ಮೈಸೂರು: ‘ಮುಡಾದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಡೆದಿರುವ ಬದಲಿ ನಿವೇಶನಗಳು ಹೆಚ್ಚು ಬೆಲೆ ಬಾಳುವವು ಎಂಬ ಬಿಜೆಪಿ ಆರೋಪದ ನಡುವೆ ಮೈಸೂರಿನ ಜನತೆಗೆ ವಂಚನೆ ಮತ್ತು ನಷ್ಟವಾಗುತ್ತಿದೆ. ಪ್ರಮುಖ ವಿಷಯ ಮರೆಯಾಗುತ್ತಿದೆ’ ಎಂದು ಸರ್ವೋದಯ ಕರ್ನಾಟಕ ಪಕ್ಷದ ಉಗ್ರನರಸಿಂಹಗೌಡ ದೂರಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಸಿದ್ದರಾಮಯ್ಯ ರಾಜಕೀಯ ಜೀವನದುದ್ದಕ್ಕೂ ಕಾಪಾಡಿಕೊಂಡು ಬಂದ ಘನತೆಗೆ ಧಕ್ಕೆ ಬಂದು, ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬಂತಾಗಿದೆ’ ಎಂದು ಹೇಳಿದ್ದಾರೆ.
‘ಮುಡಾದಲ್ಲಿ ನಡೆದಿರುವ ₹ 3ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ವಂಚನೆ ಆ ಸಂಸ್ಥೆಯ ಆರ್ಥಿಕ ಸಧೃಡತೆಯನ್ನೇ ಕಸಿದು ನಾಶ ಮಾಡುವಂಥದ್ದು ಹಾಗೂ ಸಾವಿರಾರು ನಿವೇಶನಾಕಾಂಕ್ಷಿ ಕುಟುಂಬಗಳ ಜೀವಮಾನದ ಕನಸಿಗೆ ಕೊಳ್ಳಿ ಇಟ್ಟಿದ್ದೂ ಹೌದು’ ಎಂದು ಹೇಳಿದ್ದಾರೆ.
‘ಮುಖ್ಯಮಂತ್ರಿಯು, ಪತ್ನಿಗೆ ಯಾವ ಸರ್ಕಾರದ ಅವಧಿಯಲ್ಲೇ ಪರ್ಯಾಯ ನಿವೇಶನ ಕೊಟ್ಟಿದ್ದರೂ, ಹಂಚಿಕೆಯ ನೈತಿಕತೆ ಆಧರಿಸಿ ಮುಡಾಕ್ಕೆ ನಿವೇಶನಗಳನ್ನು ಹಿಂದಿರುಗಿಸಬೇಕು. ಇಂತಹ ದುರ್ಲಭ ರಾಜಕೀಯ ಪರಿಸ್ಥಿತಿಯಲ್ಲಿ 2ನೇ ಬಾರಿಗೆ ಮುಖ್ಯಮಂತ್ರಿ ಮಾಡಿದ ರಾಜ್ಯದ ಜನರ ಅಭಿಮಾನ ಭಂಗಪಡಿಸದೆ ಮುಡಾ ಅಕ್ರಮಗಳ ಸಮಗ್ರ ತನಿಖೆ ಮಾಡಿಸಬೇಕು. ತಮ್ಮ ಅಧಿಕಾರ ರಾಜಕೀಯ ಜೀವನದ ಕೊನೆಯ ವರ್ಷಗಳನ್ನು ಕಳಂಕರಹಿತ ಆಡಳಿತವಾಗಿ ನಿರ್ವಹಿಸಿ ಘನತೆಯಿಂದ ನಿರ್ಗಮಿಸಬೇಕು. ಇದು ರಾಜ್ಯದ ಜನರ ಸಾಂವಿಧಾನಿಕ ಆಗ್ರಹ ಮತ್ತು ಪ್ರೀತಿಯ ಒತ್ತಾಯವಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.