ADVERTISEMENT

ಮುಡಾ ಹಗರಣ: ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಕುರುಬೂರು ಶಾಂತಕುಮಾರ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 8:10 IST
Last Updated 15 ಜುಲೈ 2024, 8:10 IST
<div class="paragraphs"><p>ಸಂಪಾದಕೀಯ: ಮುಡಾ ನಿವೇಶನ ಹಗರಣ– ನಿಷ್ಪಕ್ಷಪಾತ ತನಿಖೆ ಅಗತ್ಯ</p></div>

ಸಂಪಾದಕೀಯ: ಮುಡಾ ನಿವೇಶನ ಹಗರಣ– ನಿಷ್ಪಕ್ಷಪಾತ ತನಿಖೆ ಅಗತ್ಯ

   

ಮೈಸೂರು: ‘ಇಲ್ಲಿನ ಮುಡಾದಿಂದ ನಿವೇಶನ ಹಂಚಿಕೆಯಲ್ಲಿ ಆಗಿರುವ ಹಗರಣವನ್ನು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಒತ್ತಾಯಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಮುಡಾ ಹಗರಣದಲ್ಲಿ ಎಲ್ಲ ಪಕ್ಷಗಳ ಪ್ರಭಾವಿ ಮುಖಂಡರು ಭಾಗಿಯಾಗಿದ್ದಾರೆ. ₹4ಸಾವಿರ ಕೋಟಿಯ ಹಗರಣವಿದು ಎನ್ನಲಾಗುತ್ತಿದೆ. ಆದ್ದರಿಂದ, ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಒಕ್ಕೂಟದಿಂದ ರಾಜ್ಯಪಾಲರನ್ನು ಜುಲೈ 6ರಂದು ಭೇಟಿಯಾಗಿ ಒತ್ತಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ನಿರ್ದೇಶನದಂತೆ ನಿವೃತ ನ್ಯಾಯಾಧೀಶ ಪಿ.ಎನ್. ದೇಸಾಯಿ ನೇತೃತ್ವದಲ್ಲಿ ತನಿಖೆಗೆ ಸರ್ಕಾರ ಆದೇಶಿಸಿದೆ’ ಎಂದರು.

ADVERTISEMENT

‘ಈ ಹಗರಣದಲ್ಲಿ ಪ್ರಭಾವಿಗಳು ಹಾಗೂ ಜನಪ್ರತಿನಿಧಿಗಳು ಪಾಲುದಾರರಾಗಿರುವ ಆರೋಪ ಇರುವುದರಿಂದಾಗಿ ಹಾಲಿ ನ್ಯಾಯಾಧೀಶರಿಂದಲೇ ತನಿಖೆ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ದೆಹಲಿ ರೈತ ಹೋರಾಟದ ಮುಂದಿನ ಯೋಜನೆ ಬಗ್ಗೆ ಜುಲೈ 22ರಂದು ನವದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯಿಂದ ರಾಷ್ಟ್ರೀಯ ರೈತ ಮುಖಂಡರ ಸಮಾವೇಶ ನಡೆಸಲಾಗುವುದು’ ಎಂದು ತಿಳಿಸಿದರು.

ಕೂಡಲೇ ವಾಪಸ್ ಪಡೆಯಬೇಕು: ‘ಕೇಂದ್ರ ಸರ್ಕಾರವು ಅಕ್ಕಿ ರಫ್ತು ನಿಷೇಧಿಸಿರುವುದನ್ನು ತಕ್ಷಣ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಭತ್ತದ ಬೆಲೆ ಕುಸಿತವಾಗುವ ಆತಂಕ ಆಂಧ್ರ, ತೆಲಂಗಾಣ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳ ಭತ್ತ ಬೆಳೆಗಾರರದ್ದಾಗಿದೆ. ಈ ಬಗ್ಗೆ ಜುಲೈ 22ರಂದು ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು’ ಎಂದರು.

‘ರೈತರ ಹಿತಕ್ಕಾಗಿ ಹೋರಾಡಿ ಪ್ರಾಣ ಕಳೆದುಕೊಂಡ ರೈತರ ನೆನಪಿಗಾಗಿ ‘ರೈತ ಹುತಾತ್ಮ ದಿನ’ ರಾಜ್ಯಮಟ್ಟದ ಕಾರ್ಯಕ್ರಮವನ್ನು ಜುಲೈ 21ರಂದು ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲ ರೈತ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಯು ರೈತರನ್ನು ವಂಚಿಸುತ್ತಿರುವ ಬಗ್ಗೆ ಕಬ್ಬು ಬೆಳೆಗಾರರಿಗೆ ಜಾಗೃತಿ ಮೂಡಿಸಲು ಇದೇ 18ರಂದು ಬಣ್ಣಾರಿ ಕಾರ್ಖಾನೆ ಹೋರಾಟ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ವಕೀಲ ರವಿಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.