ADVERTISEMENT

ಅಪಾಯ ಜಾಗೃತಿಗೆ ಸೊಳ್ಳೆ ಪ್ರತಿಕೃತಿ ಸ್ಥಾಪನೆ!

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 15:57 IST
Last Updated 20 ಆಗಸ್ಟ್ 2022, 15:57 IST
   

ಮೈಸೂರು: ಸೊಳ್ಳೆಗಳ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಇಲ್ಲಿನ ನಜರ್‌ಬಾದ್‌ನಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಕಚೇರಿ ಆವರಣದಲ್ಲಿ ಸೊಳ್ಳೆಯ ದೊಡ್ಡ ಪ್ರತಿಕೃತಿಯನ್ನು ಸ್ಥಾಪಿಸಲಾಗಿದೆ.

ಶನಿವಾರ ನಡೆದ ವಿಶ್ವ ಸೊಳ್ಳೆ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಕೃತಿಯನ್ನು ಡಿಎಚ್‌ಒ ಡಾ.ಕೆ.ಎಚ್.ಪ್ರಸಾದ್ ಅನಾವರಣಗೊಳಿಸಿದರು.

ಪ್ರತಿಕೃತಿ ಸಿದ್ಧಪಡಿಸುವ ಕಾರ್ಯವನ್ನು ಹೋದ ವರ್ಷದ ಸೆಪ್ಟೆಂಬರ್‌ನಲ್ಲಿ ಆರಂಭಿಸಲಾಗಿತ್ತು. ಜುಲೈನಲ್ಲಿ ಪೂರ್ಣಗೊಂಡಿದೆ. ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣಗಳ ಅಧಿಕಾರಿ ಡಾ.ಚಿದಂಬರ ಸ್ವಂತ ಹಣದಲ್ಲಿ ಇದನ್ನು ಸ್ಥಾಪಿಸಿದ್ದಾರೆ. ಪ್ರತಿಕೃತಿಗೆ ಬಿಸಿಲು, ಮಳೆ ಬೀಳದಂತೆ ಶೆಲ್ಟರ್‌ ಕೂಡ ನಿರ್ಮಿಸಲಾಗಿದೆ.

ADVERTISEMENT

ಈ ವೇಳೆ ಮಾತನಾಡಿದ ಕೆ.ಎಚ್.‍ಪ್ರಸಾದ್, ‘ನವೀನ ವಿಧಾನಗಳನ್ನು ಬಳಸೋಣ ಮಲೇರಿಯಾ ಕಡಿಮೆ ಮಾಡಿ ಜೀವ ಉಳಿಸೋಣ’, ‘ಡೆಂಗಿ ತಡೆಗಟ್ಟಬಹುದು ಬನ್ನಿ ಎಲ್ಲರೂ ಕೈಜೋಡಿಸೋಣ’ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಸೊಳ್ಳೆ ದಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಕೀಟ ಜನ್ಯ ರೋಗಗಳ ಬಗ್ಗೆ ಎಲ್ಲರೂ ಅರಿವು ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ಡಾ.ಕೆ.ಎಚ್.ಪ್ರಸಾದ್ ಮಾತನಾಡಿ, ‘ಮಾರಕ ಡೆಂಗಿ ಹರಡುವ ಸೊಳ್ಳೆ ಬಗ್ಗೆ ತಿಳಿವಳಿಕೆ ಬೆಳೆಸಿಕೊಳ್ಳಬೇಕು. ಅವುಗಳಿಂದ ರಕ್ಷಣಾ ಕ್ರಮಗಳನ್ನು ಅನುಸರಿಸಬೇಕು’ ಎಂದು ಸಲಹೆ ನೀಡಿದರು.

‘ಹೂಕುಂಡಗಳ ಕೆಳಗೆ ತಟ್ಟೆ ಇಡಬಾರದು. ಸಿಂಗಲ್‌ ಡೋರ್ ರೆಫ್ರಿಜರೇಟರ್‌ ಹಿಂಭಾಗದಲ್ಲಿ ಸಂಗ್ರಹವಾಗುವ ನೀರನ್ನು ಆಗಾಗ ಹೊರಚೆಲ್ಲಬೇಕು. ಇದರಿಂದ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಬಹದು. ಇಲಾಖೆಯ ಸಿಬ್ಬಂದಿಯು, ಈ ಬಗ್ಗೆ ಹೆಚ್ಚಿನ ಒತ್ತು ಕೊಟ್ಟು ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

‘ಸೊಳ್ಳೆಯನ್ನು ಭೂಮಿ ಮೇಲಿರುವ ಮಾರಣಾಂತಿಕ ಕೀಟ ಎಂದು ಕರೆಯಲಾಗುತ್ತದೆ. ಪ್ರಾಣಿ–ಪಕ್ಷಿ ಸಂಕುಲ ನಶಿಸಿದರೂ ಸೊಳ್ಳೆ ಸಂತತಿಗಳು ಹೆಚ್ಚಾಗುತ್ತಲೇ ಇವೆ. ನೂರಕ್ಕೂ ಹೆಚ್ಚಿನ ಸೊಳ್ಳೆಗಳು ಜನರಿಗೆ ವಿವಿಧ ಕಾಯಿಲೆ ಹರಡಿಸುವಂಥವೇ ಆಗಿವೆ. ಅವುಗಳು ಯಾವ್ಯಾವ ಪ್ರಾಣಿಗಳಿಗೆ ತೊಂದರೆ ಕೊಡುತ್ತವೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ. ಹೀಗಾಗಿ, ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ’ ಎಂದು ಚಿದಂಬರ ಮಾಹಿತಿ ನೀಡಿದರು.

‘ಮನುಷ್ಯರು ವಾಸಿಸುವ ಜಾಗದಲ್ಲಿ ಸೊಳ್ಳೆಗಳು ಇರಬಾರದು. ಅವುಗಳ ಉತ್ಪತ್ತಿ ಆಗದಂತೆ ನೋಡಿಕೊಳ್ಳಬೇಕು. ಅವುಗಳು ಕಚ್ಚದಂತೆ ಸ್ವಯಂ ರಕ್ಷಣಾ ವಿಧಾನ ಅನುಸರಿಸಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಇಲಾಖೆ ಹಾಗೂ ಇತರ ಇಲಾಖೆಯವರೂ ಕೈಜೋಡಿಸಬೇಕು ಎಂದು ತಿಳಿಸುವ ಉದ್ದೇಶ ಹೊಂದಲಾಗಿದೆ. ವಿವಿಧ ಆಯಾಮಗಳಲ್ಲಿ ಸಂಶೋಧನೆಯೂ ನಡೆಯುತ್ತಿದೆ’ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಹದೇವ ಪ್ರಸಾದ್, ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಪ್ರಸಾದ್ ಇಧ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.