ADVERTISEMENT

ಮೈಸೂರು: ಶ್ರೀನಿವಾಸ ಪ್ರಸಾದ್‌ 'ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ’ ಮಾ.17ಕ್ಕೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 9:45 IST
Last Updated 29 ಫೆಬ್ರುವರಿ 2024, 9:45 IST
ಶ್ರೀನಿವಾಸ ಪ್ರಸಾದ್‌
ಶ್ರೀನಿವಾಸ ಪ್ರಸಾದ್‌   

ಮೈಸೂರು: ಚಾಮರಾಜನಗರದ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ‘ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ’ ಮತ್ತು ಅಭಿನಂದನಾ ಸಮಾರಂಭವನ್ನು ಮಾರ್ಚ್‌ 17ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಆಯೋಜಿಸಲಾಗಿದೆ.

‘ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಾಹಿತಿ ಪ್ರಧಾನ ಗುರುದತ್ತ ಸಂಪಾದಕತ್ವದ ‘ಸ್ವಾಭಿಮಾನಿ ನೆನಪುಗಳು’ ಅಭಿನಂದನಾ ಗ್ರಂಥವನ್ನು ಸಾಹಿತಿ ಚಂದ್ರಶೇಖರ ಕಂಬಾರ ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಅಭಿನಂದನಾ ಸಮಿತಿ ಅಧ್ಯಕ್ಷ ಪಿ.ಜಿ.ಆರ್. ಸಿಂಧ್ಯಾ ಪಾಲ್ಗೊಳ್ಳಲಿದ್ದಾರೆ’ ಎಂದು ಶ್ರೀನಿವಾಸ ಪ್ರಸಾದ್‌ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

‘1974ರ ಮಾರ್ಚ್ 17ರಂದು ಮೈಸೂರಿನ ಕೃಷ್ಣರಾಜ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದರೊಂದಿಗೆ ಚುನಾವಣಾ ರಾಜಕಾರಣ ಆರಂಭಿಸಿದೆ. ಈ ಸವಿನೆನಪಿಗಾಗಿ ಅಭಿಮಾನಿಗಳು ಸಮಾರಂಭ ಆಯೋಜಿಸಿದ್ದಾರೆ. ಅಂದು, ಚುನಾವಣೆ ‌ನಿವೃತ್ತಿ ಘೋಷಣೆ ಮಾಡಲಿದ್ದೇನೆ. ಬಳಿಕ ಯಾವುದೇ ರಾಜಕೀಯ ಪಕ್ಷದ ಜೊತೆ ಮುಂದುವರಿಯುವುದಿಲ್ಲ; ಸ್ಪರ್ಧಿಸುವುದಿಲ್ಲ’ ಎಂದು ಹೇಳಿದರು. ‘ಬಿಜೆಪಿ ಬೆಂಬಲಿಸುವಂತೆ ಕೇಳಿಕೊಳ್ಳುತ್ತೇನೆಯೇ ಹೊರತು, ಬಹಿರಂಗ ಚುನಾವಣಾ ಪ್ರಚಾರಕ್ಕೆ ಹೋಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಅನುಭವ ಪುಸ್ತಕದಲ್ಲಿ ದಾಖಲು:

‘ಏಳು ಮಂದಿ ಪ್ರಧಾನಿಗಳ ಜೊತೆ ಕೆಲಸ ಮಾಡಿದ್ದೇನೆ. ನನ್ನ ಅನುಭವಗಳ ಮತ್ತೊಂದು ಪುಸ್ತಕದಲ್ಲಿ ಬರೆಯುತ್ತಿದ್ದೇನೆ. ಲೋಕಸಭೆ ಚುನಾವಣೆ ಮುಗಿದ ನಂತರ, ಸಂಸತ್ತಿನಲ್ಲಿ ಮಾತನಾಡಿದ ಬಗ್ಗೆಯೂ ಪುಸ್ತಕ ಹೊರತರಲಿದ್ದೇನೆ. ಅಭಿನಂದನಾ ಗ್ರಂಥದಲ್ಲಿ ನನ್ನ ಲೇಖನವೂ ಇದೆ’ ಎಂದು ತಿಳಿಸಿದರು.

‘ರಾಜಕಾರಣದಲ್ಲಿ ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಮತ್ತು ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿದ ಆತ್ಮತೃಪ್ತಿ ನನಗಿದೆ. ಸಾರ್ಥಕವಾದ ಹೋರಾಟ ಮಾಡಿದ್ದೇನೆ. ಪಟ್ಟಭದ್ರ ಹಿತಾಸಕ್ತಿಗಳು ನೀಡಿದ್ದ ತೊಂದರೆಗಳನ್ನೆಲ್ಲಾ ಎದುರಿಸಿದೆ. ಇದೆಲ್ಲವನ್ನೂ ಪುಸ್ತಕದಲ್ಲಿ ದಾಖಲಿಸಲಿದ್ದೇನೆ’ ಎಂದರು.

‘ನನಗೀಗ 77 ವರ್ಷ ವಯಸ್ಸಾಗಿದೆ. ಸಾಕಷ್ಟು ಜರ್ಜರಿತನಾಗಿದ್ದೇನೆ. ಹಲವು ಏಳುಬೀಳುಗಳನ್ನು ಕಂಡಿದ್ದೇನೆ. ಆರೋಗ್ಯವೂ ಸರಿ ಇಲ್ಲವಾದ್ದರಿಂದ ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದೇನೆ’ ಎಂದು ತಿಳಿಸಿದರು.

‘ರಾಜಕೀಯವಾಗಿ ತೀರ್ಮಾನ ಕೈಗೊಂಡಾಗ, ಆ ಪಕ್ಷಕ್ಕೆ ಆಸ್ತಿಯಾಗಿದ್ದೇನೆಯೇ ಹೊರತು ಹೊರೆಯಾಗಲಿಲ್ಲ. ಆ ತೃಪ್ತಿ ನನಗಿದೆ’ ಎಂದು ಹೇಳಿದರು.

‘ಇಂಥವರಿಗೆ ಟಿಕೆಟ್‌ ಕೊಡಿ ಎನ್ನುವುದಿಲ್ಲ’

‘ನನ್ನಂತಹ ಅನುಭವ ಇರುವವನು, ಇಂಥವರಿಗೆ ಟಿಕೆಟ್ ಕೊಡಿ ಎಂದು ಕೇಳುವುದು ಸರಿಯಲ್ಲ. ನನ್ನ ಅಳಿಯಂದಿರು ಕೂಡ ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ. ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಸರ್ವೇ ಮಾಡಿ ನಿರ್ಧರಿಸುತ್ತಾರೆ. ಮಾರ್ಚ್ ಮೊದಲ ವಾರ ಟಿಕೆಟ್ ಘೋಷಣೆ ಆಗುವ ಸಾಧ್ಯತೆ ಇದೆ. ಮೈಸೂರು–ಕೊಡಗು ಕ್ಷೇತ್ರದಿಂದ ನಾನೇ ಅಭ್ಯರ್ಥಿ ಎಂದು ಪ್ರತಾಪ ಸಿಂಹ ಅವರೇ ಸ್ಪಷ್ಟವಾಗಿ ಹೇಳಿದ್ದಾರಲ್ಲೇ?’ ಎಂದು ಪ್ರತಿಕ್ರಿಯಿಸಿದರು.

‘ನಮ್ಮ ಕುಟುಂಬದವರಿಗೆ ಟಿಕೆಟ್ ಕೊಡದಿದ್ದರೆ ಬೇಸರವೇನೂ ಆಗುವುದಿಲ್ಲ. ಹೈಕಮಾಂಡ್ ತೀರ್ಮಾನವನ್ನು ಸಂತೋಷದಿಂದ ಸ್ವಾಗತಿಸುತ್ತೇನೆ’ ಎಂದರು.

‘ಬಿಜೆಪಿ ಪರವಾದ ವಾತಾವರಣ’

‘ದೇಶದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ಇದನ್ನು ರಾಜಕೀಯ ತಂತ್ರಗಾರಿಕೆ ರೂಪಿಸುವವರೂ ಹೇಳಿದ್ದಾರೆ. ಕಾಂಗ್ರೆಸ್ ಇಷ್ಟು ದುಃಸ್ಥಿತಿಗೆ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಇದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ. ಅಲ್ಲಿ ನಾಯಕರ ಕೊರತೆಯೂ ಇದೆ. ಇದ್ದ ನಾಯಕರನ್ನು ಕೆಟ್ಟದಾಗಿ ನಡೆಸಿ ಪಕ್ಷ ತೊರೆಯುವಂತೆ ಮಾಡಿದರು. ಈ ನಡುವೆ ಬಿಜೆಪಿಯು ಶ್ರೀರಾಮಮಂದಿರ ಮೊದಲಾದ ವಿಷಯಗಳನ್ನು ಇಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ ಬೆಳೆಯಿತು’ ಎಂದು ಹೇಳಿದರು.

‘ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸವಿದೆ. ಬಿಜೆಪಿಗೆ ಮತ ಹಾಕಬೇಕು ಎಂದು ಬಯಸುತ್ತಿದ್ದಾರೆ’ ಎಂದರು.

ಖರ್ಗೆ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

‘ರಾಜ್ಯ ಸರ್ಕಾರದಿಂದ ನಡೆಯುತ್ತಿರುವುದು ಅಂಬೇಡ್ಕರ್ ಸಂವಿಧಾನ ಜಾಗೃತಿ ಜಾಥಾ ಅಲ್ಲ. ಅದು, ಕಾಂಗ್ರೆಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರ ಸಂವಿಧಾನ ಜಾಥಾ ಆಗಿದೆ. ಅಂಬೇಡ್ಕರ್ ಸಂವಿಧಾನ ಚೆನ್ನಾಗಿಯೇ ಇದೆ. ಇವರು ಗ್ಯಾರಂಟಿಗಳನ್ನು ಪ್ರಚಾರ ಮಾಡುತ್ತಿದ್ದಾರಷ್ಟೆ’ ಎಂದು ಟೀಕಿಸಿದರು.

‘ನಮ್ಮ ಸಂವಿಧಾನ ಗಟ್ಟಿಯಾಗಿದೆ. ಯಾರೂ ಅಲುಗಾಡಿಸಲು ಆಗುವುದಿಲ್ಲ. ಸಂವಿಧಾನಕ್ಕೆ ಧಕ್ಕೆಯಾದರೆ ರಾಜಕೀಯದಲ್ಲಿ ಇರುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹೇಳಲಿ ನೋಡೋಣ’ ಎಂದು ಸವಾಲು ಹಾಕಿದರು.

‘ಅವರೆಲ್ಲರೂ ಅಧಿಕಾರಕ್ಕೆ ಅಂಟಿಕೊಂಡು ‌ಕುಳಿತಿರುವವರು. ಖರ್ಗೆ ಮುರುಕಲು ಕುರ್ಚಿ ಅಧ್ಯಕ್ಷ. ಚುನಾವಣೆಗಾಗಿ ಸ್ಟಂಟ್‌ಗಳನ್ನು ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಎನ್‌ಡಿಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಈ ಮಾತನ್ನು ಐಎನ್‌ಡಿಐಎ ಮೈತ್ರಿಕೂಟದ ನಾಯಕರೇ ಹೇಳುತ್ತಿದ್ದಾರೆ. ನಾನು 25 ವರ್ಷ ಕಾಂಗ್ರೆಸ್‌ನಲ್ಲಿದ್ದವನು. ತುರ್ತು ಪರಿಸ್ಥಿತಿ ಬಳಿಕ ಕಾಂಗ್ರೆಸ್‌ಗೆ ಪರ್ಯಾಯವಾಗಿ ಜನತಾ ಪಕ್ಷ ಉದಯವಾದರೂ ಅದು ಬೆಳೆಯಲಿಲ್ಲ. ಆದರೀಗ ಬಿಜೆಪಿ ದೊಡ್ಡ ಪಕ್ಷವಾಗಿ ಬೆಳೆದಿದೆ’ ಎಂದರು.

‘ಸಂವಿಧಾನ ಆಪತ್ತಿನಲ್ಲಿಲ್ಲ. ಬದಲಿಗೆ, ಕಾಂಗ್ರೆಸ್‌ ಪಕ್ಷವೇ ಆಪತ್ತಿನಲ್ಲಿದೆ. ಕೇವಲ ಮತಕ್ಕಾಗಿ, ಆಪತ್ತಿ‌ನಲ್ಲಿದೆ ಎಂದು ಗಿಮಿಕ್ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ಆಪತ್ತು ಎದುರಾದರೆ ನಾವೆಲ್ಲರೂ ಸುಮ್ಮನಿರುತ್ತೇವೆಯೇ?’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.