ADVERTISEMENT

ಮುಂಬೈಗೆ ಕೆಎಸ್‌ಆರ್‌ಟಿಸಿ ಐಶಾರಾಮಿ ಬಸ್‌

ಅಂತರರಾಜ್ಯ ಐಶಾರಾಮಿ ಬಸ್‌ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 19:58 IST
Last Updated 10 ಜೂನ್ 2019, 19:58 IST
ಮೈಸೂರು–ಮುಂಬೈ ಐಶಾರಾಮಿ ಬಸ್‌ ಸೌಲಭ್ಯಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು
ಮೈಸೂರು–ಮುಂಬೈ ಐಶಾರಾಮಿ ಬಸ್‌ ಸೌಲಭ್ಯಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು   

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಿಂದ ಮುಂಬೈಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ಅಂತರರಾಜ್ಯ ಐಶಾರಾಮಿ ಬಸ್‌ ಸೌಲಭ್ಯ ಆರಂಭಿಸಿದೆ.

ಮೈಸೂರು ಗ್ರಾಮಾಂತರ ವಿಭಾಗದ ವತಿಯಿಂದ ಐರಾವತ ಅಂಬಾರಿ ಡ್ರೀಮ್‌ ಕ್ಲಾಸ್‌ ಮಾದರಿಯ ಎಸಿ ಸ್ಲೀಪರ್‌ ವಾಹನಕ್ಕೆ ಸೋಮವಾರ ಚಾಲನೆ ಲಭಿಸಿತು. ಈ ಹಿಂದೆ ಐರಾವತ ಕ್ಲಬ್‌ ಕ್ಲಾಸ್‌ ಸೌಲಭ್ಯವಿತ್ತು.

ನಿತ್ಯ ಮಧ್ಯಾಹ್ನ 1 ಗಂಟೆಗೆ ಮೈಸೂರಿನಿಂದ ಹೊರಟು ಕೆ.ಆರ್‌.ಪೇಟೆ, ಶ್ರವಣಬೆಳಗೊಳ, ಅರಸೀಕೆರೆ, ಶಿವಮೊಗ್ಗ, ಹರಿಹರ, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ಕೊಲ್ಲಾಪುರ, ಪುಣೆ ಮಾರ್ಗವಾಗಿ ಮಾರನೇ ದಿನ ಬೆಳಿಗ್ಗೆ 9 ಗಂಟೆಗೆ ಮುಂಬೈ ತಲುಪುತ್ತದೆ. ಹಾಗೆಯೇ, ಮುಂಬೈನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮಾರನೇ ದಿನ ಬೆಳಿಗ್ಗೆ 9ಕ್ಕೆ ಮೈಸೂರಿಗೆ ಬರಲಿದೆ. 1,100 ಕಿ.ಮೀ ದೂರದ 20 ಗಂಟೆಯ ಒಂದು ಕಡೆಯ ಪ್ರಯಾಣ ದರ ₹ 2,000 ಇರಲಿದೆ. ಈ ಬಸ್‌ 40 ಸೀಟುಗಳ ಸೌಲಭ್ಯ ಹೊಂದಿದೆ.

ADVERTISEMENT

‘ಕೇಂದ್ರ ಕಚೇರಿಯಿಂದ ನೂತನ ಎರಡು ಐಶಾರಾಮಿ ಬಸ್‌ಗಳನ್ನು ಒದಗಿಸಲಾಗಿದೆ. ಆ ಎರಡೂ ಬಸ್‌ಗಳು ಮೈಸೂರು–ಮುಂಬೈ ಮಧ್ಯೆ ಸಂಚರಿಸಲಿವೆ. ಮೊದಲ ದಿನವೇ ಎಲ್ಲಾ ಸೀಟುಗಳು ಭರ್ತಿಯಾಗಿದ್ದವು. ಶೀಘ್ರದಲ್ಲೇ ಮತ್ತಷ್ಟು ಬಸ್‌ಗಳು ಲಭಿಸಲಿದ್ದು, ಬೆಳಗಾವಿ, ಚೆನ್ನೈ, ಹೈ ದರಾಬಾದ್‌ಗೆ ಸಂಪರ್ಕ ಸೌಲಭ್ಯ ಕಲ್ಪಿಸಲಾಗುವುದು’ ಎಂದು ವಿಭಾ ಗೀಯ ನಿಯಂತ್ರಣಾಧಿಕಾರಿ ಆರ್.ಅಶೋಕ್‌ ಕುಮಾರ್‌ ‘ಪ್ರಜಾವಾಣಿ‍’ಗೆ ತಿಳಿಸಿದರು.

ಕೆಎಸ್‌ಆರ್‌ಟಿಸಿ ಮುಖ್ಯ ಭದ್ರತಾ ಹಾಗೂ ಜಾಗೃತಿ ಅಧಿಕಾರಿ ಲಿಂಗರಾಜು, ಡಿಪೋ ವ್ಯವಸ್ಥಾಪಕ ಮಹೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.