ಮೊತ್ತ ಗ್ರಾಮ ಮತ್ತು ನಲ್ಲಿತಾಳಪುರ ಪಂಚಾಯ್ತಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡವಾಗಿರುವ ಹಳ್ಳವನ್ನು ತೋರಿಸಿದ ಗ್ರಾಮಸ್ಥರು
ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿಯ ‘ಮೊತ್ತ’ ಗ್ರಾಮದ ನಿವಾಸಿಗಳನ್ನು ಹಲವು ವರ್ಷಗಳಿಂದ ‘ಹಳ್ಳ’ವೊಂದು ಕಾಡುತ್ತಿದೆ.
ನಲ್ಲಿತಾಳಪುರ ಪಂಚಾಯ್ತಿ ಮತ್ತು ಈ ಗ್ರಾಮದ ನಡುವೆ ಇರುವ ಹಳ್ಳದಿಂದಾಗಿ ಗ್ರಾಮಸ್ಥರು ಪಂಚಾಯ್ತಿ ಕೇಂದ್ರ, ನ್ಯಾಯಬೆಲೆ ಅಂಗಡಿ, ಬ್ಯಾಂಕ್, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆಗೆ ಸುತ್ತಿಬಳಸಿ ತೆರಳಬೇಕಾಗಿದೆ. ಸಂಪರ್ಕ ಕಲ್ಪಿಸುವ ಕಿರು ಸೇತುವೆಯ ಕನಸು ಇನ್ನೂ ಈಡೇರಿಲ್ಲ.
ಸಮರ್ಪಕ ಬಸ್ ಸೌಕರ್ಯವೂ ಇಲ್ಲದಿರುವುದು ಸಮಸ್ಯೆ ಬಿಗಡಾಯಿಸು ವಂತೆ ಮಾಡಿದೆ. ಚಿರತೆ, ಆನೆಗಳ ಕಾಟದ ನಡುವೆಯೇ ಜನ ಬೈಕ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ವಾಹನಗಳಿಲ್ಲದವರಿಗೆ ನಡಿಗೆ ಅನಿವಾರ್ಯ.
‘ಹಳ್ಳದ ಮೇಲೆ ಕಿರುಸೇತುವೆ ನಿರ್ಮಿಸಿದರೆ, ಸುತ್ತಿಬಳಸಿ ಸಂಚರಿಸುವ ಕಷ್ಟ ತಪ್ಪುತ್ತದೆ. ಅಪಾಯವೂ ಕಡಿಮೆಯಾಗುತ್ತದೆ’ ಎಂಬುದು ಗ್ರಾಮಸ್ಥರ ಅಳಲು. ಕೃಷಿ ಕೂಲಿಕಾರರೇ ಇಲ್ಲಿ ಹೆಚ್ಚಿದ್ದು, ಸುತ್ತಮುತ್ತಲಿನ ಗ್ರಾಮಗಳಿಗೆ ಕೆಲಸಕ್ಕೆ ನಡೆದೇ ಹೋಗುತ್ತಾರೆ. ತಾಲ್ಲೂಕು ಕೇಂದ್ರ 25 ಕಿಮೀ ದೂರದಲ್ಲಿದೆ.
ಗ್ರಾಮದಲ್ಲಿ ಅಂಗನವಾಡಿ, ಕಿರಿಯ ಪ್ರಾಥಮಿಕ ಶಾಲೆ ಇದ್ದು, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಾಗಿ ಮಾದನಹಳ್ಳಿಗೆ ಹೋಗಬೇಕು. ಕಾಲೇಜು ಶಿಕ್ಷಣ ಪಡೆಯಲು ಹುಲ್ಲಹಳ್ಳಿ ಹೋಬಳಿ ಕೇಂದ್ರ ಅಥವಾ ತಾಲ್ಲೂಕು ಕೇಂದ್ರಕ್ಕೆ ಹೋಗಬೇಕು. ರಾಜ್ಯ ಸಾರಿಗೆ ಬಸ್ ಬೆಳಿಗ್ಗೆ 9.30ಕ್ಕೆ ಹಾಗೂ ಸಂಜೆ 5.15ಕ್ಕೆ ಬರುತ್ತದೆ.
‘ತುರ್ತು ಪರಿಸ್ಥಿತಿಗಳು ಏರ್ಪಟ್ಟರೆ ವಾಹನ ಸೌಕರ್ಯವಿಲ್ಲ. ಆಟೋರಿಕ್ಷಾ ಬೇಕೆಂದರೆ ಒಂದೂವರೆ ಕಿಮೀ ದೂರದ ಸಂಗಮದ ಗೇಟ್‌ಗೆ ಹೋಗಬೇಕು. ಬಸ್‌ಗಳು ಅಲ್ಲಿಗೇ ಬರುವುದರಿಂದ ಸಂಜೆಗತ್ತಲಲ್ಲಿ ನಡೆದು ಬರಬೇಕು’ ಎನ್ನುತ್ತಾರೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜು.
ಗ್ರಾಮಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಗ್ರಾಮಸ್ಥರು, ’ಹಳ್ಳಕ್ಕೆ ಸೇತುವೆ ನಿರ್ಮಿಸಿದರೆ ಒಂದೂವರೆ ಕಿಮೀ ಅಂತರದಲ್ಲಿ ಎಲ್ಲ ಸೌಲಭ್ಯಗಳು ಸಿಗುತ್ತವೆ. ಈಗ ಅವುಗಳನ್ನು ಪಡೆಯಲು 5 ಕಿಮೀ ಸುತ್ತಿ ಬಳಸಿ ಹೋಗಬೇಕು’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
‘ಮೈಸೂರು– ಹಂಪಾಪುರ ನಡುವೆ ಸಂಚರಿಸುವ ಬಸ್ ಬೆಳಿಗ್ಗೆ, ಸಂಜೆ ಮಾತ್ರ ಗ್ರಾಮಕ್ಕೆ ಬರುತ್ತದೆ. ಕನಿಷ್ಠ ನಾಲ್ಕು ಬಾರಿಯಾದರೂ ಸಂಚರಿಸಬೇಕು’ ಎಂಬುದು ಅವರ ಮನವಿ.
‘ಕಿರುಸೇತುವೆ ನಿರ್ಮಿಸಲು ನರೇಗಾ ಅಡಿ ಕ್ರಿಯಾಯೋಜನೆ ಸಲ್ಲಿಸಲಾಗಿತ್ತು. ಆದರೆ ಜಿಲ್ಲಾ ಪಂಚಾಯ್ತಿಯಿಂದ ಅನುಮೋದನೆ ದೊರಕಲಿಲ್ಲ. ಮತ್ತೊಮ್ಮೆ ಸಲ್ಲಿಸಲಾಗುವುದು’ ಎಂದು ಪಿಡಿಓ ಶ್ವೇತಾ ತಿಳಿಸಿದರು.
‘ಎರಡು ವರ್ಷದ ಹಿಂದೆಯೇ ಮನವಿ’
‘ಸೇತುವೆ ನಿರ್ಮಿಸಿಕೊಡಬೇಕೆಂದು ಕೋರಿ ಶಾಸಕ ದರ್ಶನ್ ಧ್ರುವನಾರಾಯಣ ಅವರಿಗೆ ಎರಡು ವರ್ಷದ ಹಿಂದೆ ಜನಸಂಪರ್ಕ ಸಭೆಯಲ್ಲಿ ಮನವಿ ಪತ್ರ ಸಲ್ಲಿಸಲಾಗಿತ್ತು. ಚಂದ್ರವಾಡಿಯಲ್ಲಿ ನಡೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು ಭರವಸೆ ನೀಡಿದ್ದರು. ಆದರೆ ಇನ್ನೂ ಈಡೇರಿಲ್ಲ.ಇನ್ನಾದರೂ ಶಾಸಕರು ಗಮನ ಹರಿಸಬೇಕು’ ಎಂದು ಗ್ರಾಮಸ್ಥರಾದ ಚಿಕ್ಕತಾಯಮ್ಮ, ಬೀರೇಗೌಡ, ಮುದ್ದಮ್ಮ ಹಾಗೂ ಪದ್ಮಮ್ಮ, ಜಗದೀಶ್ ತಿಳಿಸಿದರು.
ಕಿರುಸೇತುವೆಗೆ ಆದ್ಯತೆ ‘ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ₹ 50 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಕ್ಕೆ ಕ್ರಿಯಾಯೋಜನೆ ರೂಪಿಸಿದ್ದು, ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆಯನ್ನು ಕಳಿಸಲಾಗುತ್ತಿದೆ. ಇಲಾಖೆಯ ಸಚಿವರ ಗಮನಕ್ಕೂ ತರಲಾಗಿದೆ. ಮೊತ್ತ ಗ್ರಾಮಕ್ಕೆ ಕಿರುಸೇತುವೆ ನಿರ್ಮಿಸುವುದನ್ನೂ ಅದರಲ್ಲಿ ಸೇರಿಸಲಾಗುವುದು. ಮತ್ತೊಮ್ಮೆ ಆ ಬಗ್ಗೆ ಗಮನ ಹರಿಸುವೆ’ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.