ADVERTISEMENT

ಮುಡಾ ನಿವೇಶನ | ನಾನು ಸಿಎಂ ಇದ್ದಾಗಲೇ ಪತ್ನಿ ಅರ್ಜಿ ಕೊಟ್ಟಿದ್ದರು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 6:09 IST
Last Updated 7 ಆಗಸ್ಟ್ 2024, 6:09 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ಜಮೀನನ್ನು ಬಡಾವಣೆಗೆ ಬಳಸಿಕೊಂಡಿದ್ದಕ್ಕೆ ಪ್ರತಿಯಾಗಿ ಬದಲಿ ನಿವೇಶನ ನೀಡುವಂತೆ ನನ್ನ ಪತ್ನಿ ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಅರ್ಜಿ ಕೊಟ್ಟಿದ್ದಳು. ಆದರೆ, ನಾನು ಕೊಡಿಸಿರಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ನಮ್ಮ ಜಮೀನನ್ನು ಒತ್ತುವರಿ ಮಾಡಿಕೊಂಡು ನಿವೇಶನ ಮಾಡಿ ಹಂಚಿಬಿಟ್ಟಿದ್ದೀರಿ, ಅದಕ್ಕಾಗಿ ಬದಲಿ ನಿವೇಶನ ಕೊಡಿ ಎಂದು ನನ್ನ ಹೆಂಡತಿ 2014ರಲ್ಲೇ ಅಂದರೆ ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಮುಡಾಕ್ಕೆ ಅರ್ಜಿ ಕೊಟ್ಟಿದ್ದಳು. ನಾನು ಮುಖ್ಯಮಂತ್ರಿ ಆಗಿರುವವರೆಗೂ ಬದಲಿ ನಿವೇಶನ ಕೊಡಕೂಡದೆಂದು ಮುಡಾದವರಿಗೆ ಹೇಳಿದ್ದೆ. ಒಂದು ಗುಂಟೆಯನ್ನೂ ಕೊಡಬೇಡಿ ಎಂದು ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿದ್ದೆ’ ಎಂದು ಹೇಳಿದರು.

‘ನಾನೇ ಮುಖ್ಯಮಂತ್ರಿ ಆಗಿದ್ದರಿಂದ ಆಗಲೇ ಕೊಟ್ಟು ಬಿಡಬಹುದಿತ್ತಲ್ಲವಾ? ಕೊಡಲಿಲ್ಲ. ಪ್ರಭಾವ ಬಳಸುವುದಿದ್ದರೆ ಅಂದೇ ಬಳಸುತ್ತಿದ್ದೆ. ಆದರೆ, ಹಾಗೆ ಮಾಡಲಿಲ್ಲ’ ಎಂದರು.

ADVERTISEMENT

‘ಮತ್ತೆ 2021ರಲ್ಲಿ ಅರ್ಜಿ ಕೊಟ್ಟಿದ್ದಳು. ಆಗ ಬಿಜೆಪಿ ಅಧಿಕಾರದಲ್ಲಿತ್ತು. ಆಗ ನಾನು ಪ್ರಭಾವ ಬೀರಲು ಹೇಗೆ ಸಾಧ್ಯ? ಎಲ್ಲವೂ ಕಾನೂನುಪ್ರಕಾರ ಇದ್ದಿದ್ದರಿಂದ ಬದಲಿ ನಿವೇಶನ ಕೊಟ್ಟಿದ್ದಾರಷ್ಟೆ. ಇದೆಲ್ಲ ವಿವರಣೆಯನ್ನೂ ರಾಜ್ಯಪಾಲರಿಗೆ ನೀಡಿದ್ದೇನೆ. ಕಾನೂನು ಪ್ರಕಾರ ಇರುವುದರಿಂದ ಅದನ್ನೆಲ್ಲಾ ಒಪ್ಪುತ್ತಾರೆಂಬ ನಂಬಿಕೆ ನನಗಿದೆ. ಅವರು ಕಾನೂನಿನಂತೆ ನಡೆದುಕೊಳ್ಳಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.