ADVERTISEMENT

ಮೈಸೂರಿನ ಅಂಬಾವಿಲಾಸ ಅರಮನೆಗೆ ವರ್ಷದಲ್ಲಿ 44,909 ‘ವಿದೇಶಿಯರು’

ಎಂ.ಮಹೇಶ
Published 9 ಮೇ 2025, 8:35 IST
Last Updated 9 ಮೇ 2025, 8:35 IST
ಮೈಸೂರು ಅರಮನೆ ವೀಕ್ಷಿಸಲು ಬಂದಿದ್ದ ಪ್ರವಾಸಿಗರು
ಮೈಸೂರು ಅರಮನೆ ವೀಕ್ಷಿಸಲು ಬಂದಿದ್ದ ಪ್ರವಾಸಿಗರು   

ಮೈಸೂರು: ಹೊಂಬಣ್ಣದಿಂದ ಕಂಗೊಳಿಸುವ ಹಾಗೂ ಆಕರ್ಷಕ ವಾಸ್ತುಶಿಲ್ಪದ ವೈಭವದಿಂದ ಕೂಡಿರುವ ಇಲ್ಲಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಕಣ್ತುಂಬಿಕೊಳ್ಳಲು ಹೋದ ವರ್ಷ ಏಪ್ರಿಲ್‌ನಿಂದ 12 ತಿಂಗಳಲ್ಲಿ 44,909 ಮಂದಿ ವಿದೇಶಿ ಪ್ರವಾಸಿಗರು ಭೇಟಿ ನೀಡಿರುವುದು ಗಮನಸೆಳೆದಿದೆ.

2024–25ನೇ ಸಾಲಿನಲ್ಲಿ ಒಟ್ಟು 39,35,108 ಸಂದರ್ಶಕರು ಭೇಟಿ ನೀಡಿದ್ದು, ಈ ತಾಣವು ಪ್ರವಾಸಿಗರ ಅಚ್ಚುಮೆಚ್ಚು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇಲ್ಲಿಗೆ ದಾಖಲೆಯ ಪ್ರವಾಸಿಗರು ಬರುತ್ತಿರುವುದು ಮುಂದುವರಿದಿದೆ. 2023–24ರಲ್ಲಿ 34,604 ಮಂದಿ ವಿದೇಶಿಯರು ಸೇರಿದಂತೆ 40,56,975 ಪ್ರವಾಸಿಗರು ಬಂದಿದ್ದುದು ದಶಕದಲ್ಲಿನ ಹೊಸ ‘ದಾಖಲೆ’ ಆಗಿತ್ತು.

2024–25ನೇ ಸಾಲಿನಲ್ಲಿ ‘ಬಂದವರ’ ಸಂಖ್ಯೆ ಕೊಂಚ ಕಡಿಮೆ ಆಗಿದೆಯಾದರೂ 39 ಲಕ್ಷದ ಗಡಿ ದಾಟಿರುವುದು ವಿಶೇಷ. ಜೊತೆಗೆ ದಶಕದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ 2ನೇ ಆರ್ಥಿಕ ವರ್ಷವೆಂಬುದೂ ದಾಖಲಾಗಿದೆ. ಕೋವಿಡ್–19 ಸಾಂಕ್ರಾಮಿಕ ಸೃಷ್ಟಿಸಿದ ಲಾಕ್‌ಡೌನ್‌, ಸಾವು–ನೋವು ಮೊದಲಾದ ಸಂಕಷ್ಟದ ನಂತರ ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿರುವುದಕ್ಕೆ ನಿದರ್ಶನ ಸಿಕ್ಕಂತಾಗಿದೆ.

ADVERTISEMENT

31 ಲಕ್ಷ ವಯಸ್ಕರು, 3.01 ಲಕ್ಷ ವಿದ್ಯಾರ್ಥಿಗಳು, 4.79 ಲಕ್ಷ ಮಕ್ಕಳು ಭೇಟಿ ನೀಡಿ ಅರಮನೆಯ ಸೊಬಗನ್ನು ಸವಿದಿದ್ದಾರೆ.

ಶುಲ್ಕ ಹೆಚ್ಚಳದ ನಡುವೆಯೂ..

ವಿದೇಶಿ ಪ್ರವಾಸಿಗರ ಭೇಟಿಯು ಇತ್ತೀಚಿನ ವರ್ಷಗಳಲ್ಲಿ ಸುಧಾರಣೆಯ ಹಳಿಗೆ ಮರಳಿರುವುದನ್ನು ಸಾಕ್ಷೀಕರಿಸಿದೆ. ಹೋದ ವರ್ಷ ನವೆಂಬರ್‌ನಿಂದ ವಿದೇಶಿ ಪ್ರವಾಸಿಗರಿಗೆ ಪ್ರವೇಶ ಶುಲ್ಕವನ್ನು 9 ಪಟ್ಟು ಅಂದರೆ ₹ 100ರಿಂದ ₹ 1000ಕ್ಕೆ ಏರಿಸಲಾಗಿತ್ತು. ಅದರಿಂದ ಆ ಸಂದರ್ಶಕರ ಭೇಟಿ ಪ್ರಮಾಣ ಇಳಿಕೆ ಆಗಬಹುದು ಎಂದು ಪ್ರವಾಸೋದ್ಯಮ, ಟೂರ್ಸ್‌ ಅಂಡ್‌ ಟ್ರಾವೆಲ್ಸ್‌ ಮೊದಲಾದ ಆತಿಥ್ಯವಲಯದವರು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಅದು ನಿಜವಾಗಲಿಲ್ಲ ಎಂಬುದನ್ನು ಅಂಕಿ–ಅಂಶಗಳು ಹೇಳುತ್ತಿವೆ. ಕೋವಿಡ್ ಸಂಕಷ್ಟಕ್ಕಿಂತ ಹಿಂದಿನ ವರ್ಷಗಳಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆಯು ಇನ್ನೂ ಹೆಚ್ಚಿನ ಪ್ರಮಾಣದಲ್ಲಿತ್ತು.

ಇಲ್ಲಿಗೆ ರಾಜ್ಯದೊಂದಿಗೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ದೇಶದ ವಿವಿಧೆಡೆಯವರ ಜೊತೆಗೆ ವಿದೇಶಿ ಪ್ರವಾಸಿಗರು ಕೂಡ ಬಹಳ ಆಸಕ್ತಿ ಹೊಂದಿರುವುದು ಕಂಡುಬರುತ್ತಿದೆ. ಅದರಲ್ಲೂ, ಬೇಸಿಗೆ ರಜೆ, ದಸರಾ ರಜೆ, ವರ್ಷಾಂತ್ಯದ ಹಾಗೂ ಸರಣಿ ರಜೆಗಳ ದಿನಗಳಲ್ಲಿ ಅರಮನೆಯು ‘ಪ್ರವಾಸಿಗರ ಜಂಗುಳಿ’ಗೆ ಸಾಕ್ಷಿಯಾಗುತ್ತಿದೆ.

ಧ್ವನಿ ಬೆಳಕು, ವಿದ್ಯುತ್‌ ದೀಪಾಲಂಕಾರ ಮೊದಲಾದವು ಪ್ರವಾಸಿಗರನ್ನು ಸೆಳೆಯುತ್ತಿವೆ. ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಳ್ಳುತ್ತಿರುವುದು ಹಾಗೂ ಪೋಸ್ಟ್‌ಗಳನ್ನು ಹಾಕುತ್ತಿರುವುದು ಪ್ರವಾಸಿಗರನ್ನು ಅರಮನೆಯತ್ತ ಆಕರ್ಷಿಸುತ್ತಿದೆ.

‘ಅರಮನೆ ವೀಕ್ಷಿಸಲು ಎಲ್ಲ ವರ್ಗದ ಜನರೂ ಬರುತ್ತಿದ್ದಾರೆ. ವಿದೇಶಿಯರ ಸಂಖ್ಯೆಯೂ ಜಾಸ್ತಿ ಇದೆ. ಅವರ ಅನುಕೂಲಕ್ಕೆಂದು ಎರಡು ಪ್ರವೇಶ ದ್ವಾರಗಳನ್ನು ಮಾಡಿದ್ದೇವೆ. ಕೌಂಟರ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ’ ಎಂದು ಅರಮನೆ ಮಂಡಳಿಯ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ನಾನು ಈಚೆಗೆ ಮೈಸೂರು ಅರಮನೆಗೆ ಭೇಟಿ ನೀಡಿದ್ದೆ. ಅಕ್ಷರಶಃ ಬಹಳ ಜನಸಂದಣಿ ಇತ್ತು. ಆದರೂ ಅಲ್ಲಿನ ಸೌಂದರ್ಯಕ್ಕೆ ಮಾರು ಹೋದೆ.
–ಪ್ರಣವ್ ಗುಪ್ತ, ಪ್ರವಾಸಿಗ ಪ್ರವಾಸಿಗ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.