ADVERTISEMENT

ಏಕಕಾಲಕ್ಕೆ BJP, ಕಾಂಗ್ರೆಸ್ ಪ್ರತಿಭಟನೆ; ‘ಅಘೋಷಿತ ನಿಷೇಧಾಜ್ಞೆ’, ಜನರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 11:33 IST
Last Updated 12 ಜುಲೈ 2024, 11:33 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ಮೈಸೂರಿನ ಮುಡಾ ಕಚೇರಿ ಸಮೀಪದ ಎಂಜಿನಿಯರ್‌ಗಳ ಸಂಸ್ಥೆಯ ಎದುರಿನ ಜೆಎಲ್‌ಬಿ ರಸ್ತೆಯಲ್ಲಿ ಶುಕ್ರವಾರ ಪ್ರತಿಭಟನೆ&nbsp;ನಡೆಸಿದರು</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ಮೈಸೂರಿನ ಮುಡಾ ಕಚೇರಿ ಸಮೀಪದ ಎಂಜಿನಿಯರ್‌ಗಳ ಸಂಸ್ಥೆಯ ಎದುರಿನ ಜೆಎಲ್‌ಬಿ ರಸ್ತೆಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು

   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತು ಬಿಜೆಪಿಯವರ ವಿರುದ್ಧ ಕಾಂಗ್ರೆಸ್‌ನವರು ಶುಕ್ರವಾರ ಏಕಕಾಲಕ್ಕೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಕಚೇರಿಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಕೈಗೊಂಡಿದ್ದ ‘ಅಘೋಷಿತ ನಿಷೇಧಾಜ್ಞೆ’ಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು.

ಮುಡಾ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಬಿಜೆಪಿಯವರು ಘೋಷಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯವರಿಗೆ ಮುತ್ತಿಗೆ ಹಾಕುವುದಾಗಿ ಕಾಂಗ್ರೆಸ್‌ನವರು ಘೋಷಿಸಿದ್ದರು. ಬಿಜೆಪಿಯವರು ಕ್ರಾಫರ್ಡ್‌ ಹಾಲ್‌ ಬಳಿ ಪ್ರತಿಭಟಿಸಿದರೆ, ಕಾಂಗ್ರೆಸ್‌ನವರು ಮುಡಾ ಪಕ್ಕದಲ್ಲೇ ಇರುವ ಎಂಜಿನಿಯರ್‌ಗಳ ಸಂಸ್ಥೆಯ ಎದುರಿನ ಪಾದಚಾರಿ ಮಾರ್ಗದಲ್ಲಿ ಪೆಂಡಾಲ್‌ ಹಾಕಿ ರಸ್ತೆಯಲ್ಲೇ ಪ್ರತಿಭಟಿಸಿದರು. ಇದರಿಂದಾಗಿ, ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಡಿಸಿಪಿಗಳು, ಡಿವೈಎಸ್‌ಪಿಗಳು, ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 400ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮುಡಾ ಸಂಪರ್ಕಿಸುವ ಮಾರ್ಗಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ಸಂಚಾರ ನಿರ್ಬಂಧಿಸಿದ್ದರು.

ADVERTISEMENT

ಪ್ರಮುಖ ಮಾರ್ಗಗಳಾದ ಜೆಎಲ್‌ಬಿ ರಸ್ತೆಯಲ್ಲಿ ರಾಮಸ್ವಾಮಿ ವೃತ್ತದಿಂದ ಮೆಟ್ರೋ‍ಪೋಲ್ ವೃತ್ತದವರೆಗೆ, ರಾಧಾಕೃಷ್ಣ ಅವೆನ್ಯೂ ರಸ್ತೆಯಿಂದ ಕುಕ್ಕರಹಳ್ಳಿ ಕೆರೆ ಸಮೀಪದ ರೈಲ್ವೆ ಕ್ರಾಸಿಂಗ್‌ವರೆಗೆ, ರಾಮಸ್ವಾಮಿ ವೃತ್ತದಿಂದ ಅಗ್ನಿಶಾಮಕದಳದವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಪಾದಚಾರಿಗಳಿಗೂ ಅವಕಾಶ ಕೊಡಲಿಲ್ಲ! ಇದರಿಂದಾಗಿ, ಈ ಭಾಗದಲ್ಲಿರುವ ವಿವಿಧ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳಿಗೆ, ಅಂಗಡಿಗಳಿಗೆ ತೆರಳುವವರಿಗೆ ತೀವ್ರ ತೊಂದರೆಯಾಯಿತು.

ಮಹಾರಾಜ ಕಾಲೇಜು, ಯುವರಾಜ ಕಾಲೇಜು, ಮಹಾರಾಜ ಪ್ರೌಢಶಾಲೆ, ಮಹಾರಾಜ ಪಿಯು ಕಾಲೇಜು, ಮಹಾರಾಣಿ ವಿಜ್ಞಾನ ಹಾಗೂ ಕಲಾ ಕಾಲೇಜುಗಳಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ತೀವ್ರ ತೊಂದರೆ ಅನುಭವಿಸಿದರು.

‘ನಾವು ಕಾಲೇಜಿಗೆ ಹೋಗಬೇಕು’ ಎಂದು ಮನವಿ ಮಾಡಿಕೊಂಡರೂ, ಗುರುತಿನ ಚೀಟಿ ತೋರಿಸಿದರೂ ಪೊಲೀಸರು ಸ್ಪಂದಿಸಲಿಲ್ಲ. ಪರ್ಯಾಯ ಮಾರ್ಗಗಳಲ್ಲಿ ಸುತ್ತಿಬಳಸಿ ಕಾಲೇಜು ಸೇರಲು ಅವರು ಪರದಾಡಬೇಕಾಯಿತು. ಪ್ರತಿಭಟನೆಗಳ ವರದಿಗೆ ತೆರಳುತ್ತಿದ್ದ ಮಾಧ್ಯಮ ಪ್ರತಿನಿಧಿಗಳಿಗೂ ಪೊಲೀಸರು ಪ್ರವೇಶ ನೀಡದೆ ತೊಂದರೆ ಕೊಟ್ಟರು.

ಮುಡಾ ಕಚೇರಿಯ ಸುತ್ತಮುತ್ತಲಿನ ರಸ್ತೆಗಳಲ್ಲಿ ‘ಬ್ಯಾರಿಕೇಡ್ ಕೋಟೆ’ ಹಾಕಿದ್ದರಿಂದಾಗಿ ನಗರದಿಂದ ಹುಣಸೂರು, ಮಡಿಕೇರಿ, ಬೋಗಾದಿ, ಗದ್ದಿಗೆ ಕಡೆಗೆ ಹೋಗುವವರು, ಮಡಿಕೇರಿ, ಬೋಗಾದಿ, ಗದ್ದಿಗೆ ಮೊದಲಾದ ಕಡೆಗಳಿಂದ ನಗರಕ್ಕೆ ಬರುತ್ತಿದ್ದ ಪ್ರಯಾಣಿಕರಿಗೂ ಬಹಳ ತೊಂದರೆಯಾಯಿತು. ಪರ್ಯಾಯ ರಸ್ತೆಗಳಲ್ಲಿ ವಾಹನಗಳು ಸಂಚರಿಸಿದ್ದರಿಂದ ಅಲ್ಲಿ ವಾಹನದಟ್ಟಣೆ ಉಂಟಾಯಿತು.

ಮುಡಾ ಕಚೇರಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ಬೆಳಿಗ್ಗೆ 9ರ ಸುಮಾರಿಗೆ ಏಕಮುಖ ಸಂಚಾರಕ್ಕೆ ಅವಕಾಶವಿತ್ತು. 9.30ರ ನಂತರ ಸಂಪೂರ್ಣ ಬಂದ್ ಮಾಡಲಾಯಿತು. ಮಧ್ಯಾಹ್ನ 3ರವರೆಗೂ ವಾಹನಗಳ ಸಂಚಾರಕ್ಕೆ ಹಾಗೂ ಸಾರ್ವಜನಿಕರ ಓಡಾಟಕ್ಕೆ ಪೊಲೀಸರು ಅವಕಾಶ ಕೊಡಲಿಲ್ಲ. ಪೊಲೀಸರ ಈ ಕ್ರಮದ ಬಗ್ಗೆ ಸಾರ್ವಜನಿಕರು ಹಿಡಿಶಾಪ ಹಾಕಿದರು. ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಪೊಲೀಸರು ಮುಂಚಿತವಾಗಿ ಸಾರ್ವಜನಿಕ ಪ್ರಕಟಣೆಯನ್ನೂ ಕೊಟ್ಟಿರಲಿಲ್ಲ! ಎಂದಿನಂತೆ ನಿತ್ಯದ ಕೆಲಸಗಳಿಗೆ, ಕಾಲೇಜುಗಳಿಗೆ ತೆರಳುವವರು ಪರದಾಡಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.