ಮೈಸೂರು: ವಿದ್ವಾಂಸ ಟಿ.ವಿ.ವೆಂಕಟಾಚಲ ಶಾಸ್ತ್ರಿ ಅವರಿಗೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯು ಮಂಗಳವಾರ ‘ಮುದ್ದುರಾಮ ಪ್ರಶಸ್ತಿ’ ಪ್ರದಾನ ಮಾಡಿದರು.
ಮುದ್ದುರಾಮ ಪ್ರತಿಷ್ಠಾನದಿಂದ ಇಲ್ಲಿನ ಜೆಎಸ್ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.
ಪ್ರಶಸ್ತಿಯು ₹ 50 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಇದೇ ವೇಳೆ ಪ್ರತಿಷ್ಠಾನದ ಅಧ್ಯಕ್ಷ ಕೆ.ಸಿ.ಶಿವಪ್ಪ ಅವರ 1,008 ಚೌಪದಿಗಳನ್ನು ಒಳಗೊಂಡ ‘ಮುದ್ದುರಾಮ ಮಂಜರಿ’ ಕೃತಿಯೂ ಬಿಡುಗಡೆಯಾಯಿತು.
ಕೃತಿ ಕುರಿತು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ‘ಎಲ್ಲರಿಗೂ ಒಳಿತು ಬಯಸುವುದೇ ಕಾವ್ಯದ ಉದ್ದೇಶ. ಅದನ್ನು ಗ್ರಹಿಸುವುದು ಆಯಾ ಕಾಲಘಟ್ಟವನ್ನು ಅವಲಂಬಿಸಿರುತ್ತದೆ’ ಎಂದರು.
‘ಕಾವ್ಯ ಓದಿದರೆ ಏನು ಸಿಗುತ್ತದೆ ಎಂಬ ಪ್ರಶ್ನೆ ಇಂದು ಹೆಚ್ಚುತ್ತಿದೆ. ಮುದ್ದುರಾಮ ಕೃತಿಗಳನ್ನು ಓದಿದಾಗ ಬದುಕಿನಲ್ಲಿ ಯಾವುದು ಆನಂದ, ಜೀವನದ ಗುರಿಯೇನು ಎಂಬುದು ತಿಳಿಯುತ್ತದೆ. ಮನುಷ್ಯ ಜೀವನದ ಸಾರ್ಥಕತೆಗೆ ಅಗತ್ಯವಾದ ಕವನಗಳು ಇಲ್ಲಿವೆ. ಕೃತಿಯು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ’ ಎಂದು ಶ್ಲಾಘಿಸಿದರು.
ಸಂಸ್ಕೃತ ವಿದ್ವಾಂಸ ಎಚ್.ವಿ.ನಾಗರಾಜ ರಾವ್, ‘1995ರಲ್ಲಿ ಚಿಕಾಗೊ ವಿಶ್ವವಿದ್ಯಾಲಯದಲ್ಲಿದ್ದ ಶೆಲ್ಡನ್ ಪೋಲಕ್ ಎಂಬ ವಿದ್ವಾಂಸ, ಪಂಪನ ವಿಕ್ರಮಾರ್ಜುನ ವಿಜಯದ ಬಗ್ಗೆ ತಿಳಿದುಕೊಳ್ಳಲು ಮೈಸೂರಿಗೆ ಬಂದು ವೆಂಕಟಾಚಲ ಶಾಸ್ತ್ರಿ ಅವರ ಬಳಿ 8 ತಿಂಗಳು ಅಭ್ಯಾಸ ಮಾಡಿದ್ದರು. ಇದು ಶಾಸ್ತ್ರಿಗಳ ವಿದ್ವತ್ತನ್ನು ತೋರುತ್ತದೆ’ ಎಂದರು.
ವಾಗ್ಮಿ ಹಿರೇಮಗಳೂರು ಕಣ್ಣನ್ ಮಾತನಾಡಿ, ‘ಕಾವ್ಯಾಸಕ್ತಿಯಿದ್ದಾಗ ಮಾತ್ರ ಕಾವ್ಯದ ಆಸ್ವಾದನೆ ಸಾಧ್ಯ. ಮುದ್ದುರಾಮ ಚೌಪದಿಗಳು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಹೊಂದಿವೆ’ ಎಂದು ತಿಳಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಕೆ.ಸಿ.ಶಿವಪ್ಪ, ಕಾರ್ಯದರ್ಶಿ ಆರ್.ಎ.ಚೇತನ ರಾಮ್, ಉಪಾಧ್ಯಕ್ಷ ನೀಲಗಿರಿ ತಳವಾರ, ಸಹಕಾರ್ಯದರ್ಶಿ ನ. ರವಿಕುಮಾರ್ ಹಾಜರಿದ್ದರು.
ಕೃತಿ ಪರಿಚಯ
ಕೃತಿ: ಮುದ್ದುರಾಮ ಮಂಜರಿ
ಲೇಖಕ: ಕೆ.ಸಿ.ಶಿವಪ್ಪ
ಪುಟಗಳು: 295
ಬೆಲೆ: ₹250
ಪ್ರಕಾಶನ: ಮುದ್ದುರಾಮ ಪ್ರತಿಷ್ಠಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.