ADVERTISEMENT

ಆಯುಧಪೂಜೆ ಮತ್ತು ವಿಜಯದಶಮಿಯಂದು ಹಣ, ಮೊಬೈಲ್, ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 19:28 IST
Last Updated 21 ಅಕ್ಟೋಬರ್ 2018, 19:28 IST

ಮೈಸೂರು: ಆಯುಧಪೂಜೆ ಹಾಗೂ ವಿಜಯದಶಮಿಯಂದು ನಗರದ ಹಲವೆಡೆ ಸಾರ್ವಜನಿಕರಿಂದ ಹಣ, ಮೊಬೈಲ್‌ಗಳು ಹಾಗೂ ಚಿನ್ನಾಭರಣಗಳನ್ನು ಕಳ್ಳರು ಕಳವು ಮಾಡಿದ್ದಾರೆ.

ಬೆಂಗಳೂರಿನ ಮಲ್ಲಿಕಾ ಎಂಬುವವರು ಅ. 18ರಂದು ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಬಂದು, ರೈಲು ನಿಲ್ದಾಣದ ಬಳಿಯ ಬಸ್‌ನಿಲ್ದಾಣದಲ್ಲಿ ಬಸ್‌ ಹತ್ತಿ ನಗರ ಬಸ್‌ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ಅವರ ವ್ಯಾನಿಟಿ ಬ್ಯಾಗಿನ ಜಿಪ್‌ ತೆರೆದಿದ್ದು, ಅದರಲ್ಲಿದ್ದ 45 ಗ್ರಾಂ ತೂಕದ ಅವಲಕ್ಕಿ ಚೈನು, ಬಿಳಿ ಹರಳಿನ ಲಕ್ಷ್ಮಿ ಡಾಲರ್ ಇರುವ 35 ಗ್ರಾಂ ತೂಕದ ಪದಕ, 5.5 ಗ್ರಾಂ ತೂಕದ 3 ಉಂಗುರ, 6 ಗ್ರಾಂ ತೂಕದ ಒಂದು ಉಂಗುರ, 2 ಗ್ರಾಂ ತೂಕದ ಗುಂಡು, 2 ಗ್ರಾಂ ತೂಕದ ಮಾಟಿ ಸೇರಿ 106.5 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ. ಈ ಕುರಿತು ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಗಲಿನಲ್ಲೇ ಮೊಬೈಲ್‌ ಕಸಿದ ಕಳ್ಳ:

ADVERTISEMENT

ಶಿವರಾಜು ಎಂಬುವವರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಅ.20ರಂದು ಮಧ್ಯಾಹ್ನ ಮೊಬೈಲ್‌ನಲ್ಲಿ ಮಾತನಾಡಿಕೊಂಡು ತೆರಳುತ್ತಿದ್ದಾಗ ಹಿಂದಿನಿಂದ ಬಂದ ಕಳ್ಳನೊಬ್ಬ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಪ್ರಕರಣ ದೇವರಾಜ ಠಾಣೆಯಲ್ಲಿ ದಾಖಲಾಗಿದೆ.

ಜಂಬೂಸವಾರಿ ವೀಕ್ಷಿಸುವಾಗ ಮೊಬೈಲ್ ಕಳವು:

ರಿಶಿತಾ ಜುನೇಜಾ ಎಂಬುವವರು ಅ.19ರಂದು ಸಂಜೆ ಆಯುರ್ವೇದಿಕ್ ವೃತ್ತದಲ್ಲಿ ಜಂಬೂ ಸವಾರಿ ಮೆರವಣಿಗೆ ವೀಕ್ಷಣೆ ಮಾಡುತ್ತಿದ್ದಾಗ ಅವರ ಪರ್ಸ್‌ನಲ್ಲಿದ್ದ ಮೊಬೈಲ್‌ ಅನ್ನು ಕಳುವಾಗಿದೆ. ಪ್ರಕರಣ ದೇವರಾಜ ಠಾಣೆಯಲ್ಲಿ ದಾಖಲಾಗಿದೆ.

ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನಕ್ಕೆ ತೆರಳಿದ್ದ ನವೀನ್ ಎಂಬುವರ ಹಣ ಹಾಗೂ ಮೊಬೈಲ್‌ ಕಳುವಾಗಿದೆ. ಅವರು ಅ.19 ರಂದು ತಮ್ಮ ಸೋದರಿ ಪ್ರಭಾವತಿ ಮತ್ತು ಅವರ ಪುತ್ರಿ ತನುಜಾ ಅವರೊಂದಿಗೆ ಬೆಟ್ಟಕ್ಕೆ ಬಂದಿದ್ದು, ದೇವರ ದರ್ಶನದ ಬಳಿಕ ವಾಪಸ್ ತೆರಳಲು ಬೆಟ್ಟದ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಬ್ಯಾಗಿನಲ್ಲಿದ್ದ ₹ 2 ಸಾವಿರ ಹಣ ಮತ್ತು ಮೊಬೈಲ್ ಕಳವಾಗಿರುವುದು ಕಂಡು ಬಂದಿದೆ. ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.