ADVERTISEMENT

ಕಬಿನಿಯಿಂದ ಹೆಚ್ಚುವರಿ ನೀರು ಪಡೆಯಲು ಒಪ್ಪಿಗೆ

700 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಬಡಾವಣೆ ನಿರ್ಮಿಸುವ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 4:52 IST
Last Updated 18 ಜುಲೈ 2021, 4:52 IST
ಮೈಸೂರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿ.ಟಿ.ದೇವೇಗೌಡ, ಮರಿತಿಬ್ಬೇಗೌಡ, ತನ್ವೀರ್‌ಸೇಠ್, ಎಲ್.ನಾಗೇಂದ್ರ, ಎಚ್.ವಿ.ರಾಜೀವ್, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಪ್ರತಾಪಸಿಂಹ, ಬಗಾದಿ ಗೌತಮ್, ನಟೇಶ್, ಲಕ್ಷ್ಮಿಕಾಂತ ರೆಡ್ಡಿ ಭಾಗವಹಿಸಿದ್ದರು
ಮೈಸೂರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿ.ಟಿ.ದೇವೇಗೌಡ, ಮರಿತಿಬ್ಬೇಗೌಡ, ತನ್ವೀರ್‌ಸೇಠ್, ಎಲ್.ನಾಗೇಂದ್ರ, ಎಚ್.ವಿ.ರಾಜೀವ್, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಪ್ರತಾಪಸಿಂಹ, ಬಗಾದಿ ಗೌತಮ್, ನಟೇಶ್, ಲಕ್ಷ್ಮಿಕಾಂತ ರೆಡ್ಡಿ ಭಾಗವಹಿಸಿದ್ದರು   

ಮೈಸೂರು: ಕಬಿನಿಯಿಂದ ಪ್ರಸ್ತುತ 6 ಕೋಟಿ ಲೀಟರ್‌ ನೀರನ್ನು ಮಾತ್ರ ಪಡೆದುಕೊಳ್ಳಲಾಗುತ್ತಿದೆ. ಇನ್ನೂ 9 ಕೋಟಿ ಲೀ. ನೀರು ಪಡೆದುಕೊಳ್ಳಲು ಅವಕಾಶವಿದ್ದು, ಇದಕ್ಕಾಗಿ ₹95 ಕೋಟಿ ವೆಚ್ಚದ ಯೋಜನೆ ಜಾರಿಗೆ ಶನಿವಾರ ಇಲ್ಲಿ ನಡೆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯು ಸರ್ವಾನುಮತದಿಂದ ತೀರ್ಮಾನಿಸಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ‘ಬಿದರಹಳ್ಳಿಯಿಂದ ನೀರು ಪಡೆಯಲು ಹಾಕಿರುವ ಪೈಪ್‌ಗಳ ಸಾಮರ್ಥ್ಯ 15 ಕೋಟಿ ಲೀಟರ್‌ನಷ್ಟಿದೆ. ಆದರೆ, ಸದ್ಯ 6 ಕೋಟಿ ಲೀಟರ್‌ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದನ್ನು ಅಭಿವೃದ್ಧಿಪಡಿಸುವುದರಿಂದ ನಗರದ ಕುಡಿಯುವ ನೀರಿನ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ’ ಎಂದರು.

‘ಇಲವಾಲ ಹೋಬಳಿಯ ಕಮರಹಳ್ಳಿ ಭಾಗದಲ್ಲಿ ರೈತರ ಸಹಕಾರ ಪಡೆದು 50:50ರ ಅನುಪಾತದಲ್ಲಿ 700 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಬಡಾವಣೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ 374 ಎಕರೆಯ ಭೂಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಹೇಳಿದರು.

ADVERTISEMENT

‘ಗುಂಪು ವಸತಿ ಯೋಜನೆಯಡಿ 1,980 ಮನೆಗಳ ನಿರ್ಮಾಣಕ್ಕೂ ಅನುಮೋದನೆ ನೀಡಲಾಗಿದೆ. ಇದರಿಂದ ಬಡವರಿಗೆ ಹಾಗೂ ಮಧ್ಯಮವರ್ಗದವರಿಗೆ ಸೂರು ಕೈಗೆಟುಕಲಿದೆ’ ಎಂದು ತಿಳಿಸಿದರು.

‘ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪ ಯಾವುದಾದರೂ ಅಧಿಕಾರಿಗಳ ವಿರುದ್ಧ ಕೇಳಿ ಬಂದರೆ, ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಮರಿತಿಬ್ಬೇಗೌಡ, ತನ್ವೀರ್‌ಸೇಠ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ಪ್ರಾಧಿಕಾರದ ಆಯುಕ್ತ ನಟೇಶ್, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.