ಮೈಸೂರು: ‘ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಒಂದು ತಿಂಗಳಿಂದ ವಿವಿಧ ಸೇವೆಗಳಲ್ಲಿ ವ್ಯತ್ಯಯವಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ದೈನಂದಿನ ಕೆಲಸಗಳನ್ನು ಎಂದಿನಂತೆ ನಿರ್ವಹಿಸಲು ಅನುಮತಿ ನೀಡಬೇಕು’ ಎಂದು ಕೋರಿ ಆಯುಕ್ತರು ಬುಧವಾರ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದಾರೆ.
ಮುಡಾ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿಬಂದಿದ್ದರಿಂದ, ಮುಡಾದ ಎಲ್ಲ ವ್ಯವಹಾರಗಳನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸುವಂತೆ ಸರ್ಕಾರ ಜುಲೈ 2ರಂದು ಸೂಚನೆ ನೀಡಿತ್ತು. ಪ್ರಮುಖ ನಿರ್ಣಯಗಳನ್ನು ಕೈಗೊಳ್ಳದಂತೆ ಆದೇಶಿಸಿತ್ತು. ನಂತರದಲ್ಲಿ ತನಿಖಾ ಆಯೋಗವು ಭೇಟಿ ನೀಡಿದ್ದು, ದಾಖಲೆಗಳ ಕೊಠಡಿಯನ್ನು ಸೀಜ್ ಮಾಡಿತ್ತು.
ಅಂದಿನಿಂದ ಮುಡಾದಲ್ಲಿ ಖಾತೆ, ಎನ್‌ಒಸಿ, ಖಾಸಗಿ ಬಡಾವಣೆಗಳ ನಕ್ಷೆ ಅನುಮೋದನೆ, ಪೌತಿ ಖಾತೆ ವರ್ಗಾವಣೆ, ಕ್ರಯಪತ್ರ ಸೇರಿದಂತೆ ಬಹುತೇಕ ಸೇವೆಗಳು ಸ್ಥಗಿತಗೊಂಡಿವೆ. ಸಾರ್ವಜನಿಕರು ಕಚೇರಿಗೆ ಅಲೆಯುವುದು ಸಾಮಾನ್ಯವಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿಗೂ ಜುಲೈ ತಿಂಗಳ ವೇತನ ಪಾವತಿಗೆ ಸಹ ಅಡ್ಡಿಯಾಗಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ನಗರ ಯೋಜನಾ ಮತ್ತು ಗ್ರಾಮಾಂತರ ಯೋಜನಾ ಆಯುಕ್ತರಿಗೆ ಪತ್ರ ಬರೆದಿರುವ ಆಯುಕ್ತ ರಘುನಂದನ್, ‘ ನೌಕರರ ವೇತನ ಪಾವತಿ, ನ್ಯಾಯಾಲಯದ ಆದೇಶಗಳ ಪಾಲನೆ, ಖಾಸಗಿ ಬಡಾವಣೆಗಳಿಗೆ ಸಂಬಂಧಿಸಿದ ಖಾತೆ, ಎನ್‌ಒಸಿ, ಕಂದಾಯ ಸೇವೆಗಳು, ಕಟ್ಟಡ ನಕ್ಷೆಗಳ ಅನುಮೋದನೆ, ಪ್ರಾಧಿಕಾರ ವ್ಯಾಪ್ತಿಯ ಬಡಾವಣೆಗಳಲ್ಲಿ ಮೂಲ ಸೌಕರ್ಯ ಹಾಗೂ ಸ್ವಚ್ಛತೆ, ಟೆಂಡರ್ ಪ್ರಕ್ರಿಯೆಗಳನ್ನು ನಡೆಸಲು ಅನುವು ಮಾಡಿಕೊಡಬೇಕು’ ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.