬೆಡ್‌ಗಳನ್ನು ಜಿಲ್ಲಾಡಳಿತಕ್ಕೆ ವಹಿಸಿದೆ. ಅದೇ ರೀತಿ ಮೈಸೂರಿನಲ್ಲಿ ಇದೇ ಮಾದರಿಯನ್ನು ಕಾರ್ಯರೂಪಕ್ಕೆ ತರುವಂತೆ ಮುಖ್ಯಮಂತ್ರಿ ಬಳಿ ಚರ್ಚಿಸಲಾಗುವುದು ಎಂದರು.

ಕೋವಿಡ್ ಸಮಸ್ಯೆಯಿಂದ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಕಡಿತಗೊಂಡಿದ್ದು, ಅವರ ನೆರವಿಗೆ ಕೇಂದ್ರ ಸರ್ಕಾರದ ಕೌಶಲ ಅಭಿವೃದ್ಧಿ ಯೋಜನೆಯಡಿಯಲ್ಲಿ ತರಬೇತಿ ನೀಡಿ ಖಾಸಗೀ ಕ್ಷೇತ್ರಗಳಲ್ಲಿ ಉದ್ಯೋಗ ಕಲ್ಪಿಸುವ ಸಂಬಂಧ ಮಾತುಕತೆ ನಡೆಸಲಾಗುವುದು ಎಂದರು.

ADVERTISEMENT

ಮುಂದಿನ ದಿನಗಳಲ್ಲಿ ಎಲ್ಲ ಸರ್ಕಾರಿ ಕಚೇರಿಯ ಉದ್ಯೋಗಿಗಳಿಗೆ, ಪೊಲೀಸ್ ಸಿಬ್ಬಂದಿ, ಅವರ ಕುಟುಂಬಸ್ಥರಿಗೆ, ಮೈಸೂರಿನ ಸುತ್ತಮುತ್ತಲಿನ ಕೈಗಾರಿಕೆ ಗಳಲ್ಲಿ ಇರುವ ಕಾರ್ಮಿಕರಿಗೂ ಕೋವಿಡ್– 19 ಪರೀಕ್ಷೆ ಮಾಡಲು ತೀರ್ಮಾನಿಸಲಾಯಿತು.

ಹೋಮ್ ಐಸೊಲೇಷನ್‌ನಲ್ಲಿ ಇರುವ ಸೋಂಕಿತರು ಹೊರಗೆ ಒಡಾಡು ತ್ತಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಯಿತು. ನಗರದ ಫಾಸ್ಟ್ ಫುಡ್ ಕೇಂದ್ರಗಳಲ್ಲೂ ನಿಯಮ ಪಾಲನೆಗೆ ಜಾಗೃತಿ ಮೂಡಿಸಲು ಸೂಚನೆ ನೀಡಿದರು.

ಮೈಸೂರಿನ ಸಂಘ ಸಂಸ್ಥೆಗಳು, ಕೈಗಾರಿಕಾ ಸಂಘ, ಹೋಟೆಲ್ ಮಾಲೀಕರ ಸಂಘ, ಚಿತ್ರಮಂದಿರಗಳ ಸಂಘ, ದೇವರಾಜ ಅರಸು ರಸ್ತೆ ವರ್ತಕರ ಸಂಘ, ಜೈನ್ ಸಂಘ, ರಕ್ತ ದಾನಿಗಳ ಸಂಘ, ಮೈಸೂರು ಜಿಲ್ಲಾ ವೈದ್ಯಾಧಿ, ಪಾಲಿಕೆ ಆಯುಕ್ತ, ವಿವಿಧ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳುಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.